ಕೊರೋನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ವಿಧಿಸಿದ ಲಾಕ್ ಡೌನ್ನಿಂದಾಗಿ ಕಳೆದ ಮೂರು ತಿಂಗಳಿಂದ ಬಾಗಿಲು ಮುಚ್ಚಿದ ಜಗತ್ಪ್ರಸಿದ್ಧ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಕ್ತರಿಗಾಗಿ ಜೂನ್ 11ರಿಂದ ಬಾಗಿಲು ತೆರೆಯಲಿದೆ.
ಸುಮಾರು ದಿನಗಳಿಂದ ತಿರುಮಲ ತಿರಪತಿಯ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತಾದಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆಯನ್ನು ದಿನಕ್ಕೆ 6,000 ಮಿತಿಗೆ ಸೀಮಿತಗೊಳಿಸಲಾಗಿದೆ ಎಂದು ಎಂದು ಟಿಟಿಡಿ ಚೇರ್ಮನ್ ವೈ.ವಿ.ಸುಬ್ಬಾ ರೆಡ್ಡಿ, ಎಕ್ಸಿಕ್ಯೂಟಿವ್ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಅಡಿಷನಲ್ ಎಕ್ಸಿಕ್ಯೂಟಿವ್ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ಕೊರೋನಾ ಸೋಂಕು ಜನಸಮುದಾಯದಲ್ಲಿ ಹರಡಬಾರದೆಂದು ಈ ಎಚ್ಚರಿಕೆಯ ಕ್ರಮಕೈಗೊಂಡಿದೆ. ಸಾಮಾನ್ಯ ಸಂದರ್ಭದಲ್ಲಿ ಪ್ರತಿನಿತ್ಯ 60 ಸಾವಿರ ಜನರಿಗೆ ದರ್ಶನ ನೀಡಲಾಗುತ್ತಿತ್ತು. ಕೊರೋನಾ ಮುಂಜಾಗ್ರತಾ ಕ್ರಮವಾಗಿ ಆರು ಅಡಿ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ಸುಲಭವಾಗಿ ಸಿಗಲ್ಲ ದರ್ಶನ
ಕೋವಿಡ್ 19 ನಿಯಮಗಳ ಪ್ರಕಾರ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನಕ್ಕೆ ನಿರಾಕರಿಸಲಾಗುತ್ತಿದೆ. ಟಿಟಿಡಿಯ ಎಲ್ಲ ಉದ್ಯೋಗಿಗಳು ಪಿಪಿಇ ಕಿಟ್ ಧರಿಸಿಯೇ ಭಕ್ತರ ಸರದಿಯನ್ನು ನಿರ್ವಹಿಸಲಿದ್ದಾರೆ. ದರ್ಶನ ಬಯಸುವ ಭಕ್ತರ ಟ್ರಾವೆಲ್ ಹಿಸ್ಟರಿ ಗಮನಿಸಿದ ಬಳಿಕವೇ ಅವರಿಗೆ ಅನುಮತಿ ನೀಡಲಾಗುತ್ತದೆ.
ಜೂನ್ 11ರಿಂದಲೇ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು 13 ಗಂಟೆ ಕಾಲ ದರ್ಶನ ಭಾಗ್ಯ ಲಭಿಸಲಿದೆ. ಗಂಟೆಗೆ 500 ಭಕ್ತರಿಗೆ ದೇವರ ದರ್ಶನ ಒದಗಿಸುವ ಪ್ರಯತ್ನ ನಡೆದಿದೆ. ವಿಶೇಷ ದರ್ಶನ 3,000 ಟಿಕೆಟ್ ಗಳು ಆನ್ಲೈನ್ನಲ್ಲಿ ಲಭ್ಯವಿದ್ದು ಪ್ರತಿ ಟಿಕೆಟ್ಗೆ 300 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನುಳಿದ 3,000 ಕೋಟಾದಲ್ಲಿ ಉಚಿತ ದರ್ಶನ ಮತ್ತು ಬೆಟ್ಟ ಹತ್ತಿ ಬರುವವರಿಗೆ ಮೀಸಲಿರಿಸಲಾಗಿದೆ. ಆನ್ಲೈನ್ ಟಿಕೆಟ್ ಮಾರಾಟ ಜೂನ್ 8 ರಿಂದ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Share your comments