ರಾಜ್ಯದಲ್ಲಿಎದ್ದಿರುವ ಲಸಿಕೆ ಹಾಹಾಕಾರದ ಹಿನ್ನೆಲೆಯಲ್ಲಿ 18 ರಿಂದ 44 ವರ್ಷದೊಳಗಿನವರ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ. ಹೀಗಾಗಿ ಮೇ 14 (ಶುಕ್ರವಾರ)ರಿಂದ ರಾಜ್ಯದ ಯಾವ ಕೇಂದ್ರದಲ್ಲೂ ಈ ವಯೋಮಾನದವರಿಗೆ ಲಸಿಕೆ ನೀಡಲಾಗುತ್ತಿಲ್ಲ. ರಾಜ್ಯದ ಎಲ್ಲ ಲಸಿಕಾ ಕೇಂದ್ರಗಳು ಇದನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ 19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ಬಳಿಕ ಸದ್ಯಕ್ಕೆ 18 ರಿಂದ 44 ವರ್ಷದ ವಯೊಮಿತಿಯವರಿಗೆ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ
ಇದೇ ವೇಳೆ, 45 ವರ್ಷ ಮೀರಿದವರಲ್ಲೂ ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ದೇಶದಲ್ಲಿ ಮೇ 1ರಿಂದಲೇ 18 ಪ್ಲಸ್ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿತ್ತು. ಲಸಿಕೆ ಕೊರತೆಯ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ. ಮುಂದೆ ಸೂಕ್ತ ಪ್ರಮಾಣದಲ್ಲಿ ಲಸಿಕೆ ಲಭ್ಯತೆ ಖಚಿತಪಡಿಸಿಕೊಂಡ ಬಳಿಕವಷ್ಟೇ ಇದು ಮರು ಆರಂಭವಾಗಲಿದೆ.
ರಾಜ್ಯದ ಎಲ್ಲಾ ಲಸಿಕಾ ಕೇಂದ್ರಗಳಿಗೆ ಈ ಆದೇಶ ಅನ್ವಯವಾಗಲಿದೆ. ಮೇ 13ರಂದು ಒಂದು ದಿನ ಈಗಾಗಲೇ ನೋಂದಣಿ ಮಾಡಿಕೊಂಡು ಸ್ಲಾಟ್ ಬುಕಿಂಗ್ ಆದವರಿಗೆ ಲಸಿಕೆ ನೀಡಬಹುದು ಎಂದು ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಂತರದ ದಿನಗಳಲ್ಲಿ ಸ್ಲಾಟ್ ಬುಕ್ ಆಗಿದ್ದರೂ ಲಸಿಕೆ ನೀಡದಿರಲು ನಿರ್ಧರಿಸಲಾಗಿದೆ.
ಪ್ರತಿ ಜಿಲ್ಲೆಯ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇರಬೇಕು, ವ್ಯಾಕ್ಸಿನ್ ಪೂರೈಸುವ ಕಂಪನಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಲು ಸೂಚಿಸಲಾಯಿತು.
ಆಕ್ಸಿಜನ್ ಮತ್ತು ಐಸಿಯು ಬೆಡ್ ಗಳ ಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಬೇಕು. ಜಿಲ್ಲೆಗಳಲ್ಲಿ ಆಕ್ಸಿಜನ್ ಸಪ್ಲೆ ಚೈನ್ನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು, ಆಕ್ಸಿಜನ್ ಸಿಲಿಂಡರ್ ಲಭ್ಯತೆ ಇದ್ದು ಜಿಲ್ಲೆಗಳಲ್ಲಿ ಕೊರತೆ ಉಂಟಾದರೆ ಕೂಡಲೇ ಬಗೆಹರಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ 1.71 ಕೋಟಿ ಮಂದಿ ಇದ್ದು, ಇವರ ಪೈಕಿ 84 ಲಕ್ಷ ಮಂದಿ ಮೊದಲ ಲಸಿಕೆ ಪಡೆದಿದ್ದಾರೆ. ಅವರ ಪೈಕಿ ಕೇವಲ 23 ಲಕ್ಷ ಮಂದಿಗೆ 2ನೇ ಡೋಸ್ ನೀಡಲಾಗಿದೆ. ಉಳಿದ 63 ಲಕ್ಷ ಮಂದಿಯಲ್ಲಿ ಬಹುತೇಕರಿಗೆ 2ನೇ ಲಸಿಕೆ ಹಾಕಿಸಿಕೊಳ್ಳುವ ಅವಧಿ ಮೀರಿದೆ. ಲಸಿಕಾ ಕೇಂದ್ರಗಳಲ್ಲಿ ಕಂಡುಬಂದಿರುವ ಒತ್ತಡದಿಂದ ಅವರೆಲ್ಲ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅವರಿಗೆ ಮೊದಲ ಆದ್ಯತೆಯನ್ನು ನೀಡಲು ತೀರ್ಮಾನಿಸಲಾಗಿದೆ.
ಕೊರೊನಾ ನಿರ್ವಹಣೆ ವಿಚಾರ ನಡೆದ ಸಭೆಯಲ್ಲಿ ಡಿಸಿಎಂ ಅಶ್ವಥನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಇದ್ದರು.
Share your comments