1. ಆರೋಗ್ಯ ಜೀವನ

ನವಿರಾದ ನೇರಳೆ ಹಣ್ಣಿನಲ್ಲಿರುವ ನೂರೆಂಟು ಔಷಧೀಯ ಗುಣಗಳ ನೀವು ಬಲ್ಲಿರಾ?

java plum

ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವುದು, ಶ್ರೀಮಂತವಾಗಿರುವ ವಿಟಮಿನ್ ‘ಸಿ’ ಮತ್ತು ಕಬ್ಬಿಣದ ಅಂಶಗಳು, ತ್ವಚೆ ಮತ್ತು ಕಣ್ಣುಗಳ ಆರೋಗ್ಯ ವೃದ್ಧಿ, ಹೃದಯದ ಆರೋಗ್ಯ ರಕ್ಷಣೆ, ಹಲ್ಲು ಮತ್ತು ವಸಡುಗಳಿಗೆ ಬಲ ತುಂಬುವಿಕೆ, ಸೋಂಕು, ನಂಜು ತಡೆ ಮತ್ತು ಮಧುಮೇಹ ನಿಯಂತ್ರಣ ಸೇರಿ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಕಡಮಾಡುವ ಏಕೈಕ ಹಣ್ಣು ಎಂದರೆ, ಅದು ನೇರಳೆ ಹಣ್ಣು.

ಹೌದು ಗೋಲಿ ಆಕಾರದ ಸಣ್ಣ ಹಣ್ಣು ತನ್ನೊಳಗೆ ಹತ್ತು ಹಲವು ಆರೋಗ್ಯ ಪೂರಕ ಅಂಶಗಳನ್ನು ಅಡಕವಾಗಿಸಿಕೊಂಡಿದೆ. ಪ್ರೋಟೀನ್, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್‌ಗಳು, ಮ್ಯಾಂಗನೀಸ್, ಪೋಟ್ಯಾಶಿಯಂ, ಕ್ಯಾಲ್ಸಿಯಂ ಸೇರಿ ಅಪಾರ ಪೋಷಕಾಂಶಗಳನ್ನು ಹೊಂದಿರುವ ನೇರಳೆ, ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಕಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೆ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ.

ನೇರಳೆ ಹಣ್ಣು ವಿವಿಧ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 100 ಗ್ರಾಂ. ನೇರಳೆ ಹಣ್ಣು ಕ್ಯಾಲರಿ (ಶೇ.6.2), ನಾರಿನಂಶ (ಶೇ.1.9), ಕಾಬೋಹೈಢ್ರೇಡ್ಸ್ (ಶೇ.14), ಖನಿಜಾಂಶ (ಶೇ.1.4), ಕಬ್ಬಿಣ (1.2 ಮಿ.ಗ್ರಾಂ.) ಕ್ಯಾಲ್ಸಿಯಂ (15 ಮಿ.ಗ್ರಾಂ.), ಮಿಟಮಿನ್ ‘ಸಿ’ (ಶೇ.18) ಮತ್ತು ಶೇ.83ರಷ್ಟು ನೀರಿನ ಅಂಶ ಹೊಂದಿರುತ್ತದೆ. ಇಂತಹ ನೇರಳೆ ಹಣ್ಣು, ಅದರ ಬೀಜ ಮತ್ತು ಎಲೆಗಳಿಂದ ನಮಗಾಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ;

ಸಕ್ಕರೆ ಮಟ್ಟ ನಿಯಂತ್ರಣ

ನೇರಳೆಯ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಸಂಗ್ರಹಿಸುವ ಆರ್ಯುವೇದ ತಜ್ಞರು, ಅದನ್ನು ಹಲವು ಕಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ನೇರಳೆ ಬೀಜದಲ್ಲಿದೆ. ಬೀಜದಲ್ಲಿರುವ ಹೈಪೋಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಜೊತಗೆ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳು, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೆರವಾಗುತ್ತವೆ.

ರಕ್ತಹೀನತೆ ನಿವಾರಣೆ

ರುತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು. ಇದರಲ್ಲಿರುವ ಕಬ್ಬಿಣದ ಅಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ರಕ್ತ ಹೀನತೆಯಿಂದ ಮುಕ್ತಿ ನೀಡುತ್ತದೆ. ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ.

ಅತಿಸಾರಕ್ಕೆ ಪರಿಹಾರ

ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಜೊತೆಗೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶವು ದೇಹವನ್ನು ನೈಸರ್ಗಿಕವಾಗಿ ಶುದ್ಧವಾಗಿಸುತ್ತದೆ. ಅಲ್ಲದೆ, ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಕ್ಯಾನ್ಸರ್ ವಿರೋಧಿ ಗುಣಗಳೂ ಇದರಲ್ಲಿವೆ.

ಹೊಟ್ಟೆ ಸಮಸ್ಯೆ ಮಾಯ

ಹೊಟ್ಟೆಯೊಳಗೆ ಕಾಣಿಸಿಕೊಳ್ಳುವ ಹಲವು ಸಮಸ್ಯೆ ಅಥವಾ ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣವಾಗಿದೆ. ಅಲ್ಸರ್ ಸಮಸ್ಯೆ ನಿವಾರಣೆಯಲ್ಲಿ ನೇರಳೆ ಹಣ್ಣು ಬಹು ಮುಖ್ಯ ಪಾತ್ರ ವಹಿಸುತ್ತದೆ. ಜನನೇಂದ್ರಿಯದ ಸೋಂಕಿಗೂ ಇದು ಪರಿಣಾಮಕಾರಿ ಉಪಚಾರ ಆಗಬಲ್ಲದು. ಜೊತೆಗೆ ಸೋಂಕಿನಿಂದ ಹೆಚ್ಚಾಗುವ ಭೇದಿ ಸಮಸ್ಯೆಯನ್ನು ನಿವಾರಿಸುವ ಗುಣವೂ ಈ ಹಣ್ಣಿನಲ್ಲಿದೆ.

ಸಮಗ್ರ ಆರೋಗ್ಯ ವೃದ್ಧಿ

ನೇರಳೆ ಬೀಜಗಳುನ್ನು ಚೆನ್ನಾಗಿ ಒಣಗಿಸಿ, ಸಿಪ್ಪೆ ತೆಗೆದು ಹಸಿರು ಬಣ್ಣದ ಭಾಗವನ್ನು ಮಾತ್ರ ಸಂಗ್ರಹಿಸಿ, ಮತ್ತಷ್ಟು ದಿನ ಬಿಸಿಲಲ್ಲಿ ಒಣಗಿಸಿ, ಸರಿಯಾಗಿ ಒಣಗಿದ ಬಳಿಕ ಅದನ್ನು ನಯವಾಗಿ ಪುಡಿಯಾಗುವಂತೆ ರುಬ್ಬಿ. ಈ ಒಂದು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಮಗ್ರ ಆರೋಗ್ಯ ಸುಧಾರಣೆ ಕಂಡುಬರುತ್ತದೆ.

ತ್ವಚೆ ಆರೋಗ್ಯಕ್ಕೆ ನೇರಳೆ ನೆರವು

ರುಚಿಯಾಗಿರುವ ನೇರಳೆ ಹಣ್ಣು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಮುಖ್ಯವಾಗಿ ಮೊಡವೆಗಳನ್ನು ನಿವಾರಿಸುವುದಲ್ಲಿ ಇದು ಪರಿಣಾಮಕಾರಿ. ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿ, ದೇಸಿ ಹಸುವಿನ ಹಾಲಿನಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗುತ್ತವೆ.

ನೇರಳೆ ಬೀಜದ ಪುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ, ಎರಡು ಹನಿ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಹಾಕಿ ಕಲಸಿ ಫೇಸ್ ಪ್ಯಾಕ್ ಮಾಡಿ, 15 ನಿಮಿಷಗಳ ನಂತರ ತೊಳೆಯಬೇಕು. ಮೂರು ಅಥವಾ ನಾಲ್ಕು ದಿನಗಳಿಗೆ ಒಮ್ಮೆ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ನೇರಳೆ ಬೀಜದ ಪುಡಿಗೆ ಕಡಲೆ ಹಿಟ್ಟು, ಒಂದೆರಡು ಹನಿ ಬಾದಾಮಿ ಎಣ್ಣೆ, ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ಸಂಪೂರ್ಣ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ತಿಂಗಳಿಗೆ ಒಮ್ಮೆ ಹಿಗೆ ಮಾಡಿದಾಗ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.

  • ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚಿದರೆ ಗಾಯಗಳು ಬೇಗ ಗುಣವಾಗುತ್ತವೆ. ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ನೇರಳೆ ಎಲೆ, ತೊಗಟೆಯನ್ನು ಬಳಸಲಾಗುತ್ತದೆ.
  • ನೇರೆಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಹೊಮ್ಮುವುದು ನಿಲ್ಲುತ್ತದೆ. ಜೊತೆಗೆ ಹಲ್ಲುಗಳು ಸದೃಢವಾಗುತ್ತವೆ.
  • ಖನಿಜಾಂಶಗಳಿAದ ಶ್ರೀಮಂತವಾಗಿರುವ ನೇರಳೆ ಹಣ್ಣು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.
  • ನೇರಳೆ ಹಣ್ಣಿನ ರಸವನ್ನು ಆಗಾಗ ಕುಡಿಯುವುದರಿಂದ ಕೆಮ್ಮು, ಉಸಿರಾಟದ ತೊಂದರೆ, ಮತ್ತು ಉಬ್ಬಸ ಕಡಿಮೆಯಾಗುತ್ತದೆ. ಈ ರಸವನ್ನು ಮೌತ್ ವಾಶ್ ರೀತಿಯೂ ಬಳಸಬಹುದು.
  • ಚರ್ಮದ ಉರಿ ಸಮಸ್ಯೆ ಇರುವವರು ನೇರಳೆ ಹಣ್ಣಿನ ಪೇಸ್ಟ್ಗೆ ಸಾಸಿವೆ ಎಣ್ಣೆ ಬೆರೆಸಿ ಉರಿ ಇರುವ ಜಾಗಕ್ಕೆ ಹಚ್ಚಿದರೆ ಉರಿ ಶಮನವಾಗುತ್ತದೆ.
  • ವಯಸ್ಸಾದವರು ನಿತ್ಯ ನೇರಳೆ ಹಣ್ಣು ಸೇವಿಸಿದರೆ ಚರ್ಮ ಸುಕ್ಕಾಗುವುದನ್ನು ತಡೆಯಬಹುದು. ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ.
  • ಈ ಹಣ್ಣಿನಲ್ಲಿರುವ ಬಯೋಆಕ್ಟೀವ್ ಫಿಟೋಕೆಮಿಕಲ್ ಲಿವರ್ ಸಮಸ್ಯೆ ಮತ್ತು ಕ್ಯಾನ್ಸರ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
Published On: 11 August 2021, 09:33 AM English Summary: Do you know of the hundreds of medicinal properties of java plum fruit?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.