ಕೋವಿಡ್ -19 ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ತೆರಳಿರುವವರಿಗೆ ಉದ್ಯೋಗ ಕಂಡುಕೊಳ್ಳಲು ಸಹಕಾರ ಇಲಾಖೆ ಹೊಸ ಅವಕಾಶ ಕಲ್ಪಿಸಿದೆ.
ಹೈನುಗಾರಿಕೆ (Animal Husbandry), ಮೀನುಗಾರಿಕೆ (Fisheries) ನಡೆಸುವವರಿಗೆ ಶೂನ್ಯ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗಳ (ಡಿಸಿಸಿ) ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ರಾಜ್ಯ ಸರಕಾರ ಈಗಾಗಲೇ ರೈತರಿಗೆ (Farmers) 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುತ್ತಿದೆ. ಇನ್ನು ರೈತರು ಕೃಷಿಗೆ ಪೂರಕವಾಗಿ ಹೈನುಗಾರಿಕೆ ಅಥವಾ ಮೀನುಗಾರಿಕೆಯನ್ನು ಕೈಗೊಳ್ಳಲು 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಿದೆ ಎಂದರು
ನಿಯಮ ಅನ್ವಯ:
ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಹಕಾರ ಸಂಘಗಳು ರೈತರು ಅಥವಾ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಕೇಂದ್ರ ಸರಕಾರದ ನಿಯಮದಂತೆ ಶೇ. 7ರ ಬಡ್ಡಿ ದರದಲ್ಲಿ ಸಾಲ ನೀಡಬಹುದು. ಇದನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವವರಿಗೆ ಕೇಂದ್ರ ಸರಕಾರದ ಶೇ.3ರ ಬಡ್ಡಿ ಸಹಾಯಧನ ಮತ್ತು ರಾಜ್ಯ ಸರಕಾರದ ಶೇ. 4 ಬಡ್ಡಿ ಸಹಾಯ ಧನವನ್ನು ಮರು ಪಾವತಿಸುವುದರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿಯೇ ಸಾಲ ನೀಡಿದಂತಾಗುತ್ತದೆ.
Share your comments