1. ಸುದ್ದಿಗಳು

ನಟ ಪುನೀತ್‌ ರಾಜ್‌ಕುಮಾರ್‌ಗೆ ವಿಭಿನ್ನ ನಮನ ಸಲ್ಲಿಸಿದ ರೈತ

Hitesh
Hitesh
puneeth rajkumar
  • ರೈತರು ಡೀಸೆಲ್‌ ಖರೀದಿಸಲು 1,250 ರೂ.ಸಹಾಯಧನ ಶೀಘ್ರ
  • ನಟ ಪುನೀತ್‌ ರಾಜ್‌ಕುಮಾರ್‌ಗೆ ವಿಭಿನ್ನ ನಮನ ಸಲ್ಲಿಸಿದ ರೈತ
  • ಮಹದಾಯಿನದಿ ಯೋಜನೆ: ಗೋವಾ ವಿಧಾನಸಭೆಯಲ್ಲಿ ಕೋಲಾಹಲ
  •  ವಿದ್ಯುತ್‌ ಕಳವು ಮಾಡುತ್ತಿದ್ದವರಿಂದ ಬರೋಬ್ಬರಿ 2.59 ಕೋಟಿ ಸಂಗ್ರಹ
  • ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕಾಂಗ್ರೆಸ್‌ ಭರವಸೆ!
  • ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ: ಇಬ್ಬರು ಸಾವು
  • ರಾಜ್ಯದ ಕಾಡಂಚಿನಲ್ಲಿ ಮಾನವ- ಪ್ರಾಣಿ ಸಂಘರ್ಷ ಹೆಚ್ಚಳ!
  • ರಾಜ್ಯದಲ್ಲಿ ಅಂಗಾಂಗ ದಾನ ಹೆಚ್ಚಳ: 389 ಜನರಿಗೆ ಮರುಜೀವ
  • ಸಾವಯವ ಈಶಾನ್ಯ ಎಕ್ಸ್‌ಪೋ ಫೆ.3ಕ್ಕೆ
  • ಫಿಟ್ ಇಂಡಿಯಾ: ಹೆಲ್ತಿ ಹಿಂದೂಸ್ತಾನ್ ಟಾಕ್ ಸೀರಿಸ್ ಪ್ರಾರಂಭ

ಸುದ್ದಿಗಳ ವಿವರ ಈ ರೀತಿ ಇದೆ.

ರೈತಾಪಿ ಕೃಷಿಕರ ಮೇಲಿನ ಹೊರೆ ತಪ್ಪಿಸಲು ಬಜೆಟ್‌ನಲ್ಲಿ ಘೋಷಿಸಿ
ದಂತೆ ರೈತ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ ಚಾಲನೆ‌ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ತಿಳಿಸಿದ್ದಾರೆ. ಪ್ರತಿ ಎಕರೆಗೆ 250 ರೂಪಾಯಿಯಂತೆ ಗರಿಷ್ಠ ಐದು ಎಕರೆಗೆ 1,250 ರೂಪಾಯಿಯಂತೆ ನೇರ ನಗದು ವರ್ಗಾವಣೆ ಮೂಲಕ ಡೀಸೆಲ್‌ಗೆ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಗೆ ಇದೇ ತಿಂಗಳ ಅಂತ್ಯದಲ್ಲಿ ಚಾಲನೆ‌ ನೀಡಲಿದ್ದಾರೆ ಎಂದರು. ಈ ಕುರಿತು ಮಾತನಾಡಿದ ಅವರು, 45 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಮುಖ್ಯಮಂತ್ರಿ ಸಹಾಯಧನ ಬಿಡುಗಡೆ ಮಾಡಲಿದ್ದಾರೆ. ಇಲಾಖೆಯ ಎಲ್ಲ ಯೋಜನೆಗಳನ್ನು ಫ್ರುಟ್ಸ್‌ ವೆಬ್‌ಸೈಟ್‌ ಮೂಲಕ ರೈತರ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ಎಲ್ಲ ರೈತರಿಗೆ ರೈತ ಶಕ್ತಿ ಯೋಜನೆಯನ್ನು ಸಹ ಇದೇ ತಂತ್ರಾಂಶ ಬಳಸಿ ಅನುಷ್ಠಾನ ಮಾಡಲಾಗುತ್ತಿದೆ. ರೈತರು ಪ್ರತ್ಯೇಕವಾಗಿ ಅರ್ಜಿಸಲ್ಲಿಸುವ ಅಗತ್ಯವಿಲ್ಲ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶದ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುವುದು. ವೆಬ್‌ಸೈಟ್‌ನಲ್ಲಿ ನಮೂದಿಸಿದ ಕೃಷಿ ಭೂಮಿಯ ವಿಸ್ತೀರ್ಣದ ಆಧಾರದಲ್ಲಿ ರೈತರ ಖಾತೆಗೆ ಡೀಸೆಲ್‌ ಸಹಾಯಧನ‌ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

---------------

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮಂಡ್ಯದ ರೈತರೊಬ್ಬರು ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ಮಾಡಿದ ಒಳ್ಳೆ ಕೆಲಸಗಳು ಹಾಗೂ ಅವರ ನಿಸ್ವಾರ್ಥ ಸೇವೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಇನ್ನು ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಭತ್ತದಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು ಎಂದು ತಮ್ಮ ಜಮೀನಿನಲ್ಲಿ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಭತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಜಾಗದಲ್ಲಿ ಈಗ ಪೈರು ಬೆಳೆದು ನಿಂತಿದ್ದು, ಇದೀಗ ಹಸಿರು ಮಯವಾಗಿ ಕಾಣಿಸುತ್ತಿದೆ. ಸುತ್ತಮುತ್ತಲಿನ ಜನ ಇಲ್ಲಿ ಬಂದು ಪೋಟೊ ತೆಗೆದುಕೊಳ್ಳುತ್ತಿದ್ದಾರೆ.

---------------

ಮಹದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೋವಾ ಮೊದಲಿನಿಂದಲೂ ತಕರಾರು ತೆಗೆಯುತ್ತಿದ್ದು, ಇದೀಗ ಗೋವಾದಲ್ಲಿ ವಿವಾದ ತೀವ್ರವಾಗಿದೆ. ಚಳಿಗಾಲದ ಅಧಿವೇಶನದ ಮೊದಲ ದಿನ ಗೋವಾ ವಿಧಾನಸಭೆಯಲ್ಲಿ ಮಹದಾಯಿ ನದಿ ತಿರುವು ಯೋಜನೆ ಕುರಿತಾಗಿ ವಿರೋಧ ಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿವೆ. ಸೋಮವಾರ ಅಲ್ಲಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲು ಮುಂದಾದ ಅಲ್ಲಿನ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವಿಪಕ್ಷಗಳು ಯೋಜನೆ ವಿಚಾರವಾಗಿ ಮಾತನಾಡುವಂತೆ ಒತ್ತಾಯಿಸಿದವು. ಎರಡು ಅಣೆಕಟ್ಟುಗಳ ನಿರ್ಮಾಣಕ್ಕೆ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದ್ದು, ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಉತ್ತರ ಗೋವಾದ ಕೆಳಭಾಗದಲ್ಲಿರುವ ಮಹದಾಯಿ ವನ್ಯಜೀವಿಧಾಮದ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಕರ್ನಾಟಕ ಸರ್ಕಾರಕ್ಕೆ ಅಧಿಕಾರ ಇಲ್ಲ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕರ್ನಾಟಕವು ನೀರನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಗೋವಾ ಸರ್ಕಾರ ವಾದಿಸಿದೆ. ಸದನದಲ್ಲಿ ಕೋಲಾಹಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ರೆವಲ್ಯೂಷನರಿ ಗೋವನ್ಸ್‌ ಪಕ್ಷದ ಶಾಸಕ ವಿರೇಶ್ ಬೋರ್ಕರ್ ಅವರನ್ನು ಹೊರತುಪಡಿಸಿ ಎಲ್ಲಾ ಸದಸ್ಯರನ್ನು ಸದನದಿಂದ ಹೊರ ಹಾಕಿದರು. ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ರಾಜ್ಯಪಾಲರು ಭಾಷಣ ಮುಂದುವರಿಸಿದರು. . ಮಹದಾಯಿಯ ಉಪನದಿಗಳಾದ ಕಳಸಾ–ಬಂಡೂರಿಗೆ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ತಿರುಗಿಸಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳುವ ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ಗೋವಾ ನಡುವೆ ದೀರ್ಘ ಕಾಲದ ವಿವಾದ ಮನೆ ಮಾಡಿದೆ.
---------------

---------------

ವಿದ್ಯುತ್‌ ಕಳ್ಳತನ ಮಾಡುತ್ತಿದ್ದವರಿಗೆ ಬೆಸ್ಕಾಂ ಚುರುಕು ಮುಟ್ಟಿಸಿದ್ದು, 2.59 ಕೋಟಿ ದಂಡ ಸಂಗ್ರಹಿಸಿದೆ. ಈಗಾಗಲೇ ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂನ ಜಾಗೃತ ದಳ ಕಳೆದ 4 ತಿಂಗಳಲ್ಲಿ 10,908 ವಿದ್ಯುತ್ ಸ್ಥಾವರಗಳ ತಪಾಸಣೆ ನಡೆಸಿ, ಕಳ್ಳತನ ಮಾಡಿದ ಗ್ರಾಹಕರಿಗೆ ಬರೋಬ್ಬರಿ 2.59 ಕೋಟಿ ರೂಪಾಯಿ ದಂಡ ವಿಧಿಸಿದೆ. ಬಾಕಿ ವಿದ್ಯುತ್ ಬಿಲ್ ವಸೂಲಿಗೂ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1,417.45 ಕೋಟಿ ರೂಪಾಯಿಯಲ್ಲಿ 358.3 ಕೋಟಿ ರೂಪಾಯಿ ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
-------------------

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳು ಜನರನ್ನು ಸೆಳೆಯಲು ವಿಭಿನ್ನವಾದ ಪ್ರಣಾಳಿಕೆ ಹಾಗೂ ಭರವಸೆಗಳನ್ನು ನೀಡುತ್ತಿವೆ. ಈಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ಬಜೆಟ್‌ನಲ್ಲಿ ಗೃಹಿಣಿಯರ ಮನೆ ನಿರ್ವಹಣೆಗೆ ಆರ್ಥಿಕ ನೆರವು ಯೋಜನೆ ಅನುಷ್ಠಾನ ಮಾಡುವುದಾಗಿ ತಿಳಿಸಿದ್ದರು. ಇದೀಗ ಕಾಂಗ್ರೆಸ್‌ ಪ್ರತಿ ಕುಟುಂಬದಲ್ಲಿ ಒಬ್ಬ ಗೃಹಿಣಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಪ್ರಕಟಿಸಿದೆ. ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 'ನಾ ನಾಯಕಿ' ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಯೋಜನೆಗೆ ಸಂಬಂಧಿಸಿದ ಭಿತ್ತ ಪತ್ರ ಅನಾವರಣ ಮೂಲಕ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ. 2,000 ನೀಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 -------------------

ಶಿವಮೊಗ್ಗದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನ ಮಾಳೂರಿನಲ್ಲಿ ನಡೆದಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಂಗನಾಥ್‌ ಎಂಬವರು ಮೃತಪಟ್ಟಿದ್ದಾರೆ. ಸ್ಪರ್ಧೆ ನೋಡಲು ಹೋಗಿದ್ದಾಗ ಹೋರಿ ತಿವಿದು ಮೃತಪಟ್ಟಿದ್ದಾರೆ. ಅಲ್ಲದೆ ಮಾಳೂರಿನಲ್ಲಿ ಇನ್ನೂ ಇಬ್ಬರಿಗೆ ಗಾಯಗಳಾಗಿವೆ. ಶಿಕಾರಿಪುರ ತಾಲ್ಲೂಕಿನ ಮಾಳೂರಿನಲ್ಲಿ 32 ವರ್ಷದ ಲೋಕೇಶ್ ಮೃತಪಟ್ಟಿದ್ದಾರೆ. ಹೋರಿ ತಿವಿತದಿಂದ ಗಾಯಗೊಂಡಿದ್ದ ಲೋಕೇಶ್‌ ಆವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರು ಆಟೋ ಚಾಲಕರಾಗಿದ್ದರು.
-------------------

-------------------

ರಾಜ್ಯದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಜನ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನದಲ್ಲಿ ಆನೆಗಳ ದಾಳಿಯಿಂದ ಬೆದರಿದ್ದ ಜನಕ್ಕೆ ಇದೀಗ ಚಿರತೆಯ ಆತಂಕ ಎದುರಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕಿನ ಗ್ರಾಮಗಳ ವಸತಿ ಪ್ರದೇಶಗಳಿಗೆ ಚಿರತೆಗಳು ನುಗ್ಗುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ, ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಮತ್ತು ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿ ಚಿರತೆ ಪೀಡಿತ ಪ್ರದೇಶಗಳಾಗಿವೆ. ಚಿರತೆಗಳು ಆಗಾಗ್ಗೆ ಗ್ರಾಮಕ್ಕೆ ನುಗ್ಗಿ ಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡುವುದರಿಂದ ಇಲ್ಲಿನ ನಾಗಯ್ಯನ ಕೊಪ್ಪಲು ಜನ ಆತಂಕಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲಿಯೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ವಿಂಧ್ಯಗಿರಿಗೆ ಭೇಟಿ ನೀಡುವ ಪ್ರವಾಸಿಗರು ಆತಂಕ ಪಡುತ್ತಿದ್ದಾರೆ. ಉಪ ಅರಣ್ಯಸಂರಕ್ಷಣಾಧಿಕಾರಿ ಬಸವರಾಜ್ ಅವರು ಪ್ರತಿಕ್ರಿಯೆ ನೀಡಿ, ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಬೋನುಗಳನ್ನು ಇರಿಸಲಾಗಿದೆ. ಮಾರ್ಗಸೂಚಿಗಳನ್ನು ಅನುಸರಿಸಿ ಚಿರತೆ ದಾಳಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

-------------------

ರಾಜ್ಯದಲ್ಲಿ ಅಂಗಾಂಗ ದಾನ ಮಾಡುವರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ಒಂದೇ ವರ್ಷದಲ್ಲಿ 389 ಜನರಿಗೆ ಮರು ಜೀವ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 19 ಅಂಗಾಂಗ ದಾನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೂ ಮೊದಲು ರಾಜ್ಯದಲ್ಲಿ ಒಂದೇ ಅಂಗಾಗ ದಾನ ಕೇಂದ್ರ ಇತ್ತು ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ಇತರರ ಜೀವ ಉಳಿಸಬಹುದಾದ ಅಂಗಾಂಗ ದಾನದ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ಸಂಗತಿ. ಕಳೆದ ವರ್ಷ ನಡೆದ ಅಂಗಾಂಗ ದಾನಗಳಿಂದ ಸಂಕಷ್ಟದಲ್ಲಿದ್ದ 389 ಜನರಿಗೆ ಮರುಜೀವ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ. ಅಕಾಲಿಕ ಮರಣ ಅಥವಾ ಅಪಘಾತದಲ್ಲಿ ಮೃತಪಟ್ಟ 389 ಜನರ ಅಂಗಾಂಗಗಳನ್ನು ಅವರ ಕುಟುಂಬದವರ ಅನುಮತಿ ಪಡೆದು ಸಂಕಷ್ಟದಲ್ಲಿ ಇರುವವರಿಗೆ ಅಳವಡಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ 389 ಜನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
-------------------

ಸಿಕ್ಕಿಂ ರಾಜ್ಯ ಸಹಕಾರಿ ಸರಬರಾಜು ಮತ್ತು ಮಾರುಕಟ್ಟೆ ಫೆಡರೇಶನ್ ಲಿಮಿಟೆಡ್ ಆಯೋಜಿಸಿರುವ ಮೊದಲ ಸಾವಯವ ಈಶಾನ್ಯ ಎಕ್ಸ್‌ಪೋ 2023 ಫೆಬ್ರವರಿ 3 ರಿಂದ 5 ರವರೆಗೆ ಅಸ್ಸಾಂ ರಾಜಧಾನಿಯ ಖಾನಪಾರಾ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಅಸ್ಸಾಂ ಸರ್ಕಾರವು ಸಿಕ್ಕಿಂ ರಾಜ್ಯ ಸಹಕಾರಿ ಸರಬರಾಜು ಮತ್ತು ಮಾರುಕಟ್ಟೆ ಫೆಡರೇಶನ್ ಲಿಮಿಟೆಡ್ ಸಹಯೋಗದೊಂದಿಗೆ ಅಸ್ಸಾಂ ಮತ್ತು ಈಶಾನ್ಯ ಪ್ರದೇಶಗಳ ಸಾವಯವ ರೈತರನ್ನು ಗುರಿಯಾಗಿಸಲು ಮತ್ತು ಸಾವಯವ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಮೂರು ದಿನಗಳ ಕಾಲ ಈ ಎಕ್ಸ್‌ಪೋವನ್ನು ಆಯೋಜಿಸಿದೆ.

-------------------

ವಿಶ್ವ ಸಂಸ್ಥೆಯು 2023ನೇ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಭಾರತವು ಸಿರಿಧಾನ್ಯದ ಪ್ರಚಾರ ಹಾಗೂ ಜಾಗೃತಿ ಮೂಡಿಸುತ್ತಿದೆ. ಇದರ ಭಾಗವಾಗಿ ಆನ್‌ಲೈನ್ ಟಾಕ್ ಶೋ ಸರಣಿಯು 2023ರ ಜನವರಿ 22ರಿಂದ ಪ್ರಾರಂಭವಾಗಿ ಮಾರ್ಚ್ 12 ರವರೆಗೆ ನಡಯಲಿದೆ. ಫಿಟ್ ಇಂಡಿಯಾದ ಅಧಿಕೃತ ಯೂಟ್ಯೂಬ್ ಮತ್ತು ಇನ್ಸ್‌ಟಾಗ್ರಾಮ್‌ನಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಜನವರಿ 15ರ ಭಾನುವಾರ ಸದೃಢ ಭಾರತದ ಆರೋಗ್ಯಕರ ಹಿಂದೂಸ್ತಾನ ಟಾಕ್‌ಶೋ ಸರಣಿಗೆ ಚಾಲನೆ ನೀಡಿದರು.
-------------------

Published On: 17 January 2023, 03:00 PM English Summary: A farmer who paid a different tribute to actor Puneeth Rajkumar

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.