ಹೆಸರಘಟ್ಟ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಬಾಳೆಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ ಮಾಡುವ ವಿನೂತನ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದೆ.
ಇದಕ್ಕಿಂತ ಮುಂಚಿತವಾಗಿ ಬಾಳೆಹಣ್ಣಿನ ಸಸ್ಯೋತ್ಪಾದನೆಗೆ ಹೆಚ್ಚು ಸಮಯ ತಗಲುತ್ತಿತ್ತು. ಬಾಳೆಹಣ್ಣಿನ ಅಂಗಾಂಶ ಕೃಷಿ ಮತ್ತು ಸಾಂಪ್ರದಾಯಿಕ ವಿಧಾನಗಳ (ಗೆಡ್ಡೆ ಕತ್ತರಿಸಿ ಗಿಡ ಬೆಳೆಯುವುದು) ಮೂಲಕ ಸಸ್ಯೋತ್ಪಾದನೆ ಮಾಡಲಾಗುತ್ತಿತ್ತು. ಅಷ್ಟೇ ವೆಚ್ಚವೂ ಸಹ ದುಬಾರಿಯಾಗಿತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಂಸ್ಥೆಯ ವಿಜ್ಞಾನಿ ಉಷಾರಾಣಿಯವರು ಬಾಳೆ ಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ ಮಾಡುವ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ನರ್ಸರಿ ಅಥವಾ ಉದ್ಯಮಿಗಳಿಗೆ ಒಂದು ತಿಂಗಳ ತರಬೇತಿಯನ್ನು ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ನೀಡಲಿದೆ. ತರಬೇತಿ ಪಡೆದ ನಂತರ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅನುಮತಿ ಪತ್ರವನ್ನೂ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 8-30ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಂಸ್ಥೆಯ ತಜ್ಞರನ್ನು ಭೇಟಿಯಾಗಬಹುದು. ಸಂಪರ್ಕ: 080-23086100/430 (ರಜೆ ದಿನಗಳನ್ನು ಹೊರತು ಪಡಿಸಿ ಬೆಳಿಗ್ಗೆ 8 ರಿಂದ ಸಂಜೆ ಐದರವರೆಗೆ ಕರೆ ಮಾಡಬಹುದು.
ಭ್ರೂಣದಿಂದ ಬೆಳೆದ ಏಲಕ್ಕಿ ಬಾಳೆಹಣ್ಣಿನ ಗಿಡವು 350 ಸೆಂ.ಮೀ. ಎತ್ತರ ಬೆಳೆಯಬಲ್ಲದು. 12 ತಿಂಗಳಲ್ಲಿ ಫಸಲು ನೀಡುತ್ತದೆ. ಒಂದು ಗೊನೆಯು 15ರಿಂದ 20 ಕೆ.ಜಿ. ತೂಗುತ್ತದೆ. ಗೊನೆಯಲ್ಲಿ ಸುಮಾರು 250ರಿಂದ 300 ಬಾಳೆಹಣ್ಣುಗಳಿರುತ್ತವೆ. ಸಾಂಪ್ರದಾಯಿಕ ಮತ್ತು ಅಂಗಾಂಶ ಕೃಷಿಯಿಂದ ಬೆಳೆದ ವಿಧಾನಗಿಂತ ತುಸು ಹೆಚ್ಚೇ ಫಸಲನ್ನು ಇದರಿಂದ ನಿರೀಕ್ಷೆ ಮಾಡಬಹುದು ಎಂದು ಸಂಸ್ಥೆಯ ವಿಜ್ಞಾನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
Share your comments