2021–22 ರ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 27 ಲಕ್ಷ ರೈತರಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 20 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಅವರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ (ಬಿ.ಡಿ.ಸಿ.ಸಿ) ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ 28 ಲಕ್ಷ ರೈತರಿಗೆ 20 ಸಾವಿರ ಕೋಟಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆ ಸಾಲ ವಿತರಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ನಬಾರ್ಡ್‌ಗೆ ಮನವಿ ಸಲ್ಲಿಸಲಾಗಿದೆ. ರೈತರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
‘ಈ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ಸಾಲ ವಿತರಣೆ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ 22,02,931 ಲಕ್ಷ ರೈತರಿಗೆ 13,739.28 ಕೋಟಿ ಸಾಲ ವಿತರಿಸಲಾಗಿದೆ. ಮಾರ್ಚ್ 31 ರೊಳಗೆ ನೂರಕ್ಕೆ ನೂರು ಗುರಿ ತಲುಪುತ್ತೇವೆ’ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೊರೋನಾ ಸಂಕಷ್ಟದ ನಡುವೆಯ ಸಾಲಕ್ಕಾಗಿ ಅರ್ಜಿ ಹಾಕಿದವರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಅಗತ್ಯವಿರುವವರಿಗೆ ಸಾಲ ನೀಡುವಂತೆ ಸಹಕಾರ ಇಲಾಖೆಗೆ ಸುತ್ತೋಲೆ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ 15300 ಕೋಟಿ ರೂಪಾಯಿ ಸಾಲಕ್ಕಾಗಿಯೇ ಮೀಸಲಿಟ್ಟಿದೆ ಎಂದರು.
‘ಸಹಕಾರ ಇಲಾಖೆಯಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸಲು ಕಾಯ್ದೆಯಲ್ಲಿ ಯಾವುದೇ ತೊಡಕು ಗಳಿದ್ದರೆ ಅದನ್ನು ನನ್ನ ಅಥವಾ ಇಲಾಖೆಯ ಗಮನಕ್ಕೆ ತಂದರೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ಅವರು ಭರವಸೆ ನೀಡಿದರು.
5 ಸಾವಿರ ಜನರಿಗೆ ಉದ್ಯೋಗ: ಹಾಲು ಒಕ್ಕೂಟ ಸೇರಿ ಸಹಕಾರ ಇಲಾಖೆಯ ಹಲವು ಅಂಗ ಸಂಸ್ಥೆಗಳಿಂದ ಕೋವಿಡ್ ಸಂದರ್ಭದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ ಮಾಡುವಂತೆ ಆದೇಶ ನೀಡಲಾಗಿತ್ತು. ಈಗ ಬೆಂಗಳೂರು ಹಾಲು ಒಕ್ಕೂಟದಿಂದ 279 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕಲಬುರಗಿ ಡಿಸಿಸಿ ಬ್ಯಾಂಕ್‌ಗೆ ಸುಮಾರು 200 ಕೋಟಿ ಅನುದಾನ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಇದರಿಂದ ಆ ಭಾಗದ ರೈತರಿಗೆ ಹಲವು ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಸೋಮಶೇಖರ್ ತಿಳಿಸಿದರು.
Share your comments