ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಈವರೆಗೆ ದೇಶದಾದ್ಯಂತ ಲಕ್ಷಾಂತರ ರೈತರಿಗೆ ಒಟ್ಟು 14 ಲಕ್ಷ ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ.
ಈ ಮಾಹಿತಿಯನ್ನು ನೀಡಿರುವುದು ಸ್ವತಃ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್. ಹೌದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೈತ ಸಬಲೀಕರಣ ಯೋಜನೆಗಳಲ್ಲಿ ಒಂದಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಒಟ್ಟು 16 ಲಕ್ಷ ಕೋಟಿ ರೂ. ಸಾಲ ನೀಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ ಈಗಾಗಲೇ 14 ಲಕ್ಷ ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಸಾಲ ಸೌಲಭ್ಯದ ಪ್ರಯೋಜನವು ನಿಜವಾದ ಫಲಾನುಭವಿ ರೈತರಿಗೆ ಸಿಗಬೇಕು ಎಂದು ಹೇಳಿರುವ ಕೃಷಿ ಸಚಿವರು, ಅನ್ನದಾತರನ್ನು ಆರ್ಥಿಕವಾಗಿ ಸಬಲರಾಗಿಸುವ ಇಂತಹ ಯೋಜನೆಯನ್ನು ಪ್ರಮಾಣಿಕವಾಗಿ ಮತ್ತು ಅಷ್ಟೇ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವೂ ಇದೆ. ಎಲ್ಲಾ ರಾಜ್ಯ ಸರ್ಕಾರಗಳು, ಕೃಷಿ ಇಲಾಖೆ ಹಾಗೂ ಬ್ಯಾಂಕ್ಗಳ ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮದಿಂದಾಗಿ ಇಂದು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ದೇಶದ ರೈತರಿಗೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನದ ಕುರಿತು ನಡೆದ ಎಲ್ಲಾ ರಾಜ್ಯಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ‘ಕೊರೊನಾ ಸಾಂಕ್ರಾಮಿಕ ಸೋಂಕು ದೇಶವನ್ನೇ ಕಂಗೆಡಿಸಿರುವ ಕಷ್ಟದ ಸಂದರ್ಭದಲ್ಲೂ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ರೈತರಿಗೆ ಆರ್ಥಿಕ ಬಲ ನೀಡಲಾಗಿದೆ. 2020ರ ಫೆಬ್ರವರಿಯಲ್ಲಿ ಹೊಸ ರೂಪದಲ್ಲಿ ಪರಿಚಯಿಸಲಾದ ಈ ಯೋಜನೆಯ ವ್ಯಾಪ್ತಿಗೆ ದೇಶದ ಎಲ್ಲಾ ರೈತರನ್ನು ತರುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಕೂಡ ರೈತರಿಗೆ ಸಾಕಷ್ಟು ನೆರವಾಗುತ್ತಿದೆ. ಈ ನಿಧಿಯ ಮುಲಕ ಕೃಷಿ ಭೂಮಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲು ರೈತರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದಾಗಿ ಸಣ್ಣ ರೈತರು ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಅನುಕೂಲವಾಗಿದೆ’ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಎಣ್ಣೆ ಕಾಳುಗಳು ಮತ್ತು ತಾಳೆ ಬೆಳೆ ಅಭಿಯಾನದ ಕುರಿತು ಮಾತನಾಡಿದ ಸಚಿವ ತೋಮರ್, ‘ದೇಶದ ಎಲ್ಲಾ ರಾಜ್ಯಗಳೂ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ರಾಜ್ಯಗಳಲ್ಲೂ ಹೆಚ್ಚಿನ ಭೂ ಪ್ರದೇಶದಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶಗಳೂ ಈ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡಿವೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎಣ್ಣೆ ಕಾಳು ಬೆಳೆಯ ಕ್ರಾಂತಿಯೇ ನಡೆದಿದೆ. ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಎಣ್ಣೆ ಕಾಳು ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಅದರ ಸದುಪಯೋಗಕ್ಕೆ ಕೇಂದ್ರ ಯೋಜನೆ ರೂಪಿಸಿದೆ. ದಕ್ಷಿಣದ ರಾಜ್ಯಗಳಲ್ಲೂ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ,’ ಎಂದು ಹೇಳಿದರು.
ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್?
ಕೃಷಿಕರಿಗೆ ಅಲ್ಪಾವಧಿ ಸಾಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಉತ್ತರ ಪ್ರದೇಶದ ಚಿತ್ರಕೂಟಿನಲ್ಲಿ ‘ಪ್ರಧಾನಿ ಕಿಸಾನ್ ಯೋಜನೆ’ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಡಿ ಇದುವರೆಗೂ 25 ಲಕ್ಷಕ್ಕೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಿಸಲಾಗಿದ್ದು, ಎಸ್ಬಿಐ, ಕೆನರಾ ಬ್ಯಾಂಕ್, ಹೆಚ್ಡಿಎಫ್ಸಿ, ಐಸಿಐಸಿಐ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕುಗಳ 2000 ಶಾಖೆಗಳ ಮೂಲಕ ದೇಶದಾದ್ಯಂತ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದೆ.
ಯಾರೆಲ್ಲಾ ಅರ್ಹರು?
ಎಲ್ಲಾ ರೈತರು, ಜಂಟಿ ರೈತರು, ಗುತ್ತಿಗೆ ರೈತರು, ಹತ್ತು ರೈತರನ್ನು ಒಳಗೊಂಡಿರುವ ಜಂಟಿ ಹೊಣೆಗಾರಿಕೆ ಗುಂಪುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಲು ಅರ್ಹರಾಗಿದ್ದಾರೆ. ಕಾರ್ಡ್ ಮೂಲಕ ಒಂದು ಅವಧಿಗೆ ಶೇ.2 ವಾರ್ಷಿಕ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರ ಬೆಳೆಗಳು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲಿವೆ.
ಅಗತ್ಯವಿರುವ ದಾಖಲೆಗಳು:
ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಮಹಾತ್ಮಾಗಾಂಧಿ ನರೆಗಾ ಜಾಬ್ ಕಾರ್ಡ್, ಎನ್ಆರ್ಐ ಗುರುತಿನ ಚೀಟಿ ಇತ್ಯಾದಿ...
Share your comments