ಬೀದರ್ ಜಿಲ್ಲೆ ಮತ್ತು ಅದೇ ತಾಲೂಕಿನ ಚಿಟ್ಟಾ ಗ್ರಾಮದ ಕಬ್ಬಿನ ಗದ್ದೆಯೊಂದು ಕೃಷಿಕರ ಆಕರ್ಷಣೆಯ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ದಿನ ನೂರಾರು ರೈತರು ಈ ಕಬ್ಬಿನ ಗದ್ದೆಗೆ ಭೇಟಿ ನೀಡುತ್ತಿದ್ದಾರೆ. ಬೀದರ್ ಸುತ್ತ ಮುತ್ತಲ ಹಳ್ಳಿ, ಪಟ್ಟಣಗಳು ಮಾತ್ರವಲ್ಲದೆ, ಮಂಡ್ಯ, ಮೈಸೂರು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಂದಲೂ ರೈತರು ತಂಡೋಪ ತಂಡವಾಗಿ ಕಬ್ಬು ಬೆಳೆ ವೀಕ್ಷಿಸಲು ಬರುತ್ತಿರುವುದು ವಿಶೇಷ.
ಈ ಕಬ್ಬಿನ ಗದ್ದೆಯಲ್ಲಿ ಅಂಥದ್ದೇನಿದೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿ ಅಂಥದ್ದೇನೂ ವಿಶೇಷವಿಲ್ಲ. ಆದರೆ, ಈ ಹೊಲದ ಮಾಲೀಕ, ಪ್ರಗತಿಪರ ರೈತ ಜಾಫರ್ ಮಿಯಾ ಅವರು ಒಂದು ಎಕರೆಯಲ್ಲಿ 200 ಟನ್ ಕಬ್ಬು ಬೆಳೆಯುವುದಾಗಿ ಮಾಧ್ಯಮ ಒಂದರ ಮುಂದೆ ಘೋಷಿಸಿದ್ದಾರೆ. ಇದು ರೈತರು ಅವರ ಕಬ್ಬಿನ ಗದ್ದೆ ನೋಡಲು ಮುಗಿಬಿದ್ದಿರಲು ಕಾರಣ. ಚಿಕ್ಕಂದಿನಿAದಲೂ ಕೃಷಿ ಕಾಯಕ ಮಾಡಿಕೊಂಡು ಬಂದಿರುವ ಜಾಫರ್ ಮಿಯಾ, ಎಲ್ಲರಂತೆ ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುವುದಿಲ್ಲ. ಬದಲಿಗೆ ಪ್ರತಿ ಬೆಳೆಯಲ್ಲೂ ವಿಭಿನ್ನ ಪದ್ಧತಿಗಳನ್ನು ಅನುಸರಿಸುವ ಮೂಲಕ ಉತ್ತಮ ಇಳುವರಿ ಪಡೆದು ಗಮನಸೆಳೆದಿದ್ದಾರೆ.
ಈ ಬಾರಿ ತಮ್ಮ 3 ಎಕರೆ ಜಮೀನಿನಲ್ಲಿ ಕಬ್ಬು ನಾಟಿ ಮಾಡಿರುವ ಜಾಫರ್ ಮಿಯಾ, ಒಂದು ಎಕರೆಯಿಂದ 200 ಟನ್, ಒಟ್ಟಾರೆ 600 ಟನ್ ಕಬ್ಬು ಇಳುವರಿ ತೆಗೆಯುವ ಗುರಿ ಹಾಕಿಕೊಂಡಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜಾಫರ್ ಮಿಯಾ, ಕಬ್ಬಿನೊಂದಿಗೆ ಟೊಮೇಟೊ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎಲ್ಲ ಕಬ್ಬು ಬೆಳೆಗಾರರು ಸಾಲುಗಳ ನಡುವೆ ಅರ್ಧ ಅಥವಾ ಒಂದು ಅಡಿ ಜಾಗ ಬಿಟ್ಟು ಕಬ್ಬು ನಾಟಿ ಮಾಡಿದರೆ, ಜಾಫರ್ ಅವರು ಒಂದು ಸಾಲಿನಿಂದ ಮತ್ತೊಂದು ಸಾಲಿಗೆ 5.5 ಅಡಿ ಅಂತರ ನೀಡಿ ನಾಟಿ ಮಾಡಿದ್ದಾರೆ. ಜೊತೆಗೆ ಬೆಳೆಗೆ ಅಗತ್ಯ ನೀರು ಪೂರೈಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.
ನೀರಿನ ಸಮಗ್ರ ವಿತರಣೆ
ಕಬ್ಬು ಬೆಳೆಯುವ ಕೃಷಿಕರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ. ಆದರೆ, ಈ ಪದ್ಧತಿ ಅಳವಡಿಕೆಯಲ್ಲೂ ಹೊಸತನ ಅನುಸರಿಸಿರುವ ರೈತ ಜಾಫರ್ ಮಿಯಾ, ಒಂದು ಹನಿ ನೀರು ನಾಲ್ಕು ಕಬ್ಬಿನ ಸಸಿಗಳಿಗೆ ಸಮ ಪ್ರಮಾಣದಲ್ಲಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ನೀರು ಪೋಲಾಗುವುದನ್ನು ತಪ್ಪಿಸಿದ್ದು, ಕಡಿಮೆ ನೀರಿನಲ್ಲಿ ಕಬ್ಬು ಬೆಳೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ಬೆಳೆಗೆ ರಾಸಾಯನಿಕ ಗೊಬ್ಬರ ನೀಡುತ್ತಿಲ್ಲ. ಬದಲಿಗೆ ಸಾವಯವ ಗೊಬ್ಬರ ಬಳಸುತ್ತಾರೆ. ಕಬ್ಬಿನ ಸಾಲುಗಳ ನಡುವೆ ಐದೂವರೆ ಅಡಿ ಅಂತರ ನೀಡಿರುವುದರಿಂದ ಬೆಳೆಗೆ ಸೂರ್ಯನ ಬಿಸಿಲು ಭರಪೂರವಾಗಿ ಸಿಗುತ್ತದೆ. ಇದರಿಂದ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬುದು ರೈತನ ಅಭಿಪ್ರಾಯ.
ಈಗ್ಗೆ 25 ವರ್ಷಗಳ ಹಿಂದೆ ಜಾಫರ್ ಅವರು ತಮ್ಮ ತಂದೆಯವರೊAದಿಗೆ ಕಬ್ಬು ಬೆಳೆಯುತ್ತಿದ್ದರು. ಆ ಬಳಿಕ ಕಬ್ಬು ಬೆಳೆಯುವ ಸಾಹಸ ಮಾಡಿರಲಿಲ್ಲ. ಆದರೆ ಈಗ ವಿನೂತನ ಪದ್ಧತಿಯೊಂದಿಗೆ ಕಬ್ಬು ಬೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮುಖ್ಯವಾಗಿ ಎಲ್ಲರಿಗಿಂತಲೂ ಅತಿ ಹೆಚ್ಚು ಇಳುವರಿ ತೆಗೆದು ದಾಖಲೆ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ.
ಸಾಧಿಸುವ ಬಗ್ಗೆ ಅಚಲ ವಿಶ್ವಾಸ
ತಾವು ಹಾಕಿಕೊಂಡಿರುವ ಎಕರೆಗೆ 200 ಟನ್ ಕಬ್ಬು ಇಳುವರಿ ತೆಗೆಯುವ ಗುರಿಯನ್ನು ಸಾಧಿಸುವ ಬಗ್ಗೆ ಜಾಫರ್ ಮಿಯಾ ಅವರಿಗೆ ಅಚಲ ವಿಶ್ವಾಸವಿದೆ. ‘ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ರೈತರು ನಮ್ಮ ಹೊಲಕ್ಕೆ ಭೇಟಿ ನೀಡಿ, ಕಬ್ಬು ಬೆಳೆಯನ್ನು ವೀಕ್ಷಿಸುತ್ತಿದ್ದಾರೆ. ಹೀಗೆ ಭೇಟಿ ನೀಡಿದವರಲ್ಲಿ ಹಲವರು ‘ನೀವು 200 ಟನ್ ಕಬ್ಬು ಬೆಳೆಯುತ್ತೀರ’ ಎಂದು ಹೇಳುವ ಮೂಲಕ ನನಗೆ ಆತ್ಮವಿಶ್ವಾಸ ತುಂಬಿದ್ದಾರೆ. ಹಾಗೇ, ಕೆಲವರು ಎಕರೆಗೆ 150 ಟನ್ ಇಳುವರಿಯಂತೂ ಪಕ್ಕಾ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು 100 ಟನ್‌ಗಂತೂ ಮೋಸವಿಲ್ಲ ಎನ್ನುತ್ತಿದ್ದಾರೆ. ಆದರೆ 25 ವರ್ಷಗಳ ಹಿಂದೆ ಕಬ್ಬು ಬೆಳೆದಾಗ ನಾನು ಎಕರೆಗೆ 98 ಟನ್ ಇಳುವರಿ ತೆಗೆದಿದ್ದೆ. ಹೀಗಾಗಿ ಈ ಬಾರಿ 200 ಟನ್ ಇಳುವರಿ ತೆಗೆದೇ ತೆಗೆಯುತ್ತೇನೆ,’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಜಾಫರ್ ಮಿಯಾ.
ಆದಾಯಕ್ಕೆ ಹಲವು ಮೂಲ
ಚಿಟ್ಟಾ ಗ್ರಾಮದ ರೈತ ಜಾಫರ್ ಮಿಯಾ ಓದಿರುವುದು ಹತ್ತನೇ ತರಗತಿ ಆದರೂ, ಕೃಷಿ, ಹೈನುಗಾರಿಕೆಯಲ್ಲಿ ಇವರು ಮಾಡುತ್ತಿರುವ ಪ್ರಯೋಗಗಳು ಹಾಗೂ ಸಾಧಿಸಿರುವ ಪ್ರಗತಿ ಯಾರಿಗೂ ಕಡಿಮೆ ಇಲ್ಲ. 10 ಎಕರೆ ಜಮೀನಿನಲ್ಲಿ ಅರಣ್ಯ ಇಲಾಖೆ ಸಹಾಯದಿಂದ 1,200 ಶ್ರೀಗಂಧದ ಮರ, ತೋಟಗಾರಿಕೆ ಇಲಾಖೆ ನೆರವಿನಿಂದ 900 ಸೀತಾ ಫಲ ಮತ್ತು ಮಾವಿನ ಮರಗಳನ್ನು ಮಿಯಾ ಬೆಳೆಸಿದ್ದಾರೆ. ಎಲ್ಲಾ ಬೆಳೆಗಳ ಫಸಲು ಕೈಸೇರುವ ಹಂತದಲ್ಲಿದ್ದು, ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಕಬ್ಬು ಬೆಳೆಯುತ್ತಾರೆ, ಜೇನು ಸಾಕಾಣಿಕೆ, ಎಮ್ಮೆ ಕರುಗಳ ಸಾಕಣೆ ಮಾಡುತ್ತಿದ್ದಾರೆ. ಕರುಗಳನ್ನು ಉತ್ತಮವಾಗಿ ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಆಡು ಸಾಕಣೆ ಮಾಡುವ ಮೂಲಕವೂ ಆದಾಯ ಗಳಿಸುತ್ತಿದ್ದಾರೆ.
ಜಾಫರ್‌ರ ಕಬ್ಬು ಬೆಳೆ ಹೇಗಿದೆ?
ಜಾಫರ್ ಮಿಯಾ ಅವರ ಕಬ್ಬಿನ ಬೆಳೆ ನೋಡಿದವರು 4 ತಿಂಗಳ ಬೆಳೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಕಬ್ಬು ನಾಟಿ ಮಾಡಿ ಕೇವಲ ಎರಡು ತಿಂಗಳು ಕಳೆದಿವೆ. ಅಂದರೆ, ಅವರು ಅನುಸರಿಸುತ್ತಿರುವ ಸಮಗ್ರ ಕೃಷಿ ಪದ್ಧತಿ ಮತ್ತು ಸಾಲುಗಳ ನಡುವೆ 5.5 ಅಡಿ ಅಂತರ ನೀಡಿರುವುದು ಫಲ ನೀಡುತ್ತಿದ್ದು, ಎರಡೇ ತಿಂಗಳಿಗೆ ಕಬ್ಬು ಹುಲುಸಾಗಿ ಬೆಳೆದು ನಿಂತಿದೆ. ಬೆಳೆ ಹುಲುಸಾಗಿ ಬೆಳೆದಂತೆ ಮಿಯಾ ಅವರ ವಿಶ್ವಾಸ ಮತ್ತಷ್ಟು ದೃಢವಾಗುತ್ತಾ ಸಾಗಿದೆ.
ಕೃಪೆ: ವಿಕ ವೆಬ್
Share your comments