1. ಅಗ್ರಿಪಿಡಿಯಾ

ಅನ್ನದ ಮೂಲ ಮಣ್ಣು: ಆಹಾರ ಇಲ್ಲಿಂದ ಪ್ರಾರಂಭ!

Hitesh
Hitesh
The Root Soil of Rice: Food Starts Here!

ರಾಮನಗರ ಮಾಗಡಿಯ ಕೃಷಿ ವಿಜ್ಞಾನ ಕೇಂದ್ರದ ಪ್ರೀತು ಡಿ. ಸಿ., ಡಾ.ಲತಾ ಆರ್. ಕುಲಕರ್ಣಿ ಮತ್ತು ಡಾ. ಸೌಜನ್ಯ.ಎಸ್ ಅವರು ಮಣ್ಣಿನ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಮಣ್ಣಿನ ಮಹತ್ವದ ಬಗ್ಗೆ ಇಲ್ಲಿದೆ ವಿವರ..

ನಮ್ಮೆಲ್ಲರ ಉತ್ತಮ ಆರೋಗ್ಯದ ಗುಟ್ಟು, ಅತ್ಯುತ್ತಮ ಆಹಾರ. ಆದರೆ, ಅತ್ಯುತ್ತಮ ಆಹಾರದ ಮೂಲ ಪಂಚಭೂತಗಳಲ್ಲಿ

ಒಂದಾದ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲಕ್ಕೂ ಮಣ್ಣೇ ಆಧಾರ.

ಪುರಂದರದಾಸರು ಹೇಳಿರುವ ಹಾಗೆ “ಮಣ್ಣಿಂದ ಕಾಯ, ಮಣ್ಣಿನಿಂದ ಜೀವ, ಮಣ್ಣು ಬಿಟ್ಟವರಿಗೆ ಆಧಾರವಿಲ್ಲ”.

ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಣ್ಣೇ ಮೂಲ ಆಧಾರ.

ಮಣ್ಣಿನ ಜೊತೆ ನಮಗೊಂದು ಭಾವನಾತ್ಮಕ ಸಂಬಂಧವಿದೆ. ನಾವು ಬಿಟ್ಟರೂ ಮಣ್ಣು ನಮ್ಮನ್ನು ಬಿಡುವುದಿಲ್ಲ.

ಕೊನೆಗೆ ಸೇರಬೇಕಾಗಿರುವುದು ಕೂಡ ಮಣ್ಣಿನಲ್ಲೇ ಎಂಬ ಅರಿವು ಎಲ್ಲರಿಗೂ ಇದೆ.

ಉತ್ತರ ಕೊರಿಯಾದಲ್ಲಿ ಮಕ್ಕಳಿಗೆ ಬಾಂಬ್‌,ಗನ್‌ ಹೆಸರು, ಕಾರಣವೇನು ಗೊತ್ತೆ?!

ಹೌದು, ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು ಅದರ ರಕ್ಷಣೆಗೆ ಪಣತೊಡುವ

ಉದ್ದೇಶದಿಂದ ಪ್ರತಿ ವರ್ಷ ಥೈಲಾಂಡ್‌ನ ರಾಜರಾದ ದಿವಂಗತ ಹೆಚ್.ಎಂ. ಭೂಮಿ ಬೊಲ್ ಅದೂಲ್ಯದೇಜ್ ಹುಟ್ಟಿದ ದಿನವಾದ ಡಿಸೆಂಬರ್ 5ನ್ನು ವಿಶ್ವ ಮಣ್ಣಿನ ದಿನ ಎಂದು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸುವಂತೆ ಅಂತರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸ್ಸು ಮಾಡಿತ್ತು.

ನಂತರ 2014ರ ಡಿಸೆಂಬರ್ 5ರಂದು ಮೊದಲ ಬಾರಿಗೆ ಅಧೀಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು.

ಪ್ರತಿ ವರ್ಷ ಒಂದೊಂದು  ಧ್ಯೇಯವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ಈ ವರ್ಷದ ಧ್ಯೇಯವಾಕ್ಯ “Soil: Where Food Begins” (ಮಣ್ಣು: ಆಹಾರ ಇಲ್ಲಿಂದ ಪ್ರಾರಂಭ).

ವಿಶ್ವ ಮಣ್ಣಿನ ದಿನ ಮತ್ತು ಅದರ ಅಭಿಯಾನ ಮಣ್ಣಿನ ನಿರ್ವಹಣೆಯಲ್ಲಿ ಕಂಡುಬರುತ್ತಿರುವ ಸವಾಲುಗಳನ್ನು ಎದುರಿಸುವ ಮೂಲಕ

ಆರೋಗ್ಯಕರ ಪರಿಸರ ವ್ಯವಸ್ಥೆಗಳು, ಆರೋಗ್ಯಕರ ಮಣ್ಣಿನ ಪ್ರಾಮುಖ್ಯತೆ, ಮಣ್ಣಿನ ಸಂಪನ್ಮೂಲಗಳ

ಸುಸ್ಥಿರ ನಿರ್ವಹಣೆ ಮತ್ತು ಮಾನವ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ನಮ್ಮ ಎಲ್ಲಾ ಆಧುನಿಕ ಅಭಿವೃದ್ದಿಯ ಹೊರತಾಗಿಯೂ, ಭೂಮಿಯ ಮೇಲೆ ವಾಸಿಸುವ ಜೀವಿಗಳು ಮಣ್ಣಿನ ಮೇಲೆ ಅವಲಂಬಿತವಾಗಿವೆ.

ಜಗತ್ತಿನ ಶೇ. 95 ರಷ್ಟು ಆಹಾರ ಪದಾರ್ಥ ಮಣ್ಣಿನಿಂದ ಉತ್ಪಾದಿಸಲಾಗುತ್ತಿದೆ.

ಈಗಾಗಲೇ ಶೇ. 33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದು ವರದಿಗಳು ಹೇಳುತ್ತದೆ.

ಮಣ್ಣಿನ ಫಲವತ್ತತೆಯು, ಮಣ್ಣಿನ ಜೀವಿಗಳು ಮತ್ತು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು

ಮತ್ತು ಅನುಕೂಲಕರ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಳೆ ಕೊಯ್ಲು ಮಾಡಿದ ನಂತರ ಮಣ್ಣು ಕ್ಷೀಣಿಸಿದಾಗ ಮತ್ತು ಪೋಷಕಾಂಶಗಳನ್ನು ಮರುಪೂರಣಗೊಳಿಸದಿದ್ದರೆ,

ಮಣ್ಣಿನ ಆರೋಗ್ಯವನ್ನು ಪೋಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕಳೆದ 70 ವರ್ಷಗಳಲ್ಲಿ ಆಹಾರದಲ್ಲಿನ ಜೀವಸತ್ವಗಳು ಮತ್ತು ಪೋಷಕಾಂಶಗಳ ಮಟ್ಟ ತೀರ ಕಡಿಮೆಯಾಗಿದೆ.

ಅವು ಪರಿಸರದಲ್ಲಿ ಹರಡಿ ನೀರನ್ನು ಕಲುಷಿತಗೊಳಿಸುತ್ತವೆ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತದೆ.

ಈ ಮಣ್ಣಿನ ಪೋಷಕಾಂಶದ ನಷ್ಟವು ಮಣ್ಣಿನ ಅವನತಿಗೆ ಕಾರಣವಾಗಿದೆ. ಇದರಿಂದ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ

ಮತ್ತು ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಸುಸ್ಥಿರತೆಯು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.

ಈ ಮಣ್ಣನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.

The Root Soil of Rice: Food Starts Here!

ಮಣ್ಣಿನ ವಿಶೇಷತೆ:

ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣು ಒಂದು. ಮಣ್ಣು ಹೆಚ್ಚಿನ ಕೃಷಿ ಭೂಮಿಯನ್ನು ಆವರಿಸುವ ಸಡಿಲವಾದ ಮೇಲ್ಮೈಯಾಗಿದೆ.

ಈ ವಸ್ತುವು ಅಜೈವಿಕ ಕಣಗಳು ಮತ್ತು ಸಾವಯವ ಪದಾರ್ಥಗಳ ಮಿಶ್ರಣವಾಗಿದೆ. ಕೃಷಿಯಲ್ಲಿ ಬಳಸುವ ಸಸ್ಯಗಳಿಗೆ ಮಣ್ಣು

ಚನಾತ್ಮಕ ಬೆಂಬಲವನ್ನು ಒದಗಿಸುತ್ತದೆ. ಮಣ್ಣು ಸಾವಯವ ಪದಾರ್ಥಗಳು ಖನಿಜಗಳು, ಅನಿಲಗಳು,

ದ್ರವಗಳು ಮತ್ತು ಜೀವಿಗಳ ಮಿಶ್ರಣವಾಗಿದ್ದು, ಅದು ಒಟ್ಟಿಗೆ ಜೀವನವನ್ನು ಬೆಂಬಲಿಸುತ್ತದೆ.

ಗಾಳಿ, ನೀರು ಮತ್ತು ಹವಾಮಾನದ ಪರಿಣಾಮದಿಂದ ಬಂಡೆಗಳು ಒಡೆದು ಮಣ್ಣು ಉತ್ಪತ್ತಿಯಾಗುತ್ತದೆ ಎಂದು ಬಹುಶಃ ನೀವು ತಿಳಿದಿರಬಹುದು.

ಈ ಪ್ರಕ್ರಿಯೆಯನ್ನು ಶಿಥಿಲಗೊಳ್ಳುವಿಕೆ (Weathering) ಎನ್ನುವರು. ಯಾವುದೇ ಮಣ್ಣಿನ ಸ್ವರೂಪವು ಅದು

ಉತ್ಪತ್ತಿಯಾದ ಬಂಡೆ ಮತ್ತು ಅದರಲ್ಲಿ ಬೆಳೆಯುವ ಸಸ್ಯವರ್ಗಗಳನ್ನು ಅವಲಂಬಿಸಿದೆ.

ಸಸ್ಯಗಳು ಬೆಳೆಯಲು ಮಣ್ಣು ಒಂದು ಸ್ಥಳವಾಗಿದೆ. ಮಣ್ಣಿನಲ್ಲಿ ಅಡಗಿರುವ ಖನಿಜಾಂಶ, ತೇವಾಂಶ, ಜೀವಾಂಶ, ಸಾವಯವ ಅಂಶ ಮತ್ತು ಹೊದಿಕೆ ಅಂಶಗಳು ಮಣ್ಣಿನ ಫಲವತ್ತತೆಯನ್ನು ಸೂಚಿಸುತ್ತವೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಆರೋಗ್ಯಗಳ ಸಂಯೋಗವೇ ಮಣ್ಣಿನ ಆರೋಗ್ಯ.

ಮಣ್ಣುಗಳು ಅವುಗಳ ಮೂಲಕ ಚಲಿಸುವ ನೀರಿನ ವೇಗ ಮತ್ತು ಶುದ್ಧತೆಯನ್ನು ನಿಯಂತ್ರಿಸುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಆವಿ ಮಾಡುವುದರಲ್ಲಿ ಮಣ್ಣಿನ ಪಾತ್ರ ದೊಡ್ಡದು.

ಮಣ್ಣು, ಸತ್ತ ಪ್ರಾಣಿಗಳಿಂದ ಮತ್ತು ಸಸ್ಯಗಳಿಂದ ಪೋಷಕಾಂಶಗಳನ್ನು ಮರುಬಳಕೆ ಮಾಡುತ್ತವೆ. ಮಣ್ಣು ಕೋಟ್ಯಾಂತರ ಜೀವಜಂತುಗಳಿಗೆ ಆಶ್ರಯ ನೀಡಿದೆ.

ಗೊಬ್ಬರವನ್ನು ಪೋಷಕಾಂಶಗಳನ್ನಾಗಿ ಬದಲಿಸುವ ಸಾಮರ್ಥ್ಯ ಹೊಂದಿದೆ. ಯಾವುದೇ ಜೀವಿಯ ಅಂತ್ಯವಾದರೂ ಅದು ಮಣ್ಣಿನಲ್ಲಿ ಕೊಳೆಯುವ ಹಿಂದಿನ ಕಾರಣ ಇದೇ ಮಣ್ಣು.

ಮಣ್ಣುಗಳು ಭೂಮಿಯನ್ನು ಸುತ್ತುವರೆದಿರುವ ಗಾಳಿಯನ್ನು ಬದಲಾಯಿಸುತ್ತವೆ ಇದನ್ನು ವಾತಾವರಣ ಎಂದು ಕರೆಯಲಾಗುತ್ತದೆ.

ಹವಾಮಾನದ ಏರುಪೇರುಗಳನ್ನು ನಿಯಂತ್ರಿಸುತ್ತದೆ.

ಮಣ್ಣು ಪ್ರಾಣಿಗಳು, ಕೀಟಗಳು ಮತ್ತು ಸೂಕ್ಷ್ಮಜೀವಿಗಳೆಂದು ಕರೆಯಲ್ಪಡುವ ಅತ್ಯಂತ ಚಿಕ್ಕ ಜೀವಿಗಳಿಗೆ ವಾಸಿಸುವ ಸ್ಥಳವಾಗಿದೆ.

ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಅಧಿಕ ಮಣ್ಣಿನ ಬಗೆಗಳಿವೆ. ಸಾವಿರಾರು ಜಾತಿಯ ಸೂಕ್ಷಜೀವಿಗಳಿವೆ. ಸಹಸ್ರಾರು ಸಂಖ್ಯೆಯ ಕ್ರಿಮಿಕೀಟಗಳಿವೆ.

ಮಣ್ಣಿನ ಜಗತ್ತು ಎಷ್ಟು ವಿಸ್ಮಯಕಾರಿ ಎಂದರೆ ತನ್ನ ಒಡಲಾಳದಲ್ಲಿ ಇರಿಸಿಕೊಂಡಿರುವ ಕೋಟ್ಯಾಂತರ

ಜೀವರಾಶಿಯಲ್ಲಿ ಕೇವಲ ಶೇಕಡಾ ಒಂದರಷ್ಟನ್ನು ಮಾತ್ರ ನಾವು ಗುರುತಿಸಿದ್ದೇವೆ.

ಕೃಷಿಯಲ್ಲಿ ಮಣ್ಣಿನ ಪ್ರಾಮುಖ್ಯತೆ:

ಒಂದು ದೇಶದ ಆರ್ಥಿಕತೆ ಮತ್ತು ಸಮಾಜಕ್ಕೆ ಕೃಷಿ ಬಹಳ ಮುಖ್ಯವಾದ ಕ್ಷೇತ್ರವಾಗಿದೆ. ನಮ್ಮ ಜೀವನಕ್ಕೆ ಬಹಳ ಮುಖ್ಯವಾದ

ಕೃಷಿಯ ಅಡಿಪಾಯ ಮಣ್ಣು ಎಂದು ನಾವು ಹೇಳಬಹುದು. ಕೃಷಿ ಇಲ್ಲದೆ ಮನುಷ್ಯರಿಗೆ ಆಹಾರ ಸಿಗುವುದಿಲ್ಲ.

ಆಹಾರ ಪಡೆಯಲು ಕೃಷಿ ಮಾಡುವುದು ಕಡ್ಡಾಯ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ, ಇಂಧನ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ ಮಣ್ಣು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ.

ಅದೇ ರೀತಿ, ಕೃಷಿಯ ಸುಧಾರಣೆಗೆ ಅನೇಕ ಅಂಶಗಳಲ್ಲಿ ಮಣ್ಣು ಒಂದಾಗಿದೆ. ಮಣ್ಣು ಯಶಸ್ವಿ ಬೇಸಾಯದ ಅತ್ಯಗತ್ಯ

ಭಾಗವಾಗಿದೆ ಮತ್ತು ಬೆಳೆ ಬೆಳೆಯಲು ಪೋಷಕಾಂಶಗಳನ್ನು ಒದಗಿಸುವ ಮೂಲವಾಗಿದೆ.

ಪ್ರಮುಖ ಪೋಷಕಾಂಶಗಳು ಮಣ್ಣಿನಿಂದ  ಸಸ್ಯಗಳಿಗೆ ವರ್ಗಾವಣೆಯಾಗುತ್ತವೆ. ಇದು ಆಹಾರವನ್ನು ಆರೋಗ್ಯಕರವಾಗಿಸುತ್ತದೆ.

ಆರೋಗ್ಯಕರ ಮಣ್ಣು ಸಸ್ಯಗಳ ಬೆಳೆವಣಿಗೆಗೆ ಅಗತ್ಯವಾದ 18 ಸಸ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

ಮೂರು ಸಸ್ಯ ಪೋಷಕಾಂಶಗಳನ್ನು ದ್ಯುತಿಸಂಶ್ಲೇಷಣೆಯಿಂದ ವಾತಾವರಣದಿಂದ ಪಡೆದರೆ, ಇನ್ನುಳಿದ ಸಸ್ಯ ಪೋಷಕಾಂಶಗಳನ್ನು ಮಣ್ಣಿನಿಂದ ಪಡೆಯುತ್ತದೆ.

ಆರೋಗ್ಯಕರ ಮಣ್ಣು ಅತ್ಯಂತ ಪೌಷ್ಟಿಕ ಮತ್ತು ಹೇರಳವಾದ ಆಹಾರ ಪೂರೈಕೆಯನ್ನು ಉತ್ಪಾದಿಸುತ್ತದೆ.

ಆರೋಗ್ಯಕರ ಮಣ್ಣು ಹೆಚ್ಚಿನ ಆಹಾರವನ್ನು ಉತ್ಪಾದಿಸುವುದರಿಂದ ಮಾನವ ಹಸಿವನ್ನು ನೀಗಿಸುವಲ್ಲಿ ಮಣ್ಣು ಪ್ರಮುಖ ಪಾತ್ರವಹಿಸುತ್ತದೆ.

ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಉತ್ಪಾದಕತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮಣ್ಣಿನ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣ, ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ.

ಭಾರತೀಯ ಕೃಷಿ ಪದ್ಧತಿಯಲ್ಲಿ ಮಣ್ಣಿನ ಉತ್ಪಾದಕತೆ/ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು.

ಇದನ್ನು ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಮಣ್ಣು ಪರೀಕ್ಷೆಯಿಂದ ರೈತರು ತಮ್ಮ

ಹೊಲದ ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣ ಹಾಗೂ ಮಣ್ಣಿನಲ್ಲಿರುವ ಸಸ್ಯ ಪೋಷಕಾಂಶಗಳ

ಪ್ರಮಾಣ ತಿಳಿದು ವೈಜ್ಞಾನಿಕ ಕೃಷಿ  ಪದ್ಧತಿಯಲ್ಲಿ  ತೊಡಗಿಸಿಕೊಂಡು ಉತ್ತಮ ಬೆಳೆ  ಬೆಳೆಯಬಹುದು.

ಮಣ್ಣು ಪರೀಕ್ಷೇಯಿಂದಾಗುವ ಉಪಯೋಗಗಳು

* ಮಣ್ಣಿನ ಗುಣ ಮತ್ತು ಫಲವತ್ತತೆ ಪ್ರಮಾಣ ತಿಳಿಯುತ್ತದೆ

* ಪರೀಕ್ಷಾ ವರದಿಯ ಆಧಾರದ ಮೇಲೆ ಸೂಕ್ತವಾದ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ

* ಉಪಯುಕ್ತ ಪೋಷಕಾಂಶಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ಸಹಾಯ ಮಾಡುತ್ತದೆ

* ಮಣ್ಣಿನ ಗುಣವರ್ಧಕಗಳ ಸ್ಥಿತಿ, ಅವಶ್ಯಕತೆ ತಿಳಿಯುತ್ತದೆ

* ಬೆಳೆಗೆ ಅವಶ್ಯಕವಿರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ

* ಅವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುವುದರಿಂದ ಅನವಶ್ಯಕ ಪೋಷಕಾಂಶ ಬಳಕೆಯನ್ನು ತಡೆಯಬಹುದು

* ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು

ರೈತರು ತಮ್ಮ ಜಮೀನಿನಲ್ಲಿರುವ ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪ್ರಮಾಣ, ರಸಸಾರ ಮತ್ತು ಸಾವಯವ ಅಂಶಗಳ ಪ್ರಮಾಣ

ತಿಳಿದು ಕೊರತೆ/ ವ್ಯತ್ಯಾಸ ಕಂಡುಬಂದಲ್ಲಿ, ಮಣ್ಣಿನ ವಿಶ್ಲೇಷಣಾ  ವರದಿಯಲ್ಲಿ ತಿಳಿಸಿದ ಮಾಹಿತಿಯನ್ನು ಅನುಸರಿಸಿ

ವೈಜ್ಞಾನಿಕ ಪದ್ಧತಿಯಂತೆ ಬೇಸಾಯ ಕ್ರಮಗಳನ್ನು ಕೈಗೊಂಡು ಮತ್ತು ಪೋಷಕಾಂಶ ನಿರ್ವಹಣೆಯಿಂದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು

ಫಲವತ್ತತೆಯನ್ನು ಹೆಚ್ಚಿಸಿ ಅಧಿಕ ಇಳುವರಿಯನ್ನು ಪಡೆದು ನಿರಂತರ ಲಾಭಗಳಿಸಬಹುದು.

ಈ ರೀತಿಯ ಕ್ರಮಗಳ ಪಾಲನೆಯಿಂದ  ಕೃಷಿಯಲ್ಲಾಗುತ್ತಿರುವ ವೈಪರಿತ್ಯಗಳನ್ನು ಉದ್ಭವವಾಗದಂತೆ ಮಣ್ಣಿನ

ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಬಹುದಲ್ಲದೆ ಹೆಚ್ಚಿನ ಇಳುವರಿಯನ್ನೂ ಮತ್ತು ಉತ್ತಮ ಗುಣಮಟ್ಟದ ಬೆಳೆಯನ್ನು ತೆಗೆಯಲು ಸಾಧ್ಯ.

ಮಣ್ಣಿನ ಮಾಲಿನ್ಯ

ರಾಸಾಯನಿಕಗಳು, ಲವಣಗಳು, ವಿಷಕಾರಿ ಸಂಯುಕ್ತಗಳು , ವಿಕಿರಣಶೀಲ ವಸ್ತುಗಳ ನಿರಂತರ ಬಳಕೆಯಿಂದ ಮಣ್ಣು ಮಾಲಿನ್ಯಗೊಳ್ಳುತ್ತಿದೆ.

ಇದು ಪ್ರಾಣಿಗಳ ಆರೋಗ್ಯ ಮತ್ತು ಸಸ್ಯ ಬೆಳೆವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಣ್ಣು ಕಲುಷಿತಗೊಳ್ಳಲು ಹಲವು ಮಾರ್ಗಗಳಿವೆ.

ಪಟ್ಟಣ ಮತ್ತು ಕೈಗಾರಿಕಾ ತ್ಯಾಜ್ಯ ಪ್ರತಿದಿನ ವಿಷಯುಕ್ತ ಪದಾರ್ಥವು ಅಂತರ್ಜಲದೊಂದಿಗೆ ಮಣ್ಣಿನಲ್ಲಿ ಬೆರೆತು ನೀರು ಮತ್ತು ಮಣ್ಣಿನ ಮಾಲಿನ್ಯ

ಭಾರಿ ಲೋಹಗಳು, ಪೆಟ್ರೋಲಿಯಂ ಹೈಡ್ರೋಕಾರ್ಬನ್‌ಗಳು, ದ್ರಾವಕಗಳು ಮತ್ತು ಕೀಟನಾಶಕಗಳಂತಹ ವಿಷಯುಕ್ತ ರಾಸಾಯನಿಕಗಳ ಬಳಕೆ

 ಮಣ್ಣಿನ ಸಂರಕ್ಷಣೆ ಮತ್ತು ಕೃಷಿಯಲ್ಲಿ ಮಣ್ಣಿನ ನಿರ್ವಹಣೆ

ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಮಣ್ಣು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಆದ್ದರಿಂದ ಮಣ್ಣಿನ ಗುಣಮಟ್ಟವು ದೀರ್ಘಕಾಲದವರೆಗೆ ಉಳಿಯುವುದು ಬಹಳ ಮುಖ್ಯವಾಗುತ್ತದೆ.

ಇದಕ್ಕಾಗಿ ಮಣ್ಣಿನ ನಿರ್ವಹಣೆ ರೈತರಿಗೆ ಅತ್ಯಗತ್ಯ. ರೈತರು ಮಣ್ಣಿನ  ಮತ್ತು ಸುತ್ತಮುತ್ತಲಿನ ಪರಿಸರದ

ಬಗ್ಗೆ ಉತ್ತಮ ಕಾಳಜಿ ವಹಿಸಬೇಕು. ಹಾಗಾಗಿ ಮಣ್ಣಿನ ನಿರ್ವಹಣೆಗೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅತೀ ಮುಖ್ಯ.

ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು ದೀರ್ಘಾವಧಿಯ ಸುಸ್ಥಿರ ಮಣ್ಣು ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತಿ ಮುಖ್ಯ.

ಬೆಳೆ ಇಳುವರಿಗಿಂತ ಗುಣಮಟ್ಟದ ಆಹಾರಕ್ಕೆ ಮತ್ತು ಆಹಾರದ ಸುರಕ್ಷತೆಗೆ ಆದ್ಯತೆ ನೀಡಬೇಕು.

ಕೃಷಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವುದು: ರಸಗೊಬ್ಬರ ಸಂಹಿತೆಯು ರಸಗೊಬ್ಬರಗಳ ಕಡಿಮೆ ಬಳಕೆ,

ದುರುಪಯೋಗ ಮತ್ತು ಅತಿಯಾದ ಬಳಕೆಯನ್ನು ತಪ್ಪಿಸಲು ಮಾರ್ಗದರ್ಶಿ ಸಿದ್ದಪಡಿಸಬೇಕು.

ಗುಣಮಟ್ಟದ ಮಾಹಿತಿ ಸಾರ್ವಜನಿಕರಿಗೂ ಲಭ್ಯವಿರಬೇಕು ಮತ್ತು ಉಲ್ಲೇಖಿತ ಪ್ರಯೋಗಾಲಯಗಳಿಂದ ಪರೀಕ್ಷೆಗೆ ಒಳಪಡಿಸಿ ಮೇಲ್ವಿಚಾರಣೆ ಮಾಡಬೇಕು.

ಕೊರತೆಗಳನ್ನು ತಪ್ಪಿಸಲು, ಮಣ್ಣಿನ ಪೊಷಕಾಂಶಗಳಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ.

ಬೇಳೆಕಾಳುಗಳ ಬಳಕೆ, ಬೆಳೆ ವೈವಿಧ್ಯತೆ, ಅಂತರ ಬೆಳೆ ಮತ್ತು ಬೆಳೆ ಪರಿವರ್ತನೆಯನ್ನು ಉತ್ತೇಜಿಸಬೇಕು.

ಸಮಗ್ರ ಪದ್ದತಿಯನ್ನು ಅಳವಡಿಸಿ ಕೃಷಿ ಜೀವವೈವಿಧ್ಯಗಳನ್ನು ಹೆಚ್ಚಿಸುವುದು.

ರಸಗೊಬ್ಬರವನ್ನು ಜೈವಿಕ ಗೊಬ್ಬರದೊಂದಿಗೆ ಬಳಕೆ, ಕೃಷಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಕೆ, ಪೋಷಕಾಂಶಗಳ ಮರುಬಳಕೆ,

ಕೊಟ್ಟಿಗೆ ಗೊಬ್ಬರಗಳನ್ನು ಪೋಷಕಾಂಶಗಳಿಂದ ಸಮೃದ್ಧಿಗೊಳಿಸುವಿಕೆ ಮತ್ತು ಜೈವಿಕ ಉತ್ತೇಜಕಗಳೊಂದಿಗೆ ಸಮಗ್ರವಾಗಿ

ಪೋಷಕಾಂಶಗಳ ನಿರ್ವಹಣೆ ಅಗತ್ಯ. ಮಣ್ಣಿಗೆ ಜೀವವನ್ನು ಮರಳಿ ತರುವಲ್ಲಿ ನಾವು ರೈತರನ್ನು ಬೆಂಬಲಿಸಿದಾಗ ನಾವು

ನಮ್ಮ ಆಹಾರ ಮತ್ತು ಭೂಮಿಯನ್ನು ಸಂರಕ್ಷಿಸಬಹುದು.

ಮಣ್ಣಿನ ಜೀವವೈವಿಧ್ಯಗಳ ಮೌಲ್ಯಮಾಪನ ನಕ್ಷೆ ಮತ್ತು ಮೇಲ್ವಿಚಾರಣೆ .

ಅರಣ್ಯನಾಶವನ್ನು ತಡೆಗಟ್ಟುವುದು.

ಕ್ಷೀಣಿಸುತ್ತಿರುವ ಮಣ್ಣನ್ನು ಮರುಸ್ಥಾಪಿಸಲು ಕೈಗೊಳ್ಳಬೇಕಾದ ಕ್ರಮಗಳು;

* ಮಣ್ಣಿನಲ್ಲಿ ಪೋಷಕಾಂಶದ ಮಟ್ಟವನ್ನು ತಿಳಿದು, ಪೋಷಕಾಂಶಗಳ ಸಮಗ್ರ ನಿರ್ವಹಣೆ ಮತ್ತು ನಿಖರ ಕೃಷಿ ವಿಧಾನಗಳನ್ನು ಅನುಸರಿಸುವುದು

* ವ್ಯವಸ್ಥಿತ ನೀರಾವರಿ (ಹನಿ ನೀರಾವರಿ, ಸಿಂಚನ ನೀರಾವರಿ) ಅಳವಡಿಕೆ. ನೀರು ಇಂಗುವಂತೆ ಕಾಲುವೆಗಳ ಬದಿಗಳಲ್ಲಿ ಹುಲ್ಲು, ಪೊದರು ಬೆಳೆಯುವುದು

* ಇಳಿಜಾರಿಗೆ ಅಡ್ಡವಾಗಿ ಉಳುಮೆ, ಸಮಪಾತಳಿಯಲ್ಲಿ ಬದು ನಿರ್ಮಾಣ, ಬದುಗಳಿಗೆ ಸಮಾಂತರವಾಗಿ ಸಾಗುವಳಿ

* ಮಣ್ಣಿನ ಸವಕಳಿ ತಡೆಗಟ್ಟಲು ಮಣ್ಣಿನ ಮೇಲ್ಮೈ, ಹುಲ್ಲು, ಬೆಳೆಗಳಿಂದ ಹೊದಿಕೆ, ಹವಾಮಾನ ಬದಲಾವಣೆಗೆ ಅನುಗುಣವಾಗಿ ಬೆಳೆಗಳ ಆಯ್ಕೆ

* ಜಮೀನಿನ ಕೊರಕಲು , ಕಮರಿಗಳಿಗೆ ಅಡ್ಡವಾಗಿ ಕಲ್ಲಿನ ತಡೆ

* ಗಾಳಿಯಿಂದುಂಟಾಗುವ ಮಣ್ಣಿನ ಸವಕಳಿ ತಡೆಯಲು ಗಾಳಿ ಬೀಸುವ ದಿಕ್ಕಿಗೆ ಅಡ್ಡವಾಗಿ ಗಿಡಗಳನ್ನು ಬೆಳೆಯುವುದು

ಮಣ್ಣು ತುಂಬಾ ತೇವವಾಗಿದ್ದಾಗ ಹೊಲಗಳಲ್ಲಿ ಭಾರವಾದ ಯಂತ್ರೋಪಕರಣಗಳನ್ನು ಬಳಕೆ ಮಾಡದಿರುವುದು

ಇತ್ತೀಚಿಗೆ ಮಣ್ಣಿಗೆ ಕೊಡಬೇಕಾದ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ ಮತ್ತು ಮಣ್ಣಿನಲ್ಲಿರುವ ಜೀವಸತ್ವ ನಾಶವಾಗುತ್ತಿದೆ.

ಅದನ್ನು ಮರುಸ್ಥಾಪಿಸಲು ವರ್ಷಗಟ್ಟಲೆ ಬೇಕಾಗಬಹುದು. ಇಲ್ಲವೇ ಮರುಸ್ಥಾಪಿಸಲು ಸಾಧ್ಯವಾಗದೆ ಹೋಗಬಹುದು.

ಮನುಷ್ಯನ ದುರಾಸೆಗೆ ಮಣ್ಣು ಹಾಳಾಗುತ್ತಿದೆ. ಆದ್ದರಿಂದ ಮಣ್ಣು ಕೇವಲ ವ್ಯಾಪಾರ ಮತ್ತು ಹಣವನ್ನು ದ್ವಿಗುಣಗೊಳಿಸುವ ವಸ್ತುವಾಗಬಾರದು.

ಪ್ರಕೃತಿಗೆ ಪೂರಕವಾದ ಸಾವಯವ ಗೊಬ್ಬರ ಮಣ್ಣಿಗೆ ಒಳ್ಳೆಯದು. ಅತಿಯಾದ ರಾಸಾಯನಿಕ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ನಾಶಮಾಡಿ ಮಣ್ಣನ್ನು ಬರಡಾಗಿಸುತ್ತದೆ,

ಅತಿಯಾದ ಅಮೃತವು ವಿಷವಾಗುವುದು. ತಿಳಿದವರು ಹೇಳಿದಂತೆ, “ಬರಡು ಮಣ್ಣು- ಬರಡಾಗುವ ಗಿಡ-

ಬಡಕಲು ಆಹಾರ-ಬಳಲುವ ಮಾನವ” ಎಲ್ಲವೂ ಒಂದಕ್ಕೊಂದು ಪೂರಕ. ಮಣ್ಣು ಬರಡಾದರೆ ಮನುಷ್ಯ ಬರಡಾದಂತೆ.

 

Published On: 05 December 2022, 12:57 PM English Summary: The Root Soil of Rice: Food Starts Here!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.