ತಲೆಹೊಟ್ಟು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ಹವಾಮಾನ, ಧೂಳು ಹಾಗೂ ಆಹಾರ ಪದ್ಧತಿ ಸೇರಿದಂತೆ ಸಾಕಷ್ಟು ಕಾರಣಗಳಿಂದ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಡ್ಯಾಂಡ್ರಫ್ ಸಮಸ್ಯೆ ಕಂಡು ಬರುತ್ತಿದೆ.
ಡ್ಯಾಂಡ್ರಫ್ ನಿವಾರಣೆಗೆ ಮಾರುಕಟ್ಟೆಯಲ್ಲೂ ಕೂಡ ಸಾಕಷ್ಟು ಶಾಂಪೂಗಳು, ಆಯಿಲ್‌ಗಳು ಲಗ್ಗೆ ಇಟ್ಟಿವೆ. ಸದ್ಯ ಈ ಲೇಖನದಲ್ಲಿ ನಾವು ನಿಮಗೆ ನೈಸರ್ಗಿಕವಾಗಿ ಡ್ಯಾಂಡ್ರಫ್‌ನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿದ್ದೆವೆ.
ನಿಂಬೆ ರಸ
ನಿಂಬೆ ರಸವು ತಲೆ ಹೊಟ್ಟಿಗೆ ಪರಿಣಾಮಕಾರಿಯಾದ ನೈಸರ್ಗಿಕ ಪರಿಹಾರ ಎಂದೇ ಹೇಳಬಹುದು. ನೈಸರ್ಗಿಕವಾಗಿ ತಲೆಹೊಟ್ಟು ತೆಗೆದುಹಾಕಲು ನಿಂಬೆ ರಸ ಹೆಸರುವಾಸಿಯಾಗಿದೆ. ಇದು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿರುವುದರಿಂದ, ಕೂದಲಿನಲ್ಲಿ ಉಂಟಾಗುವ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ. ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಈ ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರವನ್ನು ನಿವಾರಿಸುತ್ತದೆ!
ಚಹಾ ಮರದ ಆಯಿಲ್‌ನ ಬಳಕೆ
ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಕೂಡಿದ ಟೀ ಟ್ರೀ ಆಯಿಲ್, ತಲೆಹೊಟ್ಟಿಗೆ ರಾಮಬಾಣವಾಗಿದೆ. ತಲೆಹೊಟ್ಟಿಗೆ ಕಾರಣವಾಗುವ ಅಂಶಗಳನ್ನು ಈ ಆಯಿಲ್ ನಿಯಂತ್ರಣ ಮಾಡುತ್ತದೆ. ಚಹಾ ಮರದ ಆಯಿಲ್ ಅನ್ನು ನೇರವಾಗಿ ನೆತ್ತಿಗೆ ಹಚ್ಚಿ ಮಸಾಜ್ ಮಾಡುವದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ. ಅಥವಾ ಕೊಬ್ಬರಿ ಎಣ್ಣೆಯ ಜೊತೆ ಇದನ್ನು ಬೆರಸಿ ಉಪಯೋಗ ಮಾಡಬಹುದು.
ಅಡುಗೆ ಸೋಡಾ
ಅಡುಗೆ ಸೋಡಾ ನೆತ್ತಿಯಲ್ಲಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಕೂದಲನ್ನು ಮೊದಲು ಒದ್ದೆ ಮಾಡಿ ನಂತರ ಒಂದು ಹಿಡಿ ಅಡಿಗೆ ಸೋಡಾವನ್ನು ನಿಮ್ಮ ನೆತ್ತಿಗೆ ಉಜ್ಜಿಕೊಳ್ಳಿ. ಚೆನ್ನಾಗಿ ತೊಳೆಯಿರಿ ಮತ್ತು ನಂತರ ಕಂಡಿಷನರ್ ಬಳಸಿ ತೊಳೆಯಿರಿ.
ಲೋಳೆಸರ
ಅಲೋವೆರಾ ಹಿತವಾದ ಮತ್ತು ಆರ್ಧ್ರಕ ಗುಣಲಕ್ಷಣಗಳನ್ನು ಹೊಂದಿದೆ, ಇದು ನೆತ್ತಿಯ ಮೇಲೆ ತುರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ತಲೆಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತಂಪಾದ ನೀರಿನಲ್ಲಿ ಕೂದಲನ್ನು ಶುದ್ಧಗೊಳಿಸಿ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ನೆತ್ತಿಯ ತುರಿಕೆ ನಿಯಂತ್ರಣ ಮಾಡುತ್ತೆ. ಬೆಚ್ಚಗಿನ ತೆಂಗಿನ ಎಣ್ಣೆಯನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ, ಸುಮಾರು 30 ನಿಮಿಷಗಳ ಕಾಲ ಬಿಡಿ, ತದನಂತರ ಎಂದಿನಂತೆ ನಿಮ್ಮ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೆ 3 ಬಾರಿ ಮಾಡುವುದರಿಂದ ತಲೆ ಹೊಟ್ಟನ್ನು ನಿಯಂತ್ರಣ ಮಾಡಬಹುದು.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ನಿಮ್ಮ ನೆತ್ತಿಯ pH ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ನಂತರ ಶಾಂಪೂ ಮಾಡಿದ ನಂತರ ತೊಳೆಯಲು ಬಳಸಿ.
Share your comments