ಬಯಲುಸೀಮೆ ಭಾಗದ ಕೃಷಿಕರ ಉಪಯೋಗಕ್ಕಾಗಿ ಭದ್ರಾ ಜಲಾಶಯದಿಂದ 20 ಟಿಎಂಸಿ ನೀರು ನೀಡುವ ಉದ್ದೇಶದಿಂದ ಭದ್ರಾ ಮೇಲ್ಚಂಡೆ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ಈಗಾಗಲೇ ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಭಾಗದಲ್ಲಿ ಮೊದಲನೇ ಹಂತದ ಕೆಲಸ ಪೂರ್ಣಗೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು
ಭದ್ರಾ ಜಲಾಶಯ ಭರ್ತಿ ಆಗುವ ಹಂತ ತಲುಪಿದ್ದು, ನಾಲ್ಕೂ ಕ್ರಸ್ಟ್ ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ನಂತರ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಕಳೆದ 2 ವರ್ಷಗಳ ಅವಧಿಯಲ್ಲಿ ರಾಜ್ಯದ ಬೃಹತ್ ನೀರಾವರಿ ಇಲಾಖೆಯಿಂದ ಜಿಲ್ಲೆಗೆ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಗ್ರಾಮಾಂತರ ಭಾಗದಲ್ಲಿ 350 ಕೋಟಿ ಅನುದಾನದಲ್ಲಿ ಹೊಸಹಳ್ಳಿ ಏತನೀರಾವರಿ, ಸೊರಬ ತಾಲೂಕಿನ ಮೂಗೂರು, ಮೂಡಿ ಏತ ನೀರಾವರಿ, ಶಿಕಾರಿಪುರ ತಾಲೂಕಿನ ಉಡುಗಣಿ ತಾಳಗುಂದ ಹೊಸೂರು ಹೋಬಳಿ, ಬೈಂದೂರು ಕ್ಷೇತ್ರದ ಸಿದ್ದಾಪುರ ನೀರಾವರಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೆರೆಗಳಲ್ಲಿ ಹೂಳು ತೆಗೆಯುವುದು, ಕಾಲುವೆಗಳ ದುರಸ್ತಿ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿವೆ ಎಂದರು.
1940ರಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಭದ್ರಾ ಜಲಾಶಯವನ್ನು ನಿರ್ಮಿಸಲಾಗಿದ್ದು ಪ್ರಸ್ತುತ ಸುಮಾರು 2 ಲಕ್ಷ ಎಕರೆ ಪ್ರದೇಶಕ್ಕೆ ನಿರುಣಿಸುತ್ತಿದೆ. ರಾಜ್ಯದ ದೊಡ್ಡ ಜಲಾಶಯಗಳ ಪೈಕಿ ಭದ್ರಾ ಕೂಡ ಒಂದಾಗಿದ್ದು, ಇಂತಹ ಜಲಾಶಯ ಹೊಂದಿರುವ ಜಿಲ್ಲೆಯ ರೈತರಿಗೆ ನೀರಿನ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಗತ್ಯ ಕೆಲಸಗಳನ್ನು ಮಾಡಬೇಕು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಗದಗ, ವಿಜಯನಗರ ಸೇರಿ 8 ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರಾವರಿ ಕಲ್ಪಿಸಿರುವುದು ಹೆಮ್ಮೆಯ ವಿಚಾರ ಎಂದರು.
ಕಾಮಗಾರಿ ಗುಣಮಟ್ಟ ಮುಖ್ಯ
75 ಟಿಂಎAಸಿ ನೀರಿನ ಸಾಮಥ್ರ್ಯ ಹೊಂದಿರುವ ಭದ್ರಾ ಜಲಾಶಯ ರಾಜ್ಯದಲ್ಲಿ ಇರುವ ಬೃಹತ್ ಜಲಾಶಯಗಳಲ್ಲಿ ಒಂದಾಗಿದ್ದು, ಇಲ್ಲಿ ಗುಣಮಟ್ಟದ ಕಾಮಗಾರಿಗಳು ಆಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಜಲಾಶಯದಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಕೆಲ ಸಂಘಟನೆಗಳು ಪ್ರಶ್ನಿಸಿವೆ. ಅಂತಹ ತಪ್ಪುಗಳನ್ನು ತಿದ್ದಿಕೊಂಡು ಅಗತ್ಯವಿರುವ ಸಣ್ಣ ಪುಟ್ಟ ರಿಪೇರಿಗಳನ್ನು ಸಹ ಅತ್ಯಂತ ಎಚ್ಚರಿಕೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿ ಹೇಳಿದ ಸಂಸದರು, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೀರಾವರಿ ಸೇರಿ ಯಾವ ಇಲಾಖೆಗೂ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಲಿಲ್ಲ. ಆರ್ಥಿಕ ಸವಾಲಿನ ನಡುವೆಯೂ ಅಧಿಕಾರಿಗಳು ಎಲ್ಲ ಜಲಾಶಯಗಳ ವ್ಯಾಪ್ತಿಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಕೃಷಿ ಕ್ಲಸ್ಟರ್ ಆಗಲಿ
ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಕೃಷಿ ಕ್ಲಸ್ಟರ್ ಆಗಿ ಗುರುತಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕೆಲಸ ಕಾರ್ಯಗಳು ಜಿಲ್ಲೆಯಲ್ಲಿ ನಡೆಯಬೇಕು. ಇದಕ್ಕೆ ಅಧಿಕಾರಿಗಳು ಮುತುರ್ವ ವಹಿಸಬೇಕು ಎಂದು ಹೇಳಿದ ಸಂಸದ ರಾಘವೇಂದ್ರ ಅವರು, ಚನ್ನಪಟ್ಟಣವನ್ನು ಮರದ ಗೊಂಬೆ ತಯಾರಿಕೆಗೆ (ಬೊಂಬೆ ನಗರಿ), ಬೆಂಗಳೂರನ್ನು ಸಾಫ್ವೇರ್ ಕ್ಲಸ್ಟರ್ (ಸಿಲಿಕಾನ್ ಸಿಟಿ) ಹೀಗೆ ವಿವಿಧ ಜಿಲ್ಲೆಗಳನ್ನು ಅಲ್ಲಿನ ವಿಶೇಷತೆಗಳಿಗೆ ಅನುಗುಣವಾಗಿ ಒಂದು ಕ್ಲಸ್ಟರ್ ಆಗಿ ಗುರುತಿಸಲಾಗಿದೆ. ಹಾಗೇ, ಮಲೆನಾಡಿನ ಸೆರಗಾಗಿರುವ, ಜೀವ ವೈವಿಧ್ಯಗಳ ತವರು ಶಿವಮೊಗ್ಗ ಜಿಲೆಯನ್ನು ಕೃಷಿ ಕ್ಲಸ್ಟರ್ ಎಂದು ಹೆಮ್ಮೆಯಿಂದ ಕರೆಯುವಂತಾಗಬೇಕು. ಆ ರೀತಿಯಲ್ಲಿ ಕೆಲಸಗಳು ಆಗಬೇಕು ಹಾಗೂ ರೈತರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೆಲಸ ಮಾಡಿ ತರಿಸಬೇಕು ಎಂದು ತಿಳಿಸಿದರು.
ತುಂಗಾ ದಿಂದಲೇ ನೀರು ಕೊಡಿ
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಕೊಡುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಜಲಾಶಯದ ಪರಿಸ್ಥಿತಿ ಬಗ್ಗೆ ನಾನು ಸಂಸದರಿಗೆ ಹೇಳಲೇಬೇಕು. ಭದ್ರಾ ಜಲಾಶಯದಿಂದ 15 ಟಿಎಂಸಿ ಮತ್ತು ತುಂಗಾ ಜಲಾಶಯದಿಂದ 16 ಟಿಎಂಸಿ ನೀರೆತ್ತಿ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸಬೇಕು ಎಂದು ಡಿಪಿಆರ್ ಆಗಿದೆ. ಆದರೆ 29 ಟಿಎಂಸಿ ನೀರನ್ನೂ ತುಂಗಾದಿಂದಲೇ ಲಿಫ್ಟ್ ಮಾಡಿದರೆ ಅನುಕೂಲ ಆಗುತ್ತದೆ. ನಾಲ್ಕು ಮೋಟಾರ್ ಶುರು ಮಾಡಿದರೆ ಭದ್ರಾ ವ್ಯಾಪ್ತಿಯ ರೈತರಿಗೆ ತೊಂದರೆ ಆಗಲಿದೆ. ಆದ ಕಾರಣ ಡಿಪಿಆರ್ ನಲ್ಲಿ 29 ಟಿಎಂಸಿ ನೀರನ್ನು ತುಂಗಾದಿAದಲೇ ಲಿಫ್ಟ್ ಮಾಡುವಂತೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು.
Share your comments