ಪ್ರತಿ ಗ್ರಾಮದಲ್ಲಿ 100 ರಾಸುಗಳಂತೆ ಒಂದು ಜಿಲ್ಲೆಯ 500 ಗ್ರಾಮಗಳಲ್ಲಿ 50,000 ರಾಸುಗಳನ್ನು ಕೃತಕ ಗರ್ಭಧಾರಣೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಪ್ರತಿ ರಾಸುವಿಗೆ ಮೂರು ಬಾರಿ ಕೃತಕ ಗರ್ಭಧಾರಣೆಯನ್ನು ಕೈಗೊಳ್ಳಲಾಗುತ್ತದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ಅವರು ಬೀದರ್ ಜಿಲ್ಲೆಯ ಔರಾದ ತಾಲೂಕಿನಲ್ಲಿ 2ನೇ ಸುತ್ತಿನ “ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಸು ಮತ್ತು ಎಮ್ಮೆಗಳಲ್ಲಿ ಕೃತಕ ಗರ್ಭಧಾರಣೆ (artificial insemination) ಕಾರ್ಯಕ್ರಮದ ಪ್ರಗತಿ ಶೇ. 50ಕ್ಕಿಂತ ಕಡಿಮೆ ಇರುವ ರಾಜ್ಯದ 17 ಜಿಲ್ಲೆಗಳಲ್ಲಿ (ಬಾಗಲಕೋಟೆ, ಬಳ್ಳಾರಿ, ಬೀದರ, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ಕೊಡಗು, ಕಲಬುರಗಿ, ಶಿವಮೊಗ್ಗಾ, ವಿಜಯಪುರ, ರಾಯಚೂರು, ಯಾದಗಿರಿ ಮತ್ತು ಉತ್ತರಕನ್ನಡ ) ರೈತರ ಮನೆ ಬಾಗಿಲಿನಲ್ಲಿ ಉಚಿತವಾಗಿ ಕೃತಕ ಗರ್ಭಧಾರಣೆ ಸೇವೆ ಒದಗಿಸುವುದು, ಉತ್ಕೃಷ್ಟ ಗುಣಮಟ್ಟದ ಕರುಗಳ ಜನನ, ಹೆಚ್ಚಿನ ಹಾಲು ಉತ್ಪಾದನೆ, ಹೆಚ್ಚು ಹೆಚ್ಚು ರೈತರಿಗೆ ಕೃತಕ ಗರ್ಭಧಾರಣೆ ತಂತ್ರಜ್ಞಾನವನ್ನು ತಲುಪಿಸುವುದು ಮತ್ತು ಈ ಮೂಲಕ ರೈತರ ಆದಾಯ ಮಟ್ಟವನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ ಭಾರತ ಸರ್ಕಾರದ “ರಾಷ್ಟ್ರೀಯ ಗೋಕುಲ್ ಮಿಷನ್”ಯೋಜನೆಯಡಿ ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮವನ್ನು ಭಾರತ ಸರ್ಕಾರದ ಶೇ. 100 ರಷ್ಟು ಆರ್ಥಿಕ ನೆರವಿನಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಳಿ ಉನ್ನತೀಕರಣಕ್ಕಾಗಿ ರೈತರ ಬಳಿ ಇರುವ ಅನಿರ್ದಿಷ್ಟ ಮತ್ತು ಮಿಶ್ರತಳಿ ಹಸು (Cow) ಹಾಗೂ ಎಮ್ಮೆ(Buffalo) ಗಳಲ್ಲಿ ಉತ್ಕೃಷ್ಟ ಗುಣಮಟ್ಟದ ದೇಶಿ ಮತ್ತು ವಿದೇಶಿ ತಳಿ ಹೋರಿಗಳ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಸದರಿ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಪ್ರತಿ ಕೃತಕ ಗರ್ಭಧಾರಣೆಗೆ 50 ರೂ. ಮತ್ತು ಪ್ರತಿ ಕರುವಿನ ಜನನಕ್ಕೆ 100 ರೂ. ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ: ರೈತರು ಆರ್ಥಿಕವಾಗಿ ಮುಂದೆ ಬರಲು ಪಶುಸಂಗೋಪನೆ ಮಾಡಲು ಆಸಕ್ತಿ ತೋರುತ್ತಾರೆ. ಈಗಾಗಲೇ ಬಹಳಷ್ಟು ಜನರು ಪಶು ಸಂಗೋಪನೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ರೈತರ ಕರೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಸಚಿವರು ತಿಳಿಸಿದರು.
Share your comments