1. ಪಶುಸಂಗೋಪನೆ

ಪಶುಗಳಿಗೆ ಗಟ್ಟಿ ಸರಕು ರೋಗ ಬರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು

 ಹಸುಗಳು ಇತರೆ ಪ್ರಾಣಿಗಳಾದ ಕುರಿ, ಮೇಕೆಗಳಂತೆ ಕೇವಲ ನಿರ್ದಿಷ್ಟ ಆಯ್ದ ಆಹಾರವನ್ನು ಸೇವಿಸದೆ ಮೇಯುವಾಗ ಸಿಕ್ಕಿದ ಪದಾರ್ಥಗಳನೆಲ್ಲಾ ತಿನ್ನುವ ಅಭ್ಯಾಸ ಹೊಂದಿರುತ್ತವೆ. ಹಾಗಾಗಿ ಕೆಲವೊಮ್ಮೆ ಮೇವಿನೊಂದಿಗೆ ಪರಕೀಯ ವಸ್ತುಗಳು ಆಕಸ್ಮಿಕವಾಗಿ ಹಸುವಿನ ಮೇವಿನ ಮೂಲಕ ದೇಹ ಸೇರಿ ಜೀರ್ಣಕ್ರಿಯೆಯನ್ನು ಏರುಪೇರು ಮಾಡುತ್ತದೆ.

ಇನ್ನೂ ಕೆಲವೊಮ್ಮೆ ಲೋಹದಿಂದ ನಿರ್ಮಿತವಾದ ಪರಕೀಯ ವಸ್ತುಗಳಾದ ಬ್ಲೇಡ್, ಸಿರಿಂಜ್ ಸೂಜಿ, ಮೊಳೆ, ಮುಳ್ಳು ತಂತಿ, ಗುಂಡು ಪಿನ್ನು, ಸಣ್ಣ ಚಮಚ, ದಬ್ಬಳ, ನೆಟ್ಟು, ಬೋಲ್ಟು, ಬಟ್ಟೆ ಹೊಲಿಯುವ ಸೂಜಿ, ಸೇಫ್ಟಿ ಪಿನ್ನು, ಹೇರ್ ಪಿನ್ನು, ಉಗುರು ಇನ್ನೂ ಮುಂತಾದ ಯಾವುದೇ ರೀತಿಯ ಚೂಪಾದ ವಸ್ತುಗಳು ಮೇವಿನೊಂದಿಗೆ ಬೆರೆತು ಹಸುವಿನ ಹೊಟ್ಟೆ ಸೇರುತ್ತವೆ. ತದನಂತರ ರೆಟಿಕ್ಯುಲಮ್ ಎಂಬ ಮತ್ತೊಂದು ಉದರದ ಉಪಭಾಗದ ಮೂಲಕ ಎದೆ ಭಾಗವನ್ನು ತಲುಪಿ, ಹೃದಯದ ಪೊರೆಯನ್ನು ತಿವಿದು ಘಾಸಿಗೊಳಿಸಿ ಸೋಂಕಿಗೆ ಒಳಪಡಿಸುತ್ತದೆ. ಮತ್ತೂ ಕೆಲವು ಸಂದರ್ಭಗಳಲ್ಲಿ ದೇಹದ ಇತರೆ ಅಂಗಾಂಗಗಳನ್ನು ಹಾನಿಮಾಡುತ್ತದೆ. ಇಂಥ ರೋಗಕ್ಕೆ ಗಟ್ಟಿ ಸರಕು ರೋಗ (ಹಾರ್ಡ್‌ವೇರ್ ಡಿಸೀಸ್) ಅಥವಾ ಟ್ರೊಮಾಟಿಕ್ ರೆಟಿಕ್ಯುಲೋ ಪೆರಿಟೊನೈಟಿಸ್ ಎಂದು ಕರೆಯುತ್ತಾರೆ.

ಎಂತಹ ಹಸುಗಳು ಈ ಭಾದೆಗೆ ತುತ್ತಾಗುತ್ತವೆ ?

ಎಲ್ಲಾ ರೀತಿಯ ಹಸುಗಳು ಈ ರೋಗಕ್ಕೆ ತುತ್ತಾಗುತ್ತವೆ. ಆದರೆ ಆಹಾರದಲ್ಲಿ ರಂಜಕದ ಕೊರತೆಯಿದ್ದರೆ, ಹಸುವು ಕಾಕಸಿವು (ಪೈಕಾ) ಪರಿಸ್ಥಿತಿಯಿಂದ ಬಳಲುತ್ತದೆ . ಇದರ ಪರಿಣಾಮ ಸಿಕ್ಕಿದ್ದೆಲ್ಲವನ್ನು ತಿನ್ನುವಂತಹ ಅಭ್ಯಾಸವನ್ನು ಬೆಳಸಿಕೊಳ್ಳುತ್ತವೆ. ಹಾಗಾಗಿ ಅಂತಹ ಹಸುಗಳಲ್ಲಿ ಈ ರೋಗ ಅಧಿಕವಾಗಿ ಕಂಡುಬರುತ್ತದೆ. ಗರ್ಭ ಧರಿಸಿದ ರಾಸುಗಳಲ್ಲಿ, ಗರ್ಭಕೋಶದಿಂದ ಉದರದ ಮೇಲೆ ಬೀಳುವ ಒತ್ತಡದಿಂದ ರೋಗದ ತೀವ್ರತೆ ಹೆಚ್ಚುತ್ತದೆ.

ರೋಗದ ಲಕ್ಷಣಗಳು ಏನು ?

  • ಮೇವು ತಿನ್ನದಿರುವಿಕೆ
  • ಹೈನುರಾಸುಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಇಳಿಮುಖ.
  • ಪುನರಾವರ್ತಿತವಾಗಿ ಹಸುವಿನ ಹೊಟ್ಟೆಯ ಉಬ್ಬರ ಬರುವುದು.
  • ಹೊಟ್ಟೆ ನೋವು
  • ಜ್ವರ, ಹೃದಯ ಬಡಿತದಲ್ಲಿ ಏರುಪೇರು, ಬುಸುಗುಡುವುದು.
  • ಮಲಬದ್ಧತೆ, ಒಣ ಮತ್ತು ಗಟ್ಟಿಯಾದ ಸಗಣಿಯನ್ನು ವಿಸರ್ಜಿಸಲ್ಪಡುವುದು.
  • ಹಸುವಿನ ಎದೆಯ ಭಾಗವನ್ನು ಒತ್ತಡದೊಂದಿಗೆ ಒತ್ತಿ ಹಿಡಿದಾಗ ಹಸುವು ನೋವಿನಿಂದ ಅರಚುವುದು.
  • ಗಂಟಲು ಭಾಗದಲ್ಲಿನ ರಕ್ತ ನಾಳವು ಅಧಿಕ ರಕ್ತದೊತ್ತಡದೊಂದಿಗೆ ಮಿಡಿಯುತ್ತಿರುತ್ತದೆ.
  • ಹಸುವಿನ ಕುತ್ತಿಗೆಯಿಂದ ಹಿಡಿದು ಎದೆ ಭಾಗದವರೆಗೆ ಊದಿಕೊಂಡಿರುತ್ತದೆ.ಇದಕ್ಕೆ ಬ್ರಿಸ್ಕೆಟ್ ಎಡೀಮ ಎನ್ನುತ್ತಾರೆ.
  • ಮುಂಗಾಲುಗಳನ್ನು ಎದೆಯ ಭಾಗಕ್ಕೆ ತಗುಲದಂತೆ ಪರಸ್ಪರ ಅಗಲಿಸಿಕೊಂಡು ನಡೆಯುತ್ತವೆ.
  • ಬೆನ್ನಿನ ಭಾಗವನ್ನು ಮೇಲಕ್ಕೆ ಎತ್ತಿಕೊಂಡು ನಡೆಯುತ್ತವೆ. ಇದರ ಪರಿಣಾಮ ಹಸುವಿನ ನಡಿಗೆಯ ಶೈಲಿಯಲ್ಲಿ ಬದಲಾವಣೆ ಕಂಡುಬರುತ್ತದೆ.
  • ಹೃದಯ ಸ್ತಂಭನ ಮತ್ತು ಸಾವು.

ರೋಗ ತಪಾಸಣೆಯನ್ನು ಮಾಡುವುದು ಹೇಗೆ ?

  • ಸರಳವಾಗಿ ಉದ್ದದ ನಯವಾದ ಮರದ(ಬಿದಿರನ ಬೊಂಬು) ತುಂಡನ್ನು ಹಸುವಿನ ಮುಂಗಾಲುಗಳ ನಡುವೆ ಸಿಕ್ಕಿಸಿ ಎದೆಯ ಭಾಗವನ್ನು ಎತ್ತಿ ಹಿಡಿದರೆ, ಹಸುವು ನೋವಿನಿಂದ ಬಳಲಿ ಅರಚುತ್ತದೆ. ಇದಕ್ಕೆ "ಬೊಂಬು ಪರೀಕ್ಷೆ" ಎಂದು ಕರೆಯುತ್ತಾರೆ.
  • ನಿಖರ ತಪಾಸಣೆಗಾಗಿ ತಜ್ಞ ಪಶುವೈದ್ಯರಿಂದ ಹಸುವಿನ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ, ಕ್ಷ-ಕಿರಣವನ್ನು ಮಾಡಿಸಬಹುದು, ಫೇರೋಸ್ಕೋಪಿ, ಮತ್ತು ಉದರ ದರ್ಶಕದಿಂದ ರೋಗವನ್ನು ಪತ್ತೆ ಹಚ್ಚಬಹುದು.

ಚಿಕಿತ್ಸೆ ಏನು ?

  • ತಜ್ಞ ಪಶುವೈದ್ಯರಿಂದ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ, ಪರಕೀಯ ಲೋಹದ ವಸ್ತುವನ್ನು ಹೊರತೆಗೆಸುವುದು.
  • ಹಸುವಿನ ಚಲನೆಯನ್ನು ನಿಯಂತ್ರಣದಲ್ಲಿಡುವುದು.
  • ಮುಂಗಾಲುಗಳು, ಹಿಂಗಾಲುಗಳಿಗಿಂತ ಎತ್ತರವಾಗಿ ನಿಲ್ಲುವಂತೆ ಅನುಗುಣವಾಗಿ ನೆಲಹಾಸನ್ನು ಮಾಡಿ, ಚೂಪಾದ ಲೋಹದ ವಸ್ತು ಎದೆಯನ್ನು ತಿವಿಯುವ ತೀವ್ರತೆಯನ್ನು ಕಡಿಮೆಗೊಳಿಸುವುದು.
  • ದೇಹದ ಒಳಗೆ ರೋಗದ ವೃದ್ಧಿಯನ್ನು ನಿಯಂತ್ರಿಸಲು ಆಂಟಿಬಯಾಟಿಕ್ ಔಷಧಿಗಳನ್ನು ಕೊಡಿಸುವುದು.

ನಿಯಂತ್ರಣಾ ಕ್ರಮಗಳು:

  • ಹಸುವು ಸೇವಿಸುವ ಮೇವಿನಲ್ಲಿ ಯಾವುದೇ ರೀತಿಯ ಚೂಪಾದ ಪರಕೀಯ ವಸ್ತುಗಳು ಸೇರದಂತೆ ನಿಗಾವಹಿಸುವುದು.
  • ಪಶುವಿನ ಆಹಾರದಲ್ಲಿನ ರಂಜಕದ ನ್ಯೂನತೆಯನ್ನು ಸರಿಪಡಿಸುವುದು.
  • ತುಂಡರಿಸಿದ ಮೇವನ್ನು, ಆಯಾಸ್ಕಾಂತದಿಂದ ನಿರ್ಮಿತವಾದ ವಿಶೇಷವಾದ ವೇದಿಕೆಯ ಮೇಲೆ ಹರಡಿ , ಲೋಹದ ವಸ್ತುಗಳು ಅದಕ್ಕೆ ಅಂಟಿಕೊಳ್ಳುವಂತೆ ಮಾಡುವುದು.
  • ಮುಂದುವರಿದ ದೇಶಗಳಲ್ಲಿ ನೇರವಾಗಿ ಸುಮಾರು5 ಸೆಂ.ಮೀ ಉದ್ದ ಮತ್ತು 1-1.25 ಸೆಂ.ಮೀ ಅಗಲದ ದಂಡ ಕಾಂತಗಳನ್ನು ಹಸುವಿಗೆ ತಿನ್ನಿಸಿ, ಅದನ್ನು ಉದರದಲ್ಲಿಯೇ ಇರುವಂತೆ ಮಾಡಿ, ಮುಂದೆ ಸೇರಬಹುದಾದ ಲೋಹದ ವಸ್ತುಗಳನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳುವಂತೆ ಮಾಡುವ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ಡಾ. ಮಹೇಂದ್ರ ಎಸ್, ಪಶುವೈದ್ಯರು‌,  ಆನೇಕಲ್, ಮೊ 8431110644ಗೆ ಸಂಪರ್ಕಿಸಲು ಕೋರಲಾಗಿದೆ.

Published On: 24 October 2020, 05:06 PM English Summary: traumatic reticuloperitonitis

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.