1. ಆರೋಗ್ಯ ಜೀವನ

ಮನಸ್ಸನ್ನು ಕೇಂದ್ರಿಕರಿಸಲು ಪದ್ಮಾಸನ ಸೂಕ್ತ

"ಇದಂ ಪದ್ಮಾಸಂ ಸನಂ ಪ್ರೋಕ್ತಂ

ಸರ್ವವ್ಯಾಧಿವಿನಾಶನಂ

ದುರ್ಲಭಂ ಯೇನ ಕೇನಾಪಿ

ಧೀಮತಾ ಭುವಿ ಲಭ್ಯತೆ"

ಎಂದು ಹಠಯೋಗ ಪ್ರದೀಪಿಕೆಯಲ್ಲಿ ಪದ್ಮಾಸನವನ್ನು ಕುರಿತು ಹೇಳಲಾಗಿದೆ. ಅಂದರೆ "ಪದ್ಮಾಸನವನ್ನು ಮಾಡುವುದರಿಂದ ಸಮಸ್ತ ರೋಗಗಳೂ ನಾಶವಾಗುವುವು. ದುರ್ಲಭವಾದ ಈ  ವಿಷಯವು ಕೇವಲ ಬುದ್ಧಿವಂತರಿಗೆ ಮಾತ್ರ ಲಭ್ಯವಾಗುವುದು".

ಈ ಆಸನದ ಲಾಭಗಳು ಏನು?

ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನತಂತುಗಳು ಸರಿಯಾಗಿ ಕಾರ್ಯ ನಿರ್ವಹಿಸುವುವು. ಇದರಿಂದ ವಿಚಾರಶಕ್ತಿ ಮತ್ತು ಸ್ಮರಣ ಶಕ್ತಿ ಹೆಚ್ಚುವುವು. ದೀರ್ಘ ಉಸಿರಾಟಕ್ಕೆ ಇದು ಬಹಳ ಪ್ರಯೋಜನಕಾರಿ. ಮನಸ್ಸನ್ನು ಕೇಂದ್ರಿಕರಿಸಲು ಪದ್ಮಾಸನ ಸೂಕ್ತ ಮಾಧ್ಯಮ. ಮಂಡಿ, ಕಾಲುಗಳ ಕೀಲುಗಳಲ್ಲಿನ ಗಡಸುತನ ಮಾಯವಾಗುವುದು. ಸೊಂಟ, ಬೆನ್ನುಗಳಲ್ಲಿ ರಕ್ತಸಂಚಾರ ಸುಗಮವಾಗುವುದರಿಂದ ಇಡೀ ಶರೀರದಲ್ಲೇ ಹೊಸ ಹುರುಪು ಬರುವುದು. ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಪದ್ಮಾಸನ ಅತ್ಯುತ್ತಮವಾದುದು.

ಮಾಡುವ ಕ್ರಮ ಹೇಗೆ?

ಮೊದಲು ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನು ಮುಂದಕ್ಕೆ ಚಾಚಬೇಕು. ನಂತರ ನಿಧನವಾಗಿ ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಬಲ ಪಾದವನ್ನು ಹಿಡಿದುಕೊಂಡು ಎಡತೊಡೆಯ ಮೇಲೆ ಅಂದರೆ ತೊಡೆಯ ಮೂಲಭಾಗದಲ್ಲಿ ಇಡಬೇಕು.  ಈ ಸ್ಥಿತಿಯಲ್ಲಿ ಬಲಗಾಲಿನ ಹಿಮ್ಮಡಿಯು ಹೊಕ್ಕಳಿನ ಎಡಭಾಗದಲ್ಲಿರುತ್ತದೆ. ಇದೇ ರೀತಿ ಎಡಗಾಲನ್ನೂ ನಿಧಾನವಾಗಿ ಮಂಡಿಯ ಬಳಿ ಬಗ್ಗಿಸಿ ಬಲತೊಡೆಯ  ಮೂಲಭಾಗದಲ್ಲಿ ಇಡಬೇಕು. ಅಂದರೆ ಎಡಹಿಮ್ಮಡಿಯು ಹೊಕ್ಕಳಿನ ಬಲಭಾಗದಲ್ಲಿರುತ್ತದೆ. ಬಲಗಾಲು ಮತ್ತು ಎಡಗಾಲು ಒಂದು ಇನ್ನೊಂದನ್ನು ಛೇದಿಸಿರುತ್ತೇವೆ ಮತ್ತು ಎರಡೂ ಕಾಲುಗಳ ಅಂಗಾಲುಗಳು ಮೇಲ್ಮುಖವಾಗಿರಬೇಕು. ಅಂದರೆ ಆಕಾಶವನ್ನು ನೋಡುತ್ತಿರಬೇಕು. ಎರಡೂ ಕಾಲುಗಳ ಮಂಡಿಗಳು ಭೂಮಿಯನ್ನು ಸ್ಪರ್ಶಿಸಿರಬೇಕು. ಕೈಗಳನ್ನು ಆಯಾ ಕಾಲಿನ ಮಂಡಿಗಳ ಮೇಲೆ ಇಟ್ಟು ನೀಳವಾಗಿ ಚಾಚಿರಬೇಕು. ಅಂಗೈಗಳೂ ಈ ಸ್ಥಿತಿಯಲ್ಲಿ ಮೇಲ್ಮುಖನಾಗಿದ್ದು, ಆಕಾಶವನ್ನು ನೋಡುತ್ತಿರಬೇಕು. ಬೆರಳುಗಳು ಚಿನ್ಮುದ್ರೆಯ ಸ್ಥಿತಿಯಲ್ಲಿ ಇರಬೇಕು. (ಅಂದರೆ ಹೆಬ್ಬೆಟ್ಟು ಮತ್ತು ಅದರ ಪಕ್ಕದ ಬೆರಳು ತರ್ಜಿನಿಯು ಒಂದು ಇನ್ನೊಂದನ್ನು ಪರಸ್ಪರ ತಗುಲಿ ವೃತ್ತದ  ಆಕಾರವನ್ನು ಪಡೆದಿರಬೇಕು ಮತ್ತು ಉಳಿದ ಮೂರು ಬೆರಳುಗಳು ನೇರವಾಗಿರಬೇಕು. ಇದನ್ನು ಚಿನ್ಮುದ್ರೆ ಎನ್ನುತ್ತಾರೆ.)

ಈ ಸ್ಥಿತಿಯಲ್ಲಿರುವಾಗಲೇ ಬೆನ್ನನ್ನು ಸಹ ನೇರಮಾಡಬೇಕು. ಉಸಿರಾಟ ನಿಧನವಾಗಿ ನಡೆಯುತ್ತಿರಬಹುದು. ಚಿತ್ರದಲ್ಲಿರುವಂತೆ ಇದೇ ಸ್ಥಿತಿಯಲ್ಲಿ 30 ರಿಂದ 60 ಸೆಕೆಂಡುಗಳವರೆಗೆ ಕುಳಿತು ಅನಂತರ ಕಾಲುಗಳನ್ನು ಬದಲಾಯಿಸಬೇಕು. ಈ ರೀತಿ ಎರಡು ಕಾಲುಗಳನ್ನು ಬದಲಾಯಿಸುವುದರಿಂದ ಕಾಲುಗಳಲ್ಲಿ ಸಮತೋಲನ ಶಕ್ತಿ ಬರುತ್ತದೆ.

ಲೇಖಕರು : ಪ್ರವೀಣ್ ಎಸ್, ಯೋಗ ಶಿಕ್ಷಕರು

Published On: 24 October 2020, 03:52 PM English Summary: Health Benefits of padmasana Yoga

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.