ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ. ಮಾರುಕಟ್ಟೆಯಲ್ಲಿ ದಿಡೀರನೆ ಅಡಿಕೆ ಬೆಲೆ ಹೆಚ್ಚಾಗಿದ್ದರಿಂದ ಅಡಿಕೆ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೌದು ಡಬಲ್ ಚೋಲ್ ಅಡಿಕೆ ಪ್ರತಿ ಕೆ.ಜಿ.ಗೆ 430ರಿಂದ 460, ಸಿಂಗಲ್ ಚೋಲ್ಗೆ 425ರಿಂದ 455 ಹಾಗೂ ಹೊಸ ಅಡಿಕೆಗೆ 345ರಿಂದ 395 ಬೆಲೆ ಹೆಚ್ಚಾಗಿದೆ.
ಕಳೆದ ತಿಂಗಳು ಸಹ ಅಡಿಕೆ ಬೆಲೆ ಹೆಚ್ಚಾಗಿತ್ತು. ನಂತರ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದಿಲ್ಲ. ಆದರೆ ಈಗ ದಿಡೀರನೆ ಬೆಲೆ ಹೆಚ್ಚಳವಾಗಿದೆ. 2020ರ ನವೆಂಬರ್ನಲ್ಲಿ ಸಿಂಗಲ್ ಚೋಲ್ ಅಡಿಕೆಗೆ 290, ಡಬಲ್ ಚೋಲ್ಗೆ 300 ಧಾರಣೆ ಇತ್ತು.
ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ, ವಿದೇಶದಿಂದ ಅಕ್ರಮವಾಗಿ ಬರುತ್ತಿದ್ದ ಅಡಿಕೆಗೆ ಕೋವಿಡ್–19 ಸಂದರ್ಭದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಧಾರಣೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯು ಅಡಿಕೆಗೆ ಉತ್ತಮ ಧಾರಣೆ ನೀಡುತ್ತಿರುವ ಪರಿಣಾಮ, ಖಾಸಗಿ ವರ್ತಕರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.
‘ಅಡಿಕೆಗೆ ಕೊಳೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಧಾರಣೆ ಹೆಚ್ಚಳವಾಗಿದ್ದರೂ, ಅಡಿಕೆ ದಾಸ್ತಾನು ಇಲ್ಲ’ ಎಂದು ಕೃಷಿಕರು ಹೇಳುತ್ತಿದ್ದಾರೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಳೆ ಇಳುವರಿಯೂ ಕಡಿಮೆಯಾಗಿತ್ತು. ‘ಅಡಿಕೆ ಇಳುವರಿ ಶೇ 40ರಷ್ಟು ಕಡಿಮೆ ಇದ್ದು, ದಾಸ್ತಾನು ಕುಸಿದಿದೆ. ಹೀಗಾಗಿಯೂ ಧಾರಣೆ ಹೆಚ್ಚಾಗಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
Share your comments