ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಹಾಗೂ ಗೋ ಹತ್ಯೆ ಮಾಡುವವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನು ರೂಪಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಸೂಚಿಸಿದೆ. ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಎಂದು ಹೇಳಿರುವ ಹೈಕೋರ್ಟ್, ದನದ ಮಾಂಸ ತಿನ್ನುವವರಿಗೆ ಮಾತ್ರವೇ ಮೂಲಭೂತ ಹಕ್ಕುಗಳು ಇರುವುದಿಲ್ಲ. ಗೋವನ್ನು ಪೂಜಿಸುವವರು, ಜೀವನ ನಿರ್ವಹಣೆಗೆ ಗೋವು ಸಾಕುತ್ತಿರುವವರಿಗೂ ಹಕ್ಕುಗಳು ಇವೆ. ಕೊಲ್ಲುವ ಹಕ್ಕಿಗಿಂತಲೂ, ಬದುಕುವ ಹಕ್ಕು ಬಹಳ ದೊಡ್ಡದು ಎಂದು ಅಲಹಾಬಾದ್ ಕೋರ್ಟ್ ಹೇಳಿದೆ.
ಗೋವುಗಳನ್ನು ಸಂರಕ್ಷಣೆ ಮಾಡಬೇಕಾದವರು ಅದನ್ನು ಮಾಡುತ್ತಿಲ್ಲ. ಅದೇ ರೀತಿ ಗೋವುಗಳ ಸಂರಕ್ಷಣೆ ಹೆಸರಿನಲ್ಲಿ ಖಾಸಗಿ ಗೋಶಾಲೆಗಳು ಸಾರ್ವಜನಿಕರಿಂದ ದೇಣಿಗೆ ಮತ್ತು ಸರ್ಕಾರದಿಂದ ಸಹಾಯ ಪಡೆದು ಕೆಲವರು ತಮ್ಮ ಹಿತಾಸಕ್ತಿಗೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ
ನೆಲದ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾದರೆ ದೇಶವು ದುರ್ಬಲಗೊಳ್ಳುತ್ತದೆ. ಹಾಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿ ಆಗಿಸಿ, ಅದರ ರಕ್ಷಣೆಯ ಹೊಣೆಯನ್ನು ಹಿಂದೂಗಳ ಮೂಲಭೂತ ಕರ್ತವ್ಯವಾಗಿಸುವುದು ಸೂಕ್ತ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಕ್ರಮಗೋವು ಸಾಗಣೆ, ಅವುಗಳ ಹತ್ಯೆಯಲ್ಲಿ ನಿರತನಾಗಿದ್ದ ಆರೋಪಿ ಜಾವೇದ್ ಎಂಬಾತನಿಗೆ ಜಾಮೀನು ತಿರಸ್ಕರಿಸುವ ವೇಳೆ ಹೈಕೋರ್ಟ್ ಈ ರೀತಿ ಹೇಳಿದೆ. ಆರೋಪಿಯು ಹಲವು ಬಾರಿ ಇಂಥ ಕೃತ್ಯಗಳನ್ನು ಎಸಗಿದ್ದಾನೆ. ಅದರಿಂದ ಸಮಾಜದ ಸ್ವಾಸ್ಥ್ಯ ಕೆಟ್ಟಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದೆ. ಜಾಮೀನು ನೀಡಿದಲ್ಲಿ ಆತ ಪುನಃ ಗೋವಿನ ಹತ್ಯೆಗೈದು ಸಮಾಜದಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡುತ್ತಾನೆ. ಹಾಗಾಗಿ ಜಾಮೀನು ನೀಡಲ್ಲ ಎಂದು ನ್ಯಾ. ಶೇಖರ ಕುಮಾರ್ ಯಾದವ್ ಹೇಳಿದ್ದಾರೆ.
ಗೋವಿಗೆ ಮೂಲಭೂತ ಹಕ್ಕು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಸೂದೆ ಮಂಡಿಸಬೇಕು ಎಂದಿರುವ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋವಿಗೆ ಸಮಸ್ಯೆ ಉಂಟು ಮಾಡುವವರಿಗೆ ಶಿಕ್ಷೆ ವಿಧಿಸುವ ಸಂಬಂಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದಿದೆ.
ಅಲ್ಲದೇ ದನದ ಮಾಂಸ ತಿನ್ನುವವರಿಗೆ ಮಾತ್ರವೇ ಮೂಲಭೂತ ಹಕ್ಕುಗಳು ಇರುವುದಿಲ್ಲ. ಗೋವನ್ನು ಪೂಜಿಸುವವರು, ಜೀವನ ನಿರ್ವಹಣೆಗೆ ಗೋವು ಸಾಕುತ್ತಿರುವವರಿಗೂ ಹಕ್ಕುಗಳು ಇವೆ. ಕೊಲ್ಲುವ ಹಕ್ಕಿಗಿಂತಲೂ, ಬದುಕುವ ಹಕ್ಕು ಬಹಳ ದೊಡ್ಡದು ಎಂದು ಅಲಹಾಬಾದ್ ಕೋರ್ಟ್ ಹೇಳಿದೆ.
“ಗೋ ಸಂರಕ್ಷಣೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಗೋವು ಭಾರತದ ಸಂಸ್ಕೃತಿಯಾಗಿದ್ದು, ಧರ್ಮ ಮೀರಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲರೂ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು. ಗೋವಿಗೆ ಒಳಿತಾದಾಗ ಮಾತ್ರ ದೇಶಕ್ಕೆ ಒಳಿತಾಗಲಿದೆ” ಎಂದು ಜಾಮೀನು ನಿರಾಕರಣೆ ಆದೇಶದಲ್ಲಿ ನ್ಯಾಯಮೂರ್ತಿ ಹೇಳಿದ್ದಾರೆ. ಗೋ ವಧೆ ನಿಯಂತ್ರಣ ಕಾಯಿದೆಯ ಸೆಕ್ಷನ್ 3, 5 ಮತ್ತು 8ರ ಅಡಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.
ವಿಭಿನ್ನ ಧರ್ಮಕ್ಕೆ ಸೇರಿದ ಎಲ್ಲರೂ ನೆಲೆಸಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪ್ರತಿಯೊಬ್ಬರು ಒಂದೊಂದು ದೇವರನ್ನು ಪೂಜಿಸಬಹುದು. ಆದರೆ ದೇಶದ ದೃಷ್ಟಿಯಿಂದ ಅವರೆಲ್ಲರ ಆಲೋಚನೆ ಒಂದೇ ರೀತಿಯಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
Share your comments