ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಒಟ್ಟು 25 ಗ್ರಾಮಗಳನ್ನು ಕಂಟೈನ್ಮೆಂಟ್ ಜೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ದಾವಣಗೆರೆ ತಾಲೂಕಿನ ಅಣಬೇರು, ಕುಕ್ಕುವಾಡ, ಕೈದಾಳೆ, ಕುರ್ಕಿ, ತುರ್ಚಘಟ್ಟ, ಬೇತೂರು, ಕಾಶೀಪುರ, ಮಳಲಕೆರೆ ಗ್ರಾಮಗಳು, ಹರಿಹರ ತಾಲೂಕಿನ ಗುತ್ತೂರು, ಕೆ.ಬೇವಿನಹಳ್ಳಿ, ನಂದಿತಾವರೆ, ಭಾನುವಳ್ಳಿ, ಹೊಳೆಸಿರಿಗೆರೆ, ಹಾಲಿವಾಣ ಗ್ರಾಮಗಳು, ಹೊನ್ನಾಳಿ ತಾಲೂಕಿನ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಗೊಲ್ಲರಹಳ್ಳಿ, ಐನೂರು ಗ್ರಾಮಗಳು, ನ್ಯಾಮತಿ ತಾಲೂಕಿನ ದಾನಿಹಳ್ಳಿ, ಕುಂಕೊವ, ಫಲವನಹಳ್ಳಿ, ಸುರಹೊನ್ನೆ ಗ್ರಾಮಗಳು, ಚನ್ನಗಿರಿ ತಾಲೂಕಿನ ಸಿದ್ಧನಮಠ ಗ್ರಾಮ ಹಾಗೂ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಗ್ರಾಮಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಕೊರೊನಾ ಸಾಂಕ್ರಮಿಕ ಸಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಿರುವ 25 ಗ್ರಾಮಗಳ ಜನರು ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ಕಾರಣಕ್ಕೂ ಗ್ರಾಮದಿಂದ ಹೊರ ಹೋಗುವಂತಿಲ್ಲ. ಜೊತೆಗೆ ಗ್ರಾಮದ ಒಳಗೂ ಅನಗತ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
6ರಿಂದ 10 ಪ್ರಕರಣಗಳಿರುವ 64 ಗ್ರಾಮಗಳಲ್ಲಿ ಸರ್ವೇಕ್ಷಣೆಯನ್ನು ತೀವ್ರಗೊಳಿದ್ದು, ಸ್ಥಳೀಯ ಗ್ರಾಮ ಪ್ರತಿನಿಧಿಗಳು, ಪಿಡಿಓಗಳ ಮೂಲಕ ಜಾಗೃತಿ ಮೂಡಿಸಿ, ಟೆಸ್ಟ್ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಜೂ.1 ರಂದು ಶೇ.23.47, ಜೂ.9 ರಂದು ಶೇ.12.65, ಜೂ.10ರಂದು ಶೇ.10.23, ಜೂ.11ರಂದು ಶೇ.6.81ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ಪ್ರಕರನ ದರ ಕಡಿಮೆಯಾಗುತ್ತಿದೆ. ಇದು ಹೀಗೇ ಮುಂದುವರಿಯಬೇಕು ಎಂದಾದರೆ ಸಾರ್ವಜನಿಕರು ಲಾಕ್‌ಡೌನ್ ಮತ್ತು ಕಂಟೈನ್ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದ ಅವರು, ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‌ಗಳು ಕುಂಟು ನೆಪ ಹೇಳಿ ಹೊರಗೆ ಓಡಾಡಕೂಡದು ಎಂದು ಮನವಿ ಮಾಡಿದರು.
21ರವರೆಗೆ ಲಾಕ್‌ಡೌನ್
ಈ ಹಿಂದಿನ ಮಾರ್ಗಸೂಚಿಯಂತೆ ಜೂನ್ 21ರವರೆಗೆ ಲಾಕ್‌ಡೌನ್‌ನ ಎಲ್ಲಾ ನಿರ್ಬಂಧಗಳು ಮುಂದುವರಿಯಲಿವೆ. ಜೂನ್ 14, 16, 18 ರಂದು ಬೆಳಗ್ಗೆ 6 ಗಂಟೆಯಿAದ ಮಧ್ಯಾಹ್ನ 12ರವರೆಗೆ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿ, ಮಾಂಸ, ಮೀನು ಹಾಗೂ ಮದ್ಯದ ಅಂಗಡಿಗಳು ತೆರೆದಿರಲಿವೆ. ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಲಸ, ಕಾಮಗಾರಿಗಳು, ಕಟ್ಟಡ ಕಾಮಗಾರಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳಾದ ಸಿಮೆಂಟ್, ಕಬ್ಬಿಣ, ಪೇಂಟ್, ಹಾರ್ಡ್ವೇರ್, ಗ್ಲಾಸ್, ಪ್ಲೇವುಡ್, ಸಾಮಿಲ್, ಎಲೆಕ್ಟಿçಕಲ್ಸ್, ಟೈಲ್ಸ್ ಅಥವಾ ಮಾರ್ಬಲ್ಸ್, ಸ್ಯಾನಿಟರಿ ವೈರ್ಸ್ ಅಂಗಡಿಗಳು ವಹಿವಾಟು ನಡೆಸಲು ಜೂನ್ 14, 16, 18 ರ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದರು.
ಇದರೊಂದಿಗೆ ನರೇಗಾ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜೂನ್ 14, 16, 18 ಹೊರತುಪಡಿಸಿ ಉಳಿದ ದಿನ ಹಾಲು ಮೊಟ್ಟೆ, ಮೆಡಿಕಲ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತರಕಾರಿ ಹಣ್ಣುಗಳನ್ನು ತಳ್ಳುಗಾಡಿ ಮುಖಾಂತರ ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು..
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಅಲ್ಲಿ ಸಿಬ್ಬಂದಿ ಸಮಖ್ಯೆ ಹೆಚ್ಚಿಸಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದ್ದು, ಹೋಮ್ ಗಾರ್ಡ್ಗಳ ನೇಮಕ ಮಾಡಲಾಗುವುದು. ಇದರೊಂದಿಗೆ ನಿಯಾಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರನ್ನು ಹಿಡಿದು ದಂಡ ವಿಧಿಸಿ ವಾಹನಗಳನ್ನು ಜಪ್ತಿ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಪ್ಯಾಟ್ರೋಲ್ ವಾಹನಗಳಿಂದ ಗಸ್ತು ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿದ್ದು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಜನದಟ್ಟನೆ ನಿಯಂತ್ರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈಗಾಗಲೇ 3,69,925 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಮಾಹಿತಿ ನೀಡಿದರು. ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಚ್‌ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‌ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
Share your comments