ಕೋಳಿ ಮೊಟ್ಟೆ ಒಂದು ಆರೋಗ್ಯದಾಯಕ ಪೌಷ್ಟಿಕ ಆಹಾರ. ಪ್ರೋಟೀನ್ನಿಂದ ಸಮೃದ್ಧವಾಗಿರುವ ಕೋಳಿ ಮೊಟ್ಟೆಗಳು ವ್ಯಕ್ತಿಯ ದೇಹಕ್ಕೆ ಶಕ್ತಿ ನೀಡುತ್ತವೆ. ಅದರಲ್ಲೂ ಮಕ್ಕಳಿಗೆ ಮತ್ತು ನಿಶ್ಯಕ್ತಿ ಸಮ್ಯಸೆ ಹೊಂದಿರುವ ವಯಸ್ಕರಿಗೆ ಈ ಮೊಟ್ಟೆಗಳು ಅತುತ್ತಮ ಚೈತನ್ಯದಾಯಕ ಆಹಾರಗಳೆನಿಸಿವೆ. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳೂ ಇವೆ. ಹೀಗಾಗಿಯೇ ದಿನಕ್ಕೊಂದು ಮೊಟ್ಟೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಮೊಟ್ಟೆಯ ಮಹತ್ವ ಅರಿತಿರುವ ಸರ್ಕಾರ ಕೂಡ ಶಾಲೆಗಳಲ್ಲಿ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ಮತ್ತು ಒಂದು ಲೋಟ ಹಾಲು ನೀಡುವ ಯೋಜನೆ ಆರಂಭಿಸಿತ್ತು. ಮೊಟ್ಟೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. ಆದರೂ ಮೊಟ್ಟೆ ಸೇವನೆಯಿಂದ ಅಡ್ಡ ಪರಿಣಾಮಗಳಿವೆ ಎಂದು ಹೇಳುವುದೇಕೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು... ಹಾಗಾದರೆ ಕೇಳಿ, ಅತಿಯಾದರೆ ಅಮೃತವೂ ವಿಷ ಎಂದು ಹಿರಿಯರು ಹೇಳಿದ್ದಾರೆ. ಅವರ ಮಾತಿನಲ್ಲಿರುವ ಪ್ರತಿ ಅಕ್ಷರವೂ ಸತ್ಯ. ಹಾಗೆಯೇ ಮೊಟ್ಟೆ ನಮ್ಮ ಆರೋಗ್ಯಕ್ಕೆ, ಸದೃಢ ದೇಹಕ್ಕೆ ಎಷ್ಟು ಪೂರಕವೋ, ಅದನ್ನು ಅತಿಯಾಗಿ ಸೇವಿಸಿದರೆ ಅಷ್ಟೆ ಮಾರಕ ಕೂಡ ಹೌದು. ಅದಕ್ಕಾಗಿಯೇ ನೀವು ಪ್ರತಿ ದಿನ ಹತ್ತಿಪ್ಪತ್ತು ಮೊಟ್ಟೆ ತಿನ್ನುತ್ತಿದ್ದರೆ ಮೊದಲು ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
ಅತಿಯಾಗಿ ಮೊಟ್ಟೆ ತಿನ್ನುವವರು ಯಾರು?
ಕೋಳಿ ಮೊಟ್ಟೆಗಳನ್ನು ಅತಿಯಾಗಿ ತಿನ್ನುವವರ ಪೈಕಿ ಕೇಳಿಬರುವ ಮೊದಲ ಹೆಸರು ಬಾಡಿ ಬಿಲ್ಡರ್ಗಳದ್ದು. ದೇಹ ದಂಡಿಸಿ, ಅದಕ್ಕೆ ಒಂದು ಸುಂದರ ಆಕಾರ ನೀಡಲು ಹಗಲಿರುಳೆನ್ನದೆ ಕಸರತ್ತು ಮಾಡುವ ಬಾಡಿ ಬಿಲ್ಡರ್ಗಳು ಅಥವಾ ದೇಹದಾರ್ಢ್ಯ ಪಟುಗಳು ದಿನಕ್ಕೆ ಕನಿಷ್ಠವೆಂದರೂ 15ರಿಂದ 20 ಮೊಟ್ಟೆ ತಿನ್ನುತ್ತಾರೆ. ವ್ಯಾಯಾಮ ಶಾಲೆ (ಜಿಮ್)ಗೆ ಹೋಗಿ ಕಸರತ್ತು ಮಾಡುವ ಬಾಡಿ ಬಿಲ್ಡರ್ಗಳಿಗೆ ಪ್ರೋಟೀನ್ ಅತ್ಯಗತ್ಯ. ಹೀಗಾಗಿ ಪ್ರೋಟೀನ್ನ ಆಕರವಾಗಿರುವ ಮೊಟ್ಟೆಗಳನ್ನು ಹೆಚ್ಚಿನವರು ಸೇವಿಸುತ್ತಾರೆ. ಇವರನ್ನು ಹೊರತುಪಡಿಸಿದರೆ ಮೊಟ್ಟೆಯನ್ನು ಹೆಚ್ಚು ಸೇವಿಸುವುದು ಡಯೆಟ್ ಮಾಡುವವರು. ದೇಹದ ತೂಕ ಇಳಿಸಲು ಬಯಸುವ ಯುವಕ-ಯುವತಿಯರು, ಪುರುಷ-ಮಹಿಳೆಯರು ತಮ್ಮ ಬದಲಾದ ಆಹಾರ ಕ್ರಮದಲ್ಲಿ ಮೊಟ್ಟೆಗೆ ಮೊದಲ ಸ್ಥಾನ ನೀಡುತ್ತಾರೆ. ಅದರಲ್ಲೂ ಮೊಟ್ಟೆಯ ಬಿಳಿ ಭಾಗ (ಎಗ್ ವೈಟ್) ಮಾತ್ರ ತಿಂದು ಪುಟ್ಟ ಚೆಂಡಿನAತಹ ಹಳದಿ ಭಾಗವನ್ನು ಬಿಸಾಕುತ್ತಾರೆ.
ದಿನದಲ್ಲಿ ಒಂದೆರಡು ಮೊಟ್ಟೆ ತಿಂದರೆ ಅದರಿಂದೇನೂ ಅಡ್ಡ ಪರಿಣಾಮಗಳು ಇಲ್ಲ. ಆದರೆ ಬಾಡಿ ಬಿಲ್ಡರ್ಗಳು ದಿನವೊಂದರಲ್ಲಿ ಕನಿಷ್ಠವೆಂದರೂ 15 ಮೊಟ್ಟೆ ತಿನ್ನುತ್ತಾರೆ. ಡಯೆಟ್ ಮಾಡುವವರೂ ಬೇರೆ ಆಹಾರಗಳನ್ನು ಬದಿಗಿರಿಸಿ ದಿನದ ಮೂರು ಹೊತ್ತು ಎಗ್ ವೈಟ್ ಸೇವಿಸುತ್ತಾರೆ. ಹೀಗೆ ದಿನವಿಡೀ ಮೊಟ್ಟೆಯನ್ನೇ ತಿಂದು ಜೀವಿಸುವವರು ಅದರಿಂದ ಏನೆಲ್ಲಾ ಅಡ್ಡಪರಿಣಾಮಗಳಿವೆ ಎಂದು ತಿಳಿಯುವುದು ಮುಖ್ಯ. ಅತಿಯಾದ ಮೊಟ್ಟೆ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳ ಮಾಹಿತಿ ಇಲ್ಲಿದೆ.
* ಚರ್ಮ ಸಂಬಂಧಿ ಕಾಯಿಲೆ
ಮೊಟ್ಟೆಯ ಬಿಳಿ ಭಾಗವು ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲರಿಗಳನ್ನು ಹೊಂದಿರುತ್ತದೆ. ಕೆಲವರಿಗೆ ಮೊಟ್ಟೆಯ ಬಿಳಿ ಭಾಗ ಸೇವನೆಯಿಂದ ಅಲರ್ಜಿ ಉಂಟಾಗುತ್ತದೆ. ಇಂತಹ ಸ್ಥಿತಿಯು ಚರ್ಮದ ದದ್ದು, ಊತ, ಕೆಂಪಾಗುವುದು, ಮರಗಟ್ಟುವಿಕೆ, ಅತಿಸಾರ ಮತ್ತು ತುರಿಕೆಗೆ ಕಾರಣವಾಗಬಹುದು. ಅಲರ್ಜಿ ಸಮಸ್ಯೆ ಇರುವವರು ಮೊಟ್ಟೆಗಳನ್ನು ಅತಿಯಾಗಿ ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ.
* ಮೂತ್ರಪಿಂಡದ ಸಮಸ್ಯೆ
ಮೊಟ್ಟೆಯ ಬಿಳಿ ಭಾಗವು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹೀಗಾಗಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುವವರಿಗೆ ಇದು ತುಂಬಾ ಹಾನಿಕಾರಕ. ವಾಸ್ತವವಾಗಿ, ಮೂತ್ರಪಿಂಡದ ಸಮಸ್ಯೆಗಳಿರುವ ಜನ ಕಡಿಮೆ ಮಟ್ಟದ ಜಿಎಫ್ಆರ್ (ಮೂತ್ರಪಿಂಡಗಳನ್ನು ಶೋಧಿಸುವ ದ್ರವ) ಹೊಂದಿರುತ್ತಾರೆ. ಮೊಟ್ಟೆಯ ಬಿಳಿ ಭಾಗವು ದೇಹದಲ್ಲಿನ ಜಿಎಫ್ಆರ್ ಅಂಶವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದರಿಂದ ಕಿಡ್ನಿ ರೋಗಿಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.
* ಸ್ನಾಯು ನೋವಿಗೆ ಕಾರಣ
ಮೊಟ್ಟೆಯ ಬಿಳಿ ಭಾಗದಲ್ಲಿ ಅಲ್ಬುಮಿನ್ ಇರುತ್ತದೆ. ಇದು, ದೇಹವು ಬಯೋಟಿನ್ ಅನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಸ್ನಾಯು ನೋವು, ಚರ್ಮದ ಸೋಂಕುಗಳು, ಕೂದಲು ಉದುರುವಿಕೆ ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
* ಹೃದಯ ಸಂಬಂಧಿ ಸಮಸ್ಯೆ
ಮೊಟ್ಟೆಯ ಹಳದಿ ಲೋಳೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುತ್ತದೆ. ದಿನಕ್ಕೆ ಎರಡಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಹೃದಯ ಸಮಸ್ಯೆಯಿಂದ ಬಳಲುವವರು ಮೊಟ್ಟೆಯನ್ನು ಅದರಲ್ಲೂ ಹಳದಿ ಭಾಗದ ಸೇವನೆಯನ್ನು ಕಡಿಮೆ ಮಾಡಬೇಕು.
* ಮಧುಮೇಹಿಗಳಿಗೆ ಅಪಾಯ
ಮೊಟ್ಟೆಯ ಹಳದಿ ಭಾಗವು ಮಧುಮೇಹ ರೋಗಿಗಳಿಗೆ ಅಪಾಯಕಾರಿ. ಹೀಗಾಗಿ ದಿನಕ್ಕೆ ಒಂದಕ್ಕಿAತ ಹೆಚ್ಚು ಮೊಟ್ಟೆ ತಿನ್ನಬಾರದೆಂದು ವೈದ್ಯರು ಸೂಚಿಸುತ್ತಾರೆ.
Share your comments