ಕನಿಷ್ಟ ಐದನೇ ತರಗತಿಯವರೆಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಗೆ (New Education policy) ಕೇಂದ್ರ ಸರ್ಕಾರವು ಬುಧವಾರ ಒಪ್ಪಿಗೆ ನೀಡಿದೆ. 34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರ್ಕಾರವು ಅನುಮೋದನೆ ನೀಡಿದೆ.
5ನೇ ತರಗತಿಯವರೆಗೆ ಪ್ರಾದೇಶಿಕ ಅಥವಾ ಮಾತೃಭಾಷೆಯಲ್ಲಿ (Regional language) ಶಿಕ್ಷಣ ನೀಡಿಕೆ ಕಡ್ಡಾಯ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕರೂಪದ ನಿಯಂತ್ರಕ ವ್ಯವಸ್ಥೆ ಜಾರಿ ಸೇರಿದಂತೆ ಮುಂತಾದ ವಿಷಯಗಳು ಹೊಸ ನೀತಿಯಲ್ಲಿವೆ.
ಪ್ರಾದೇಶಿಕ ಭಾಷಾ ಮಾಧ್ಯಮಕ್ಕೆ ಒತ್ತು:
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರೀ-ನರ್ಸರಿಯಿಂದ 5ರ ವರೆಗೆ ವಿದ್ಯಾರ್ಥಿಗಳು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಕಲಿಯಲು ಅವಕಾಶ ಕಲ್ಪಿಸಿದೆ. ಇದನ್ನು 8ನೇ ತರಗತಿವರೆಗೆ ಮುಂದುವರಿಸಬಹುದು ಇದರ ಅಭಿಪ್ರಾಯ. ದೇಶಾದ್ಯಂತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡು, ಸಂಸ್ಕೃತವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಕನ್ನಡ ಸಹಿತ ದೇಶದಲ್ಲಿರುವ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೊಂದಿರುವ ಭಾಷೆಗಳನ್ನು ಕೂಡ ಮಕ್ಕಳಿಗೆ ಐಚ್ಛಿಕವಾಗಿ ನೀಡಲಾಗುತ್ತದೆ. ಆದರೆ ಯಾವುದೇ ವಿದ್ಯಾರ್ಥಿ ಮೇಲೆ ಯಾವುದೇ ಭಾಷೆಯನ್ನು ಹೇರಬಾರದು ಎಂದೂ ಸೂಚಿಸಲಾಗಿದೆ.
5+3+3+4
ಈಗ ಶಿಕ್ಷಣ ವ್ಯವಸ್ಥೆ 10+2 ನಿಯಮದಡಿ ಕಾರ್ಯ ನಿರ್ವ ಹಿಸುತ್ತಿತ್ತು. ಅದನ್ನು ಈಗ 5+3+3+4 ಎಂದು ಬದಲಾಯಿಸಲಾಗಿದೆ. ಈಗ ಮೂರು ವರ್ಷದ ಪ್ರೀ-ಪ್ರೈಮರಿ ಅಥವಾ ಅಂಗನವಾಡಿ ಹಾಗೂ 1ನೇ ಹಾಗೂ 2ನೇ ತರಗತಿಯನ್ನು ‘ಅಡಿಪಾಯದ ಹಂತ’, ಆನಂತರದ 3, 4 ಹಾಗೂ 5ನೇ ತರಗತಿಗಳನ್ನು ‘ಪೂರ್ವಭಾವಿ ಹಂತ’ ಎಂದೂ 6, 7 ಮತ್ತು 8ನೇ ತರಗತಿಗಳನ್ನು ‘ಮಾಧ್ಯಮಿಕ ಹಂತ’ ಎಂದೂ ಕರೆಯಲಾಗುತ್ತದೆ. 9ರಿಂದ 12ನೇ ತರಗತಿ ವರೆಗೆ “ಪ್ರೌಢ ಶಿಕ್ಷಣ ಹಂತ’ ಎಂದು ಕರೆಯಲಾಗುತ್ತದೆ.
ಎಚ್‌ಆರ್‌ಡಿ ಹೆಸರು ಬದಲು:
ಕೇಂದ್ರ ಮಾನವ ಸಂಪದ ಅಭಿವೃದ್ಧಿ (HRD) ಇಲಾಖೆ ಹೆಸರನ್ನು ಕೇಂದ್ರ ಶಿಕ್ಷಣ ಇಲಾಖೆ ಎಂದು ಬದಲಿಸುವ ಪ್ರಸ್ತಾವನೆಗೆ ಬುಧವಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನೇ ಹೆಚ್ಚಾಗಿ ಇದು ನಿರ್ವಹಿಸುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
Share your comments