1. ಅಗ್ರಿಪಿಡಿಯಾ

ವಿಶ್ವ ಮಣ್ಣು ದಿನ 2021 : ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ

KJ Staff
KJ Staff
World Soil Day

ಮಣ್ಣು  ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಮನುಷ್ಯ , ಪ್ರಾಣಿ, ಜೀವಿಗಳು, ಸಸ್ಯಗಳಿಗೆ

ಆಧಾರವೇ ಮಣ್ಣು . ಮಣ್ಣಿನಿಂದ  ಜೀವ, ಮಣ್ಣಿನಿಂದ ಕಾಯ, ಮಣ್ಣು  ಅಳಿದರೆ ಮಾನವ ಅಳಿದಂತೆ ಎಂದು ತಿಳಿಸಿದ ಶ್ರೀ ಪುರಂದರದಾಸರ ಮಾರ್ಮಿಕ ನಿಲುವು ನಿತ್ಯ ಸತ್ಯವಾಗಿದೆ . ಜಗತ್ತಿನ ಶೇ. 95 ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಡಿರುವುದು ಕಂಡುಬಂದಿರುವುದರಿಂದ ಉತ್ಪಾದಕತೆಯಲ್ಲಿ ಶೇ.17 ರಷ್ಟು ಕಡಿಮೆಯಾಗಿದೆ.

ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು, ಅದರ

ಸಂರಕ್ಷಣೆಯ ಉದ್ದೇಶದಿಂದ ಥೈಲಾಂಡ್‍ನ ರಾಜರಾದ ದಿವಂಗತ ಹೆಚ್.ಎಂ. ಭೂಮಿ

ಬೊಲ್‍ಅದೂಲ್ಯದೇಜ್ ಹುಟ್ಟಿದ ದಿನವಾದ ಡಿಸೆಂಬರ್ 5 ನ್ನು ಪ್ರತಿ ವರ್ಷ ‘ವಿಶ್ವ ಮಣ್ಣಿನ ದಿನ’ ಎಂದು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸು ್ಸ ಮಾಡಿರುತ್ತದೆ. ನಂತರ 2014ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ವಿಶ್ವ ಮಣ್ಣು ದಿನ-2021 ರ ಧ್ಯೇಯ ‘ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ’ ಎಂದು ಘೋಷಿಸಿದೆ. ಮಣ್ಣಿನ ಸವಕಳಿ, ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿದೆ. ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯ ವಾಗಿ  ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಕರಗುವ ಲವಣಗಳನ್ನು ಭೂಮಿಯಲ್ಲಿ ಉಳಿಸಿಕೊಂಡಾಗ ಮಣ್ಣಿನ ಸವುಳು ಸಂಭವಿಸುತ್ತದೆ. ಇದು ನೈಸರ್ಗಿಕವಾಗಿ ಅಥವಾ ಅನುಚಿತ ಮಾನವ ಚಟುವಟಿಕೆಗಳಿಂದ, ವಿಶೇಷವಾಗಿ ಕೃಷಿ ಪದ್ಧತಿಗಳಿಂದ ಸಂಭವಿಸುತ್ತದೆ. ಇದಲ್ಲದೆ, ಕಡಿಮೆ ಉಪ್ಪು ಕರಗುವಿಕೆಯಿಂದಾಗಿ ಕೆಲವು ಭೂಮಿಗಳು ಆರಂಭದಲ್ಲಿ ಚೌಳಾಗುತ್ತದೆ.

ಮಣ್ಣು ಚೌಳಾಗಲು ಕಾರಣಗಳು:-

 ಕಡಿಮೆ ಮಳೆ, ಒಣ ಹವಾಮಾನ ಮತ್ತು ಅತಿಯಾದ ಲವಣಗಳು ಭೂಮಿಯಲ್ಲಿ

ಉಳಿದುಕೊಂಡಾಗ ಮಣ್ಣು ಚೌಳಾಗುತ್ತದೆ.

 ಹೆಚ್ಚಿನ  ಆವಿಯಾಗುವಿಕೆಯಿಂದ ನೆಲದ ಮೇಲ್ಮೈಗೆ ಲವಣಗಳು ಸೇರುತಹತದೆ.

 ಕಳಪೆ ಒಳಚರಂಡಿ ಅಥವಾ ನೀರು ನಿಲ್ಲುವುದರಿಂದ, ನೀರಿನ ಸಾಗಣೆಯ ಕೊರತೆಯಿಂದಾಗಿ

ಲವಣಗಳು ಮಣ್ಣಿನ ಮೇಲೆ ಲೇಪನಗೊಳ್ಳುತ್ತದೆ.

 ಉಪ್ಪು-ಸಮೃದ್ಧ ನೀರಿನಿಂದ ನೀರಾವರಿ, ಇದು ಭೂಮಿಯಲ್ಲಿ ಉಪ್ಪಿನಾಂಶವನ್ನು

ವರ್ಧಿಸುತ್ತದೆ

 ಆಳವಾಗಿ ಬೇರೂರಿರುವ ಸಸ್ಯವರ್ಗ ಇಲ್ಲದಿರುವುದರಿಂದ ಲವಣಗಳನ್ನು ಮಣ್ಣಿನ  ಆಳಕ್ಕೆ

ಸೇರದೇ ಮೇಲ್ಮೈನಲ್ಲಿ ಉಳಿದುಕೊಳ್ಳುತ್ತದೆ.

 ಅಂತರ್ಜಲ ಭೂ ಮೇಲ್ಮೈನಲ್ಲಿದ್ದಾಗ ಹೆಚ್ಚು ಲವಣಾಂಶ ಮೇಲ್ಮಣ್ಣಿನಲ್ಲಿ  ಶೇಖರಗೊಳ್ಳುತ್ತದೆ.

 ಸಮುದ್ರ ಮಟ್ಟ ಏರಿಕೆಯಿಂದ ಸಮುದ್ರದ ಲವಣಗಳು ತಗ್ಗು ಭೂಮಿಗೆ ನುಗ್ಗಿದಾಗ ಮಣ್ಣು

ಚೌಳಾಗುತ್ತದೆ.

 ರಸಗೊಬ್ಬರಗಳ ಅನುಚಿತ ಬಳಕೆಯಿಂದ ಹೆಚ್ಚುವರಿ ನೈಟ್ರಿಫಿಕೇಶನ್ ಕ್ರಿಯೆಯಿಂದ ಮಣ್ಣಿನ

ಸವುಳು ಹೆಚ್ಚಾಗುವುದು.

ಸವಳು ಮತ್ತು ಕ್ಷಾರ ಮಣ್ಣು: ಚೌಳು ಮತ್ತು ಕ್ಷಾರ ಮಣ್ಣುಗಳು ಶುಷ್ಕ ಮತ್ತು  ಅರೆ ಶುಷ್ಕ ವಲಯಗಳಲ್ಲಿ ಮಾತ್ರವಲ್ಲದೆ ಎಲ್ಲಾ ರೀತಿಯ ವಾತಾವರಣದಲ್ಲೂ ವ್ಯಾಪಕವಾಗಿದೆ. ಆದುದರಿಂದ ಈ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದ್ದಲದಲದೆ, ಈ ಸಮಸ್ಯೆ ಉಂಟಾಗಲು ಕಾರಣಗಳು, ಇಂತಹ ಮಣ್ಣುಗಳ ಗುರುತಿಸುವಿಕೆ ಮತ್ತು ವರ್ಗೀಕರಣ ಅಷ್ಟೇ ಮುಖ್ಯವಾಗಿದೆ. ಪ್ರಾಥಮಿಕ ಖನಿಜಗಳೇ ಮಣ್ಣಿನ ಲವಣಗಳ ಮೂಲವಾಗಿರುತ್ತವೆ. ಆದರೆ ಲವಣಗಳು ಮಣ್ಣಿನಲ್ಲಿ ಕರಗುವ ಲವಣಗಳ ಪ್ರಮಾಣ ಹೆಚ್ಚಾದಾಗ  ಮಣ್ಣು ಚೌಳಾಗುತ್ತದೆ. ಅದನ್ನು ಸುಧಾರಿಸದೇ ಬಿಟ್ಟರೆ ಚೌಳಿನ ಜೊತೆಗೆ ಸೋಡಿಯಂ ಲವಣಾಂಶಗಳು ಸೇರಿದಾಗ ಅಂತಹ ಮಣ್ಣು ಕ್ಷಾರವಾಗುತ್ತದೆ.

ಅ) ಸವಳು (ಚೌಳು) ಮಣ್ಣು: ಚೌಳು ಮಣ್ಣುಗಳಲ್ಲಿ ಸಸ್ಯ ಬೆಳವಣಿಗೆಗೆ ಅಡ್ಡಿ ಬರುವಷ್ಟು ಅಧಿಕ ಪ್ರಮಾಣದಲ್ಲಿ ತಟಸ್ಥ ಲವಣಗಳು ಸಂಗ್ರಹವಾಗಿರುತ್ತವೆ. ಸಂತೃಪ್ತ ಮಣ್ಣಿನ ಸಾರಸಂಗ್ರಹದ ವಿದ್ಯುದ್ವಾಹಕತೆಯೂ 4.0 ಮಿಲಿ ಮೋಹ್ಸಗಿಂತಲೂ ಅಧಿಕವಾಗಿರುತ್ತವೆ, ಲವಣಗಳು ಮುಖ್ಯವಾಗಿ ಸಲ್ಫೇಟ್ ಮತ್ತು  ಕ್ಲೋರೈಡ್‍ಗಳಾಗಿರುತ್ತವೆ. (ಸೋಡಿಯಂನ ಪ್ರಮಾಣವು ಒಟ್ಟು ಕರಗುವ ಧನ ವಿದ್ಯುದ್ವಾಹೀಕರಣದಲ್ಲಿ ಶೇ.50 ಕ್ಕಿಂತ ಕಡಿಮೆ ಇರುತ್ತದೆ.) ಸವಳು ಮಣ್ಣಿನ ರಸಸಾರ ಮೌಲ್ಯವು 8.5 ಕ್ಕಿಂತ ಕಡಿಮೆ ಇರುತ್ತದೆ. ಅಲ್ಲಿ ಸೋಡಿಯಂ ಲವಣಗಳು ವಿನಿಮಯವಾಗುವ ಪ್ರತ್ಯಾಮ್ಲ  15% ಗಿಂತ ಕಡಿಮೆ ಇರುತ್ತದೆ. (ಮಣ್ಣಿನ ಮೇಲೆ ಶೇಖರವಾದ ಲವಣಗಳು ಬಿಳಿ ಬಣ್ಣದ್ದಾಗಿರುವುದರಿಂದ ಇವುಗಳಿಗೆ ಬಿಳಿ ಕ್ಷಾರ  ಭೂಮಿಗಳೆಂದು ಕರೆಯುತ್ತಾರೆ). ಮಣ್ಣಿನ ಪಾಶ್ರ್ವದೃಶ್ಯದಲ್ಲಿ ಗಟ್ಟಿ ಸ್ತರವಾಗಲೀ ಅಥವಾ ಗಡಸು ಜೇಡಿ ಸ್ತರವಾಗಲೀ ಇರುವುದಿಲ್ಲ.

ಆ) ಚೌಳು–ಕ್ಷಾರ (ಸವಳುಕರ್ಲು) ಮಣ್ಣುಗಳು: ಈ ಮಣ್ಣುಗಳಲ್ಲಿ ತಟಸ್ಥ ಕರಗುವ ಲವಣಗಳು ಹಾಗೂ ಅಧಿಶೋಷಿತ ಸೋಡಿಯಂ ವಿದ್ಯುದ್ವಾಹಿ ಕಣಗಳು ಅಧಿಕ ಮಟ್ಟದಲ್ಲಿ ಸಂಗ್ರಹವಾಗಿರುತ್ತವೆ. ಆದ್ದರಿಂದ ಲವಣಾಂಶ ಇಲ್ಲಿಯೂ ಸಹ 4.0 ಮಿಲಿ ಮೋಹ್ಸಗಿಂತಲೂ ಹೆಚ್ಚಾಗಿರುತ್ತದೆ. ಆದರೆ ವಿನಿಮಯ  ಸೋಡಿಯಂ ಶೇಕಡ 15 ಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಮಣ್ಣಿನ ರಸಸಾರ ಸಾಧಾರಣವಾಗಿ 8.5 ಕ್ಕಿಂತ ಕಡಿಮೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ಸೋಡಿಯಂನಿಂದ ಯಾವ ಅಪಾಯವೂ ಇರುವುದಿಲ್ಲ. ಅಲ್ಲದೆ ಅನೇಕ ಸಾರಿ ಗಟ್ಟಿಯಾಗಿ, ಇಂಗದ ರಚನೆಯನ್ನು ವೃದ್ದಿಗೊಳಿಸುತ್ತವೆ. ಸಾಮಾನ್ಯವಾಗಿ  ನೀರಾವರಿಯಲ್ಲಿಯ ಜವಳು ಭೂಮಿಗಳನ್ನು ಈ ವರ್ಗಕ್ಕೆ ಸೇರಿಸಬಹುದು. ಈ ಮಣ್ಣುಗಳ ಕೆಳಸ್ತರಗಳಲ್ಲಿ ಗಟ್ಟಿ ಪದರಗಳಿದ್ದು ನೀರಿನ ಚಲನೆಗೆ ಹಾಗೂ ಬಸಿಯುವಿಕೆಗೆ  ಅಡ್ಡಿ ಮಾಡುತ್ತದೆ. ಮೇಲ್ಪದರಗಳಲ್ಲಿ ಚೌಳು ಮಣ್ಣಿನಂತೆಯೇ ಬಿಳಿ ಪದರಗಳೂ ಅಲ್ಲಲ್ಲಿ ಕಾಣಿಸುತ್ತವೆ. ಕೆಳ ಮಣ್ಣಿನಲ್ಲಿ ಗಟ್ಟಿಯಾದ ಪದರವೂ ಇರಬಹುದು.

ಇ) ಕ್ಷಾರ (ಕರ್ಲು) ಮಣ್ಣುಗಳು: ಈ ಮಣ್ಣುಗಳಲ್ಲಿ ತಟಸ್ಥ ಕರಗುವ ಲವಣಗಳು ಕಡಿಮೆ ಇರುತ್ತವೆ. ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸೋಡಿಯಂ ಕಾರ್ಬೊನೇಟ್ ಹಾಗೂ ಸೋಡಿಯಂ ಬೈಕಾರ್ಬೊನೇಟ್‍ಗಳ ಸಂಗ್ರಹ ಅಧಿಕವಾಗಿರುತ್ತದೆ. ಆದುದರಿಂದ ಈ ಮಣ್ಣುಗಳ ಲವಣಾಂಶ 4.0 ಕ್ಕಿಂತ ಕಡಿಮೆಯಿರುತ್ತದೆ. ವಿನಿಮಯವಾಗುವ ಸೋಡಿಯಂ ಸಾಮಥ್ರ್ಯವು 15 ಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ. ಮಣ್ಣಿನ  ರಸಸಾರ ಮೌಲ್ಯವು 8.5 ಕ್ಕಿಂತ ಹೆಚ್ಚಾಗಿರುತ್ತದೆ . ಸೋಡಿಯಂನಿಂದ ಚೆದುರಿಸುವ ಗುಣದ ಮೂಲಕ ಕರ್ಲು ಮಣ್ಣುಗಳು ಕೆಟ್ಟ ಭೌತಿಕ ಸ್ಥಿತಿಯಲ್ಲಿರುತ್ತವೆ. ಅಲ್ಲದೆ ಹ್ಯೂಮಸ್ ಚದುರಿದಂತೆ ಆಗಿ ಮಣ್ಣಿಗೆ  ಕಪ್ಪು ಬಣ್ಣ ಬರುತ್ತದೆ. ಕೆಳ ಮಣ್ಣಿನಲ್ಲಿರುವ ಚದುರಿದ  ಹ್ಯೂಮಸ್ ಬಾಷ್ಪೀಭವನದಿಂದ ಮೇಲ್ಮಣ್ಣಿಗೆ ಪಸರಿಸಿ ಕಪ್ಪು ಬಣ್ಣವನ್ನು ಕೊಡುವುದು. ಆದ್ದರಿಂದ  ಇವುಗಳಿಗೆ ಕಪ್ಪುಕ್ಷಾರ (ಸೊಲನೇಟ್ಸ) ಮಣ್ಣುಗಳೆಂದು ಕರೆಯುತ್ತಾರೆ . ಕರ್ಲು ಭೂಮಿಗಳಲ್ಲಿ ನೀರು  ಇಂಗುವಿಕೆ ಕಡಿಮೆ ಇರುತ್ತದೆ. ಕ್ಷಾರ ಲವಣಗಳು ಭೂಮಿಯಲ್ಲಿ ಮಣ್ಣಿನ ರಚನೆಯನ್ನು ಕೆಡಿಸಿ ಅಪ್ರವೇಶತೆಯುಳ್ಳ ಸ್ತರವನ್ನು ನಿರ್ಮಾಣ ಮಾಡುವುದರಿಂದ ಮಳೆಯಾದೊಡನೆ ನೀರುತಗ್ಗು ಜಾಗದಲ್ಲಿ ನಿಂತು ಬಿಡುತ್ತದೆ. ಕೆಳಗೆ ಭಾರವಾದ ಮತ್ತು  ಗಾಢ ಜೇಡಿ ಮಣ್ಣು ಇರುತ್ತದೆ. ಇದು ನೀರು ಬಸಿಯುವಿಕೆಗೂ, ಬೇರು ಬೆಳವಣಿಗೆಗೂ ಹಾಗೂ ಉಳಿಮೆಗೂ ಅಡ್ಡಿಪಡಿಸುತ್ತದೆ.

ಚೌಳು ಮತ್ತು ಕ್ಷಾರ ಮಣ್ಣುಗಳ ಸುಧಾರಣೆ: ಲವಣ ಪೀಡಿತ ಜಮೀನುಗಳನ್ನು ಕೃಷಿ ಯೋಗ್ಯ

ಜಮೀನುಗಳಾಗಿ ಪರಿವರ್ತಿಸುವುದನ್ನು ಸುಧಾರಣೆ ಎಂದು ಕರೆಯಬಹುದು. ಕ್ಷಾರ  ಮಣ್ಣುಗಳ

ಸುಧಾರಣೆಗೆ ಈ ಮುಂದೆ ಸೂಚಿಸುವ ಕ್ರಮಗಳನ್ನು ಕೈಗೊಳ್ಳಬಹುದು. ಕೇವಲ ಒಂದೆರಡು

ಕ್ರಮಗಳಿಂದ ಕ್ಷಾರ  ಮಣ್ಣಿನ ಸುಧಾರಣೆಯಾಗುವುದಿಲ್ಲ ಹಲವಾರು ಕ್ರಮಗಳನ್ನು ಏಕಕಾಲದಲ್ಲಿ ಕೈಗೊಳ್ಳುವುದರಿಂದ ಕ್ಷಾರ   ಮಣ್ಣುಗಳ ಸುಧಾರಣೆ ಬೇಗ ಸಫಲವಾಗುತ್ತದೆ. ಈ ದಿಸೆಯಲ್ಲಿ ಯಾವ ಯಾವ ಕ್ರಮಗಳನ್ನು ಜೋಡಿಸಿ ಕೈಗೊಳ್ಳಬೇಕೆಂದು ಜಮೀನಿನ ಪರಿಸ್ಥಿತಿಗೆ ಸಂಬಂಧಿಸಿದ ವಿಷಯ.

  1. ಸರಿಯಾದ ಸಾಗುವಳಿ ಕ್ರಮಗಳು ಹಾಗೂ ಗೊಬ್ಬರ ಹಾಕುವಿಕೆ: ನೇಗಿಲು ಹೊಡೆಯುವುದು, ಸಾವಯವ ಗೊಬ್ಬರ ಹಾಕುವುದು ಮುಂತಾದ ಸಾಗುವಳಿ ಕ್ರಮಗಳು ಸಹ ಕ್ಷಾರಗಳ ಸಂಗ್ರಹಣೆಯನ್ನು ನಿಯಂತ್ರಿಸುತ್ತವೆ. ಸಾವಯವ ಗೊಬ್ಬರಗಳಾದ ಹೊಂಗೆ, ಹಿಪ್ಪೆ, ಬೇವಿನ ಹಿಂಡಿಗಳನ್ನು ಕರ್ಲು ಜಮೀನುಗಳನ್ನು ಸುಧಾರಿಸಲು ಉಪಯೋಗಿಸಬಹುದು. ಹಸಿರು ಗೊಬ್ಬರಕ್ಕೆ ಉಪಯೋಗವಾಗುವ  ಡೈಯಾಂಚಾ ಬೆಳೆಯನ್ನು ಕರ್ಲು ಮಣ್ಣಿನಲ್ಲಿ ಬೆಳೆಯುವುದು ಉತ್ತಮ. ಆಳವಾಗಿ ನೇಗಿಲು  ಹೊಡೆಯುವುದರಿಂದ ಭೂಮಿ ಸಡಿಲಾಗಿ ಹೆಚ್ಚು ನೀರು ಇಂಗುವುದಕ್ಕೆ ಆಸ್ಪದವಾಗುತ್ತದೆ. ಇಂಗುವ  ನೀರಿನ ಜೊತೆಗೆ ಕರಗಿದ ಲವಣಗಳೂ ಸೋರಿ ಆಳಕ್ಕಿಳಿಯುತ್ತವೆ. ಹಾಗೆಯೇ ಮಣ್ಣಿನಲ್ಲಿ ತೇವ ಸಂಗ್ರಹವಾಗುವುದಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಕ್ಷಾರ ಜಮೀನುಗಳನ್ನು ಬೀಳು ಬಿಡದೆ ಯೋಗ್ಯ ಸಾಗುವಳಿ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

  1. ಲವಣ ಎಳಕುಗಳನ್ನು ಕರೆದು ತೆಗೆಯುವಿಕೆ: ಮೇಲ್ಮಣ್ಣಿನಲ್ಲಿ ಸಂಗ್ರಹವಾಗಿರುವ ಲವಣ ಎಳಕುಗಳನ್ನು ಕೊಚ್ಚಿ ಅಥವಾ ಕೆರೆದು ತೆಗೆದು ಹಾಕುವುದರಿಂದ ಕ್ಷಾರತೆ ಕಡಿಮೆಯಾಗುತ್ತದೆ. ಆದರೆ ಇದು ಪರಿಣಾಮಕಾರಿಯಾದ ಕ್ರಮವೇನಲ್ಲ, ಏಕೆಂದರೆ ಇನ್ನೂ ಮಣ್ಣಿನಲ್ಲಿ ಲವಣಗಳು ಅಧಿಕ ಪ್ರಮಾಣದಲ್ಲಿದ್ದೆ ಇರುತ್ತದೆ. ಈ ಕ್ರಮವೂ ಹೆಚ್ಚು ವೆಚ್ಚದಾಯಕವಾಗಿದೆ ಏಕೆಂದರೆ ಪ್ರತಿ ವರ್ಷವೂ ತೆಗೆಯಬೇಕಾಗುತ್ತದೆ.

  2. ಚರಂಡಿ ಹಾಕುವಿಕೆ: ಚರಂಡಿ ಪದ್ಧತಿಯು ಪ್ರಮುಖವಾಗಿ ಬಿಳಿ ಕ್ಷಾರ ಮಣ್ಣುಗಳಲ್ಲಿ ಉಪಯುಕ್ತ. ಇವುಗಳಲ್ಲಿ ತಟಸ್ಥ ಕರಗುವ ಲವಣಗಳು, ಸುಣ್ಣ ಹಾಗೂ ಮ್ಯಾಗ್ನೀಸಿಯಂಗಳ ಮಟ್ಟ ಹೆಚ್ಚಿಗಿದ್ದು ಸೋಡಿಯಂ ಅತ್ಯಲ್ಪವಾಗಿರುತ್ತದೆ. ಇಂತ ಮಣ್ಣನ್ನು ಚರಂಡಿಗೊಳಪಡಿಸಿದರೆ, ಲವಣಗಳು ಸೋರಿ ಹೋಗಿ ಮಣ್ಣು ಬೆಳೆಗಳಿಗೆ ಸೂಕ್ತವಾಗುತ್ತದೆ. ಇದಕ್ಕೆ ತೆರೆದ ಬಸಿಗಾಲುವೆಗಳನ್ನಾಗಲೀ ಅಥವಾ ಹಂಚಿನ ಒಳ ಚರಂಡಿಗಳನ್ನಾಗಲೀ ಬಳಸಬಹುದು.

  3. ನೀರು ಹರಿಸುವಿಕೆ: ಹಂಚಿನ ಕೊಳವೆಗಳನ್ನು ಮಣ್ಣಿನ ಆಳದಲ್ಲಿ ಹಾಕಿ ಭೂಮಿಯ ಮೇಲೆ ನೀರು ಹರಿಸುವುದರಿಂದ ಸ್ರವಿಸುವ ನೀರಿನ ಜೊತೆಗೆ ಲವಣಗಳು ಕರಗಿ ಕೊಳವೆಗಳ ಮುಖಾಂತರ ತೃಪ್ತಿಕರವಾಗಿ ಸೋರಿಹೋಗುತ್ತದೆ. ನೀರಾವರಿ ಮಾಡುವಾಗ ಈ ಪದ್ಧತಿಯನ್ನು ಅನುಸರಿಸುವುದಾದರೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿಸುವುದು ಒಳ್ಳೆಯದು. ಆಗಾಗ್ಗೆ ಹರಿಸುವುದರಿಂದ ಮಣ್ಣಿನ ಸವುಳುತನವನ್ನು ಕಳೆಯಬಹುದು. ನೀರಾವರಿಗಾಗಿ ಉಪಯೋಗಿಸುವ ನೀರು ಮಾತ್ರಕಡಿಮೆ ರೇವೆ ಕಣಗಳನ್ನು ಹಾಗೂ ಅತಿ ಕಡಿಮೆ ಲವಣಗಳನ್ನು ಹೊಂದಿರಬೇಕು.

  4. ಸರಿಯಾಗಿ ನೀರುಣಿಸುವಿಕೆ: ನೀರಾವರಿ ನೀರನ್ನು ಮಿತವಾಗಿ ಉಪಯೋಗಿಸಬೇಕಾದದ್ದು ಅವಶ್ಯಕ. ಏಕೆಂದರೆ ಬೆಳೆಗಳಿಗೆ ಬೇಕಾಗುವುದಕ್ಕಿಂತ ಸ್ವಲ್ಪ ಮಾತ್ರ ಹೆಚ್ಚು ನೀರುಣಿಸಬೇಕಾಗುತ್ತದೆ. ಮೇಲಿಂದ ಮೇಲೆ ಹಗುರ ನೀರಾವರಿ ಮಾಡುವುದರಿಂದ ಲವಣಗಳು ಜಲಮಿಶ್ರಿತಗೊಂಡು ಅವುಗಳ ದಟ್ಟಣೆಕುಗ್ಗುತ್ತದೆ, ಜೊತೆಗೆ ಇಂಗುವ ನೀರಿನ ಜೊತೆಗೆ ಲವಣಗಳು ಆಳಕ್ಕೆ ಇಳಿಯುತ್ತವೆ. ಇದರಿಂದಾಗಿ ಮಣ್ಣಿನ ಸ್ಥಿತಿ ಸರಿಯಾಗಿರುವುದರಿಂದ ಸಸ್ಯಗಳ ಬೆಳವಣಿಗೆಗೆ ವ್ಯತ್ಯಾಸವಾಗುವುದಿಲ್ಲ. ಸವಳು ಮಣ್ಣಿನಲ್ಲಿ ನೀರಾವರಿ ಮಾಡುವ ಕಾಲ ಮಹತ್ವದ್ದು.

  1. ಕ್ಷಾರ ಲವಣಗಳನ್ನು ಸಹಿಸುವ ಅಥವಾ ಅಪೇಕ್ಷಿಸುವ ಬೆಳೆಗಳು: ಆಳವಾಗಿ ಬೇರೂರುವ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಕ್ಷಾರ ಮಟ್ಟವನ್ನು ಮಿತವಾಗಿಡಬಹುದು. ಚೌಳು ಹೆಚ್ಚಾಗಿದ್ದರೆ ಜಾಲಿ, ಬೊಗಸೆ, ಸೆಸ್‍ಬೇನಿಯಾ, ಡೈಯಾಂಬಾ ಮುಂತಾದ ಬೆಳೆಗಳನ್ನು ಬೆಳೆಯಬಹುದು. ಸುಗರ್‍ಬೀಟ್, ಹತ್ತಿ, ಜೋಳ, ಗೋಧಿ, ಕುಸುಬೆ ಮುಂತಾದ ಬೆಳೆಗಳು ಮಣ್ಣಿನಲ್ಲಿ ಬೆಳೆಯುತ್ತವೆ. ಈ ಬೆಳೆಗಳ ಬೇರುಗಳು ಕೆಳಮಣ್ಣಿನಲ್ಲಿ ನೀರು ಸ್ರವಿಸುವುದಕ್ಕೆ ಸಹಕಾರಿಗಳಾಗಿವೆ. ಈ ಬೇರುಗಳು ಹೊರಬಿಡುವ ಇಂಗಾಲದ ಡೈಆಕ್ಸೈಡ್ತೆ ಕ್ಷಾರತೆ ಯನ್ನು ತಟಸ್ಥಗೊಳಿಸುತ್ತದೆ ಮತ್ತು ಸೋಡಿಯಂ ಲವಣಗಳು ಮಣ್ಣಿನ ಆಳಕ್ಕೆ ತಳ್ಳಲ್ಪಡುತ್ತವೆ.

  2. ರಾಸಾಯನಿಕ ಸುಧಾರಕಗಳ ಉಪಯೋಗ: ಕ್ಷಾರ ಮಣ್ಣುಗಳನ್ನು ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಮಣ್ಣು ವಿಶ್ಲೇಷಣೆ ಮಾಡಿದ ನಂತರ ಗಂಧಕವನ್ನಾಗಲೀ ಅಥವಾ ಜಿಪ್ಸಂನ್ನಾಗಲಿ,

ಪೈರೇಟ್‍ಗಳನ್ನಾಗಲಿ, ಹಾಕಬೇಕೆಂದು ನಿರ್ದಿಷ್ಟವಾಗಿ ತಿಳಿಯುತ್ತದೆ. ಇವುಗಳು ಕ್ಷಾರಮಣ್ಣುಗಳಲಿರುವ  ಸೋಡಿಯಂ ಮಣ್ಣನ್ನು ಸುಣ್ಣಯುಕ್ತ ಮಣ್ಣನ್ನಾಗಿ ಪರಿವರ್ತಿಸಬಹುದು. ಸುಧಾರಕಗಳನ್ನು ಹಾಕಿದಾಗ  ಅದರ ರಾಸಾಯನಿಕ ಪ್ರತಿಕ್ರಿಯೆಯನ್ನು ತ್ವರಿತಗೊಳಿಸಲು ಮಣ್ಣನ್ನು ತೇವವಾಗಿಡಬೇಕಾಗುತ್ತದೆ. ಮಣ್ಣಿನಲ್ಲಿ ಸುಧಾರಕಗಳನ್ನು ಚೆನ್ನಾಗಿ ಬೆರಕೆಯಾಗುವಂತೆ ಸಾಗುವಳಿ ಮಾಡಬೇಕಾಗುತ್ತದೆ. ಈ  ಸೋಡಿಯಂ ಸಲ್ಫೇಟುಗಳನ್ನು ನೀರು ಹರಿಸಿ ಬಸಿಗಾಲುವೆಗಳ ಮುಖಾಂತರ ಹೊರಹಾಕುವುದರಿಂದ ಕ್ಷಾರತೆ ನಂಜು ಶಮನವಾಗುತ್ತದೆ.

ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ. ಸಜೀವ ಮಣ್ಣು  ಸಕಲ  ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ  ಶುದ್ಧ ಮಾಡುತ್ತ ದೆ. ಸಾವಯವ ವಸ್ತುವನ್ನು  ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ  ನೀಡುತ್ತದೆ. ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ.

ಶ್ರೀಮತಿ. ಪ್ರೀತು ಡಿ. ಸಿ., ಡಾ. ಸವಿತಾ, ಎಸ್.ಎಂ. ಮತ್ತು ಡಾ.ಲತಾ ಆರ್. ಕುಲಕರ್ಣಿ, ಕೃಷಿ ವಿಜ್ಞಾನ ಕೇಂದ್ರ, ಮಾಗಡಿ, ರಾಮನಗರ

Published On: 04 December 2021, 08:16 PM English Summary: World Soil Day 2021: Prevent Soil Erosion and Increase Soil Productivity

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.