ಅಡಿಕೆಗೆ ಮತ್ತೇ ಬಂಗಾರದ ಬೆಲೆ ಬಂದಿದೆ. ಇತೀಚೆಗೆ ಡಬಲ್ ಚೋಲ್ ಅಡಿಕೆ ಪ್ರತಿ ಕೆ.ಜಿ.ಗೆ 430ರಿಂದ 460, ಸಿಂಗಲ್ ಚೋಲ್ಗೆ 425ರಿಂದ 455 ಹಾಗೂ ಹೊಸ ಅಡಿಕೆಗೆ 345ರಿಂದ 395 ಬೆಲೆ ಹೆಚ್ಚಾಗಿ ದಾಖಲೆ ಸೃಷ್ಟಿಸಿತ್ತು. ಈಗ ಬುಧವಾರ ಮತ್ತೆ ಕೆ.ಜಿ.ಗೆ 500ರ ಗಡಿ ದಾಟಿದ್ದು, ಕ್ಯಾಂಪ್ಕೊ ಸಾರ್ವಕಾಲಿಕ ಅಧಿಕ ಬೆಲೆಗೆ ಖರೀದಿ ನಡೆಸಿದೆ.
ಕ್ಯಾಂಪ್ಕೊ ಡಬಲ್ ಚೋಲ್ (ಜನತಾ ಜನತಾ–ಗ್ರೇಡ್) ಅಡಿಕೆಯನ್ನು ಕೆ.ಜಿಗೆ 505 ರಂತೆ ಖರೀದಿಸಿದರೆ, ಸಿಂಗಲ್ ಚೋಲ್ಗೆ (ಜನತಾ ಜನತಾ–ಗ್ರೇಡ್) 500 ನೀಡಿದೆ. ಅಲ್ಲದೆ, ಹೊಸ ಅಡಿಕೆಗೆ 415 ನೀಡಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
‘1973ರಲ್ಲಿ ಕ್ಯಾಂಪ್ಕೊ ಸ್ಥಾಪನೆಯಾಗಿದ್ದು, ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಕೆ.ಜಿ.ಗೆ 500ಕ್ಕೂ ಅಧಿಕ ಬೆಲೆಗೆ ಅಡಿಕೆ ಖರೀದಿಸಿದೆ. ಇಳುವರಿ ಶೇ 40ರಷ್ಟು ಇಳಿಕೆ, ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಆಮದಿನ ಮೇಲೆ ಕೇಂದ್ರ ಸರ್ಕಾರ ಹೇರಿದ ನಿಯಂತ್ರಣದಿಂದ ಈ ಬೆಲೆ ಬಂದಿದೆ. ಮಾರುಕಟ್ಟೆ ಯಲ್ಲಿ ಬೇಡಿಕೆ ಇರುವ ತನಕ ಕ್ಯಾಂಪ್ಕೊ ಕೃಷಿಕರಿಗೆ ಗರಿಷ್ಠ ಬೆಲೆ ನೀಡಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ, ವಿದೇಶದಿಂದ ಅಕ್ರಮವಾಗಿ ಬರುತ್ತಿದ್ದ ಅಡಿಕೆಗೆ ಕೋವಿಡ್–19 ಸಂದರ್ಭದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಧಾರಣೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯು ಅಡಿಕೆಗೆ ಉತ್ತಮ ಧಾರಣೆ ನೀಡುತ್ತಿರುವ ಪರಿಣಾಮ, ಖಾಸಗಿ ವರ್ತಕರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.
Share your comments