1. ಆರೋಗ್ಯ ಜೀವನ

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ!!!!

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು ಅಮೂಲ್ಯ ಪೋಷಕಾಂಶಗಳಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಗಳಲ್ಲಿ ಲಿಮೋಲಿನ್, ಬಯೋಫ್ಲೇವನಾಯ್ಡ್, ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ವಾಸ್ತವವಾಗಿ ಈ ಪೋಷಕಾಂಶಗಳು ತಿರುಳಿನಲ್ಲಿರುವುದಕ್ಕಿಂತಲೂ ಹೆಚ್ಚು ಪೌಷ್ಟಿಕ ಮೌಲ್ಯಗಳನ್ನು ಹೊಂದಿದ್ದು ಹೆಚ್ಚು ಆರೋಗ್ಯಕರವಾಗಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಯಲ್ಲಿರುವ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳಿಗೆ ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣಗಳಿವೆ. ಅಲ್ಲದೇ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಬನ್ನಿ, ಈ ಸಿಪ್ಪೆಯ ಸೇವನೆಯಿಂದ ಇನ್ನೂ ಯಾವ ಬಗೆಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ... ಒಂದು ವೇಳೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದರೆ ಅಥವಾ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಲವಣ ಸಾಂದ್ರೀಕೃತ ಕಲ್ಲುಗಳಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆಯದ ಹೊರತು ಕಿತ್ತಳೆ ಸಹಿತ ಲಿಂಬೆಯ ಜಾತಿಯ ಯಾವುದೇ ಹಣ್ಣುಗಳ ಸಿಪ್ಪೆಗಳನ್ನು ಸೇವಿಸಬಾರದು. ಕೆಲವೊಮ್ಮೆ ಈ ಸಿಪ್ಪೆಗಳ ಪುಡಿಯನ್ನು ರುಚಿಕಾರಕವಾಗಿ ಸೇರಿಸಿ ಅಗತ್ಯಕ್ಕೂ ಹೆಚ್ಚೇ ಸೇವಿಸುವ ಮೂಲಕ ದೇಹದಲ್ಲಿರುವ ಮೂಳೆಗಳು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವ ಸಾಮರ್ಥ್ಯವೇ ಏರುಪೇರಾಗಬಹುದು ಹಾಗೂ ಪರೋಕ್ಷವಾಗಿ ಆರೋಗ್ಯವನ್ನು ಬಾಧಿಸಬಹುದು. ಕಿತ್ತಳೆ ಜಾತಿಯ ಹಣ್ಣುಗಳ ಸಿಪ್ಪೆಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟುಗಳಿವೆ ಹಾಗೂ ಈ ಲವಣಗಳು ದೇಹ ಇತರ ಖನಿಜಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಬಾಧಿಸಬಹುದು. ಹಾಗಾಗಿ ಇವುಗಳ ಸೇವನೆಯಲ್ಲಿ ಮಿತ ಪ್ರಮಾಣ ಅನುಸರಿಸುವುದು ಅಗತ್ಯ.

 

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ:

ಕಿತ್ತಳೆ ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ ಹಾಗೂ ಹಲವಾರು ಬಗೆಯ ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತವೆ. ಲಿಂಬೆ, ಕಿತ್ತಳೆ, ಚಕ್ಕೋತ ಮೊದಲಾದ ಹಣ್ಣುಗಳ ಸಿಪ್ಪೆಗಳಲ್ಲಿ ವಿಕಿರಣದಿಂದ ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುವ ಶಕ್ತಿ ಇದೆ. ಅಲ್ಲದೇ ಹೆಚ್ಚಿನ ಪ್ರಮಾನದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ದೇಹದಲ್ಲಿರುವ ಇತರ ಆಂಟಿ ಆಕ್ಸಿಡೆಂಟುಗಳ ಪ್ರಭಾವವನ್ನು ಹೆಚ್ಚಿಸಲೂ ನೆರವಾಗುತ್ತದೆ.

ಮಧುಮೇಹವನ್ನು ತಡೆಗಟ್ಟಲು ನೆರವಾಗಬಹುದು:

Journal of Life Sciences ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಕಿತ್ತಳೆಯ ಸಿಪ್ಪೆಗಳಲ್ಲಿ polymethoxylated flavones (PMFs) ಎಂಬ ಪೋಷಕಾಂಶಗಳಿದ್ದು ಇವು ಮಧುಮೇಹವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ. ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಲಿಂಬೆಯ ಸಿಪ್ಪೆಯ ಸೇವನೆಯಿಂದ ನಮ್ಮ ರಕ್ತದಲ್ಲಿರುವ ಸೀರಂ ಟ್ರೈಗ್ಲಿಸರೈಡುಗಳು ಅಥವಾ ಕೊಲೆಸ್ಟ್ರಾಲ್ ನ ಒಂದು ಭಾಗ ಎಂದು ನಾವು ತಿಳಿದುಕೊಂಡಿರುವ ಈ ಅಂಶ ಕಡಿಮೆಯಾಗುತ್ತದೆ. ಅಲ್ಲದೇ ಕಿತ್ತಳೆಯ ಸಿಪ್ಪೆಯ ಸೇವನೆಯಿಂದ ಇನ್ಸುಲಿನ್ ಅನ್ನು ತಾಳಿಕೊಳ್ಳುವ ಕ್ಷಮತೆಯೂ ಉತ್ತಮಗೊಳ್ಳುತ್ತದೆ.

ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

Agriculture and Food Chemistry ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ನಿಮ್ಮ ನಿತ್ಯದ ಆಹಾರದಲ್ಲಿ ಲಿಂಬೆಯ ಜಾತಿಯ ಹಣ್ಣುಗಳ ಸಿಪ್ಪೆಯನ್ನು ಸೇರಿಸಿಕೊಳ್ಳುವ ಮೂಲಕ ಇದರಲ್ಲಿರುವ PMF ಎಂಬ ಕಣಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಲು ನೆರವಾಗುತ್ತದೆ. ಸಂಶೋಧನೆಗಳ ಮೂಲಕ ಕಂಡುಕೊಂಡ ಪ್ರಕಾರ ಹ್ಯಾಮ್ಸ್ಟರ್ ಎಂಬ ಪುಟ್ಟ ಇಲಿಯ ಗಾತ್ರದ ಸಸ್ತನಿಗಳ ಆಹಾರದಲ್ಲಿ ಕೇವಲ ಶೇಖಡಾ ಒಂದರಷ್ಟು PMF ಎಂಬ ಕಣಗಳನ್ನು ಹೆಚ್ಚಿಸಿದಾಗ ಇವುಗಳ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಮಟ್ಟ 40 ಶೇಖಡಾದಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಇದೇ ಪ್ರಕಾರದ ಇನ್ನೊಂದು ಸಂಶೋಧನೆಯಲ್ಲಿ ಈ ಪ್ರಯೋಗಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಿದಾಗಲೂ ಹೆಚ್ಚೂ ಕಡಿಮೆ ಇದೇ ಪ್ರಕಾರದ ಫಲಿತಾಂಶಗಳು ಕಂಡುಬಂದಿವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದಾಗ ಆರೋಗ್ಯ ಉತ್ತಮಗೊಳ್ಳುವ ಜೊತೆಗೇ ಕಿತ್ತಳೆಯ ಸಿಪ್ಪೆಗಳು ಎದೆಯುರಿಯನ್ನು ಕಡಿಮೆಗೊಳಿಸುತ್ತದೆ.

 

ಜೀರ್ಣಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.

ಲಿಂಬೆಯ ಸಿಪ್ಪೆಗಳ ಸೇವನೆಯಿಂದ ಹುಳಿತೇಗು, ಆಮ್ಲೀಯತೆ ಹಾಗೂ ಜಠರದ ಸೆಡೆತ ಮೊದಲಾದ ತೊಂದರೆಗಳು ಇಲ್ಲವಾಗುವ ಜೊತೆಗೇ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಲಿಮೋನೀನ್ ಎಂಬ ಪೋಷಕಾಂಶ ಎದೆಯುರಿಯನ್ನು ಕಡಿಮೆಗೊಳಿಸುವ ಗುಣ ಹೊಂದಿದೆ ಎಂದು Mother Earth Medicine ಎಂಬ ವೈದ್ಯಕೀಯ ನಿಯತಕಾಲಿಕೆ ವರದಿ ಮಾಡಿದೆ. ಒಂದು ವೇಳೆ ನೀವು ಅಜೀರ್ಣತೆ, ವಾಯುಪ್ರಕೋಪ ಮೊದಲಾದ ತೊಂದರೆಗಳಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಕಿತ್ತಳೆಯ ಜಾತಿಯ ಹಣ್ಣುಗಳ ಸಿಪ್ಪೆಗಳನ್ನು ಸೇರಿಸಿಕೊಳ್ಳಲು ಮರೆಯದಿರಿ.

ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ.

ಲಿಂಬೆಯ ಜಾತಿಯ ಹಣ್ಣುಗಳ ಸಿಪ್ಪೆಗಳಲ್ಲಿ, ವಿಶೇಷವಾಗಿ ಲಿಂಬೆಹಣ್ಣಿನ ಸಿಪ್ಪೆಯಲ್ಲಿರುವ ತೈಲಗಳು ಅತ್ಯುತ್ತಮವಾದ ಅತಿಸೂಕ್ಷ್ಮಜೀವಿ ನಿವಾರಕ ಗುಣ ಹೊಂದಿವೆ. British Journal of Pharmacology and Toxicology ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಲಿಂಬೆಯ ಸಿಪ್ಪೆಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ, ವೈರಸ್ ನಿವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣಗಳಿವೆ. ಈ ಗುಣಗಳು ಶೀತ, ಫ್ಲೂ ಮೊದಲಾದ ಸಾಮಾನ್ಯ ತೊಂದರೆಗಳ ವಿರುದ್ದ ಹೋರಾಡುವ ಜೊತೆಗೇ ಕರುಳಿನಲ್ಲಿ ಆಶ್ರಯ ಪಡೆದಿದ್ದ ಪರಾವಲಂಬಿ ಕ್ರಿಮಿಗಳನ್ನೂ ನಿವಾರಿಸುವ ಮೂಲಕ ಕರುಳಿನಲ್ಲಿ ಎದುರಾಗಬಹುದಾಗಿದ್ದ ಸೋಂಕುಗಳಿಂದ ರಕ್ಷಿಸುತ್ತದೆ. ಅಲ್ಲದೇ ಲಿಂಬೆಯ ಜಾತಿಯ ಹಣ್ಣುಗಳ ಸಿಪ್ಪೆಗಳು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

 

ಲಿಂಬೆಯ ಜಾತಿಯ ಹಣ್ಣುಗಳ ಸಿಪ್ಪೆಗಳನ್ನು ನಿತ್ಯದ ಆಹಾರಗಳಲ್ಲಿ ಅಳವಡಿಸಿಕೊಳ್ಳುವುದು ಹೇಗೆ?

ನಿಮ್ಮ ಆಯ್ಕೆಯ ಯಾವುದೇ ಲಿಂಬೆಯ ಜಾತಿಯ ಹಣ್ಣುಗಳ ಸಿಪ್ಪೆಯನ್ನು ಸುಲಿದು ಚಿಕ್ಕದಾಗಿ ತುರಿದುಕೊಳ್ಳಿ. ಇದಕ್ಕಾಗಿ ಸಾವಯವ ವಿಧಾನದಿಂದ ಬೆಳೆದ ಹಣ್ಣುಗಳನ್ನೇ ಆಯ್ದುಕೊಳ್ಳಿ. ಕೃತಕ ವಿಧಾನದಿಂದ ಬೆಳೆದ ಹಣ್ಣುಗಳ ಸಿಪ್ಪೆಗಳ ಮೇಲೆ ಭಾರೀ ಪ್ರಮಾಣದ ಕೀಟನಾಶಕಗಳಿರುವ ಸಾಧ್ಯತೆ ಇದೆ, ಇವು ಜೀರ್ಣಾಂಗಗಳಲ್ಲಿ ಸೋಂಕು ಹಾಗೂ ಕ್ರಿಮಿಗಳು ಆವರಿಸಿಕೊಳ್ಳಲು ಕಾರಣವಾಗಬಹುದು. ಈ ತುರಿಯನ್ನು ಜಾಮ್ ತಯಾರಿಸಲು ಬಳಸಬಹುದು. ಇತರ ಜಾಮ್ ಗಳೊಂದಿಗೆ ಬೆರೆಸಿದಾಗಲೂ ಆ ಜಾಮ್ ನ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ತುರಿಯನ್ನು ನಿಮ್ಮ ನೆಚ್ಚಿನ ಹಣ್ಣುಗಳ ರಸಗಳೊಂದಿಗೆ ಬೆರೆಸಿ ಸೇವಿಸುವ ಮೂಲಕ ಭಿನ್ನವಾದ ರುಚಿಯನ್ನು ಪಡೆಯುವ ಜೊತೆಗೇ ಪೌಷ್ಟಿಕಾಂಶಗಳ ಮೌಲ್ಯವೂ ಹೆಚ್ಚುತ್ತದೆ. ಇನ್ನೊಂದು ವಿಧಾನವೆಂದರೆ ಮೊಸರಿನಲ್ಲಿ ಈ ತುರಿಯನ್ನು ಬೆರೆಸಿ ಸೇವಿಸುಬುದು. ನಿಮ್ಮ ನೆಚ್ಚಿನ ಹಣ್ಣುಗಳ ಮೇಲೆ ಈ ತುರಿಯನ್ನು ಚಿಮುಕಿಸಿಕೊಂಡು ಸೇವಿಸಬಹುದು ಜೊತೆಗೇ ಕೊಂಚ ಜೇನನ್ನೂ ಸಿಂಪಡಿಸಿಕೊಂಡರೆ ಈ ರುಚಿ ಇನ್ನಷ್ಟು ಹೆಚ್ಚುತ್ತದೆ. ಅಷ್ಟೇ ಅಲ್ಲ, ಸಾಲಾಡ್ ಗಳ ಅಂದ ಹೆಚ್ಚಿಸಲು, ಬೇಯಿಸಿದ ಬಿಸ್ಕತ್, ಪೈ ಕೇಕ್ ಮೊದಲಾದವುಗಳ ರುಚಿ ಮತ್ತು ಪ್ಪೌಷ್ಟಿಕಾಂಶವನ್ನು ಹೆಚ್ಚಿಸಲೂ ನೆರವಾಗುತ್ತದೆ.

Published On: 30 September 2018, 09:18 AM English Summary: Critic content fruits health benefits

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.