1. ಅಗ್ರಿಪಿಡಿಯಾ

ಹಸಿರೆಲೆಗೊಬ್ಬರ, ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಪ್ರಾಮುಖ್ಯತೆ

ಬೆಳೆಗಳನ್ನು ಹಸಿರು ಗೊಬ್ಬರಕ್ಕಾಗಿಯೇ ಬೆಳೆದು ಅವುಗಳನ್ನು ಅದೇ ಸ್ಥಳದಲ್ಲಿ ಮಣ್ಣಿಗೆ ಸೇರಿಸಿದರೆ ಅದು ಹಸಿರು ಗೊಬ್ಬರವಾಗುತ್ತದೆ, ಅದೇ ರೀತಿ ಬೆಳೆದ ಎಲ್ಲಾ ಗಿಡಮರಗಳ ಎಲೆಗಳನ್ನು ಟೊಂಗೆ ಸಮೇತ ಸಂಗ್ರಹಿಸಿ, ಬೇರೊಂದು ಜಾಗದಲ್ಲಿ ಭೂಮಿಗೆ ಸೇರಿಸಿದರೆ ಹಸಿರೆಲೆ ಗೊಬ್ಬರವಾಗುತ್ತದೆ.  ಸಾರಜನಕವನ್ನು ಸ್ಥಿರೀಕರಿಸುವಂತಹ ದ್ವಿದಳ ಧಾನ್ಯಗಳ ಬೆಳೆಗಳನ್ನು ಹೊಲದಲ್ಲಿ ಗೊಬ್ಬರಕ್ಕಾಗಲೀ ಅಥವಾ ಧಾನ್ಯಕ್ಕಾಗಲೀ ಬೆಳೆಯುವುದರಿಂದ ಮಣ್ಣಿನಲ್ಲಿ ಸಾರಜನಕ ಹಿಡಿದಿಡುವುದಲ್ಲದೆ ಸಾವಯವ ವಸ್ತುಗಳಿಂದ ಮಣ್ಣನ್ನು ಸಮೃದ್ಧಿಗೊಳಿಸುತ್ತದೆ.

ಹಸಿರೆಲೆ ಗೊಬ್ಬರಳ ಪ್ರಾಮುಖ್ಯತೆ

  • ಸಸ್ಯ ಪೋಷಕಾಂಶಗಳ ಉತ್ತಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
  • ಭೂಮಿಗೆ ಸಾವಯವ ಪದಾರ್ಥ ಮತ್ತು ಸಾರಜನಕವನ್ನು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಒದಗಿಸುತ್ತವೆ.
  • ಮಣ್ಣಿನ ರಚನೆಯನ್ನು ವೃದ್ಧಿಪಡಿಸಿ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ.
  • ಮಣ್ಣಿನಲ್ಲಿ ಸೂಕ್ಷ್ಮ ಜೀವಾಣುಗಳ ಕ್ರಿಯೆಯನ್ನು ಹೆಚ್ಚಿಸಿ ಪೋಷಕಾಂಶಗಳು ಸಸ್ಯಕ್ಕೆ ಸುಲಭವಾಗಿ ದೊರಕುವಂತೆ ಸುಲಭ ರೂಪಕ್ಕೆ ಬದಲಾವಣೆ ಮಾಡುತ್ತವೆ.
  • ಮಣ್ಣಿನ ಕೆಳಪದರಿನಲ್ಲಿರುವ ಪೋಷಕಾಂಶಗಳನ್ನು ಮೇಲಿನ ಪದರಿಗೆ ಸಾಗಣೆ ಮಾಡಿ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ.
  • ಮಣ್ಣಿನ ಭೌತಿಕ ಗುಣ ಧರ್ಮಗಳು ವೃದ್ಧಿಯಾಗಿ ಸಮಸ್ಯಾತ್ಮಕ ಮಣ್ಣುಗಳಾದ ಕ್ಷಾರ ಮತ್ತು ಚೌಳು ಮಣ್ಣುಗಳಲ್ಲಿರುವ ದೋಷಗಳನ್ನು ಸರಿಪಡಿಸುತ್ತವೆ.

ಪ್ರಮುಖವಾದ ಹಸಿರೆಲೆ ಬೆಳೆಗಳು

ಸೆಣಬು, ಡಯಾಂಚ, ಸಸ್ಬೇನಿಯಾ, ಹೆಸರು, ಉದ್ದು, ಅಲಸಂದೆ, ಗ್ಲಿರಿಸೀಡಿಯಾ, ಹೊಂಗೆ, ಉಗನೆ, ಎಕ್ಕ, ಲಾಂಟಾನಾ, ತುಂಬೆ ಮುಂತಾದವುಗಳು ಹಸಿರೆಲೆ ಬೆಳೆಗಳಲ್ಲಿ ಮುಖ್ಯವಾದವು.  ಇವುಗಳಲ್ಲಿ ಕೆಲವು ತಾವಾಗೇ ಬೆಳೆದರೆ ಇನ್ನು ಕೆಲವನ್ನು ನಾವು ಬೆಳೆಸಬೇಕಾಗುತ್ತದೆ.

ಸೆಣಬು: ಇದನ್ನು ಮೇವಿನ ಬೆಳೆಯಾಗಿ ಹಾಗೂ ನಾರು ತಯಾರಿಸಲು ಬೆಳೆಸುತ್ತಾರೆ.  ಇದು ಶೀಘ್ರವಾಗಿ ಬೆಳೆದು 8-10 ವಾರಗಳಲ್ಲಿ ಎಕರೆಗೆ 5 ರಿಂದ 6 ಸಾವಿರ ಕಿ.ಗ್ರಾಂ. ನಷ್ಟು ಹಸಿರು ಸೊಪ್ಪು ಕೊಡಬಲ್ಲದು.  ಎಕರೆಗೆ 70-80 ಕೆ.ಗ್ರಾಂ. ಬಿತ್ತನೆ ಬೀಜ ಬೇಕಾಗುತ್ತದೆ.  ಈ ಬೆಳೆಯನ್ನು ಬಿತ್ತುವಾಗ ಎಕರೆಗೆ 100 ಕಿ.ಗ್ರಾಂ.  ಸೂಪರ್ ಪಾಸ್ಪೇಟನ್ನು ಭೂಮಿಗೆ ಸೇರಿಸಿ ಬೀಜವನ್ನು ಬಿತ್ತಿದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಬರುತ್ತದೆ.

ಡಯಾಂಚ: ಈ ಬೆಳೆಯನ್ನು ಕಪ್ಪು ಮತ್ತು ಕ್ಷಾರ ಭೂಮಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು.  ಇದು ಬೇಗನೆ ಬೆಳೆಯುವುದರಿಂದ ಬಿತ್ತಿದ ಎರಡು ತಿಂಗಳಲ್ಲಿ ಭೂಮಿಗೆ ಸೇರಿಸುವುದು ಒಳ್ಳೆಯದು, ಇಲ್ಲದಿದ್ದಲ್ಲಿ ಕಾಂಡಗಳು ಗಟ್ಟಿಯಾಗಿ ನಾರಿನಾಂಶ ಹೆಚ್ಚಾಗುತ್ತದೆ.  ಹೀಗಾಗಿ ಬೇಗನೆ ಕೊಳೆಯುವುದಿಲ್ಲ.  ಬಿತ್ತನೆ ಮಾಡಲು ಒಂದು ಎಕರೆಗೆ 8-10 ಕಿ.ಗ್ರಾಂ. ಬೀಜ ಬೇಕಾಗುತ್ತದೆ.

ಸಸ್ಬೇನಿಯಾ: ಈ ಹಸಿರೆಲೆ ಗೊಬ್ಬರದ ಸಸಿಗಳನ್ನು ಹೊಲ ಮತ್ತು ಗದ್ದೆಗಳ ಬದುಗಳ ಮೇಲೆ ನಾಟಿ ಮಾಡಿ ಬೆಳೆಯುತ್ತಾರೆ.  ಆದರೆ ಪೂರ್ಣ ಬೆಳೆಯಾಗಿ ಬೆಳೆದಲ್ಲಿ 4-6 ತಿಂಗಳಲ್ಲಿ 20,000 ಕಿ.ಗ್ರಾಂ. ನಷ್ಟು ಹಸಿರೆಲೆಯನ್ನು ಪಡೆಯಬಹುದು.  ಈ ಬೆಳೆಯನ್ನು ಹೆಚ್ಚು ಚೌಗು ಅಥವಾ ನೀರಿನ ಕೊರತೆಯಿರುವಂತಹ ಪರಿಸ್ಥಿತಿಗಳಲ್ಲಿ ಹೆಚ್ಚು ಹುಲುಸಾಗಿ ಬೆಳೆಯಬಹುದು ಹಾಗೂ ಕಾಂಡ ಮತ್ತು ಬೇರುಗಳ ಮೇಲೆ ರೈಜೋಬಿಯಂ ಗಂಟುಗಳಿರುತ್ತವೆ.

ಗ್ಲಿರಿಸೀಡಿಯಾ: ಈ ಹಸಿರೆಲೆ ಗೊಬ್ಬರದ ಬೆಳೆ ಬಹಳ ಶೀಘ್ರವಾಗಿ ಪೊದೆಯಾಗಿ ಬೆಳೆಯುತ್ತದೆ.  ಗ್ಲಿರಿಸೀಡಿಯಾವನ್ನು ಬೀಜದಿಂದ, ಸಸಿಗಳಿಂದ ಅಥವಾ ತುಂಡುಗಳಿಂದಲೂ ಬೆಳೆಯಬಹುದು.  ಇದು ಬಹಳ ಬೇಗ ಬೆಳೆದು ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.  ವರ್ಷಕ್ಕೆ 2-3 ಬಾರಿ ಹಸಿರು ಸೊಪ್ಪನ್ನು ಪಡೆಯಬಹುದು.  ಭತ್ತದ ಗದ್ದೆಗಳಿಗೆ ಹಸಿರೆಲೆ ಗೊಬ್ಬರವನ್ನು ಒದಗಿಸುವಂತಹ ಬೆಳೆಗಳಲ್ಲಿ ಇದು ಬಹಳ ಅತ್ಯುತ್ತಮವಾದುದಲ್ಲದೆ ಶೀಘ್ರವಾಗಿ ಕೊಳೆತು ಗೊಬ್ಬರವಾಗುತ್ತದೆ.  ಇದನ್ನು ಬದುಗಳ ಮೇಲೆ ಬೆಳೆಸಬಹುದು. ಬೃಹದಾಕಾರವಾಗಿ ಬೆಳೆದು ಉತ್ತಮವಾದ ಹಸಿರೆಲೆಯನ್ನು ಕೊಡುವ ಒಂದು ಮರ.  ಸಸಿಯನ್ನು ನೆಟ್ಟ 5-6 ವರ್ಷಗಳಲ್ಲಿ ಪ್ರತಿ ಮರದಿಂದ 2,000 ಕಿ.ಗ್ರಾಂ. ಹಸಿರೆಲೆಯನ್ನು ಪಡೆಯಬಹುದಲ್ಲದೆ ಇದರ ಬೀಜದಿಂದ ಎಣ್ಣೆ ಮತ್ತು ಹಿಂಡಿಯನ್ನು ಸಹ ಪಡೆಯಬಹುದು. ಹಿಂಡಿಯನ್ನು ಒಳ್ಳೆಯ ಸಾವಯವ ಗೊಬ್ಬರವಾಗಿ ಉಪಯೋಗಿಸುತ್ತಾರೆ.  ಈ ಮರಗಳನ್ನು ಸಾಮಾನ್ಯವಾಗಿ ಬಂಜರು ಭೂಮಿ ಅಥವಾ ಹಳ್ಳದ ಪಕ್ಕಗಳಲ್ಲಿ ಬೆಳೆಸಬಹುದು.

ಕೆರೆಗೋಡು ಗೊಬ್ಬರ (ಕೆರೆ ಹೂಳು) : ಕೆರೆಗೋಡು ಅಥವಾ ಕೆರೆ ಹೂಳು ಒಂದು ವಿಧವಾದ ಮಣ್ಣು.  ಇದರಲ್ಲಿ ಸಸ್ಯಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳೂ ಇರುವುದರಿಂದ ಹಾಗೂ ರೈತರು ಇದನ್ನು ಜಮೀನುಗಳಿಗೆ ಉಪಯೋಗಿಸುವುದರಿಂದ ಈ ಮಣ್ಣನ್ನು ಕೆರೆಗೋಡು ಗೊಬ್ಬರವೆಂದೇ ಕರೆಯಲಾಗುತ್ತಿದೆ.

ಗೋಡು ಮಣ್ಣಿನ ಬಳಕೆ, ಆ ಕೆರೆಯ ಗೋಡಿನ ಗುಣ ಮಟ್ಟ, ಸುತ್ತಮುತ್ತಲಿನ ಹಳ್ಳಿಗಳ ಸಂಖ್ಯೆ, ಕೃಷಿ ಭೂಮಿ ಮತ್ತು ಬೆಳೆ ಪದ್ಧತಿಗಳನ್ನು ಅವಲಂಬಿಸಿರುತ್ತದೆ.  ಕೃಷಿ ಜಮೀನಿನಲ್ಲಿ ಗೋಡು ಮಣ್ಣಿನ ಬಳಕೆ ದ್ರಾಕ್ಷಿ ಮತ್ತು ತೆಂಗಿನ ತೋಟಗಳು, ಹಿಪ್ಪು ನೇರಳೆ ಮತ್ತು ತರಕಾರಿ ಬೆಳೆಗಳಿಗೆ ಹೆಚ್ಚಾಗಿದ್ದು ಆಹಾರ ಬೆಳೆಗಳಿಗೆ ಇದರ ಬಳಕೆ ಕಡಿಮೆ ಇರುವುದು ಸಂಗ್ರಹಿಸಿದ ಮಾಹಿತಿಗಳಿಂದ ತಿಳಿದು ಬಂದಿದೆ.

ಹೂಳನ್ನು (ಕೆರೆಗೋಡನ್ನು) ಸಾವಯವ ಗೊಬ್ಬರವಾಗಿ ಬಳಸಲು ಗಮನಿಸಬೇಕಾದ ಅಂಶಗಳು

  • ಗೋಡಿನಲ್ಲಿರುವ ಜೇಡಿ ಅಂಶವನ್ನು ಪರಿಶೀಲಿಸಿ ಭೂಮಿಗೆ ಬಳಸಬೇಕು.
  • ಎಕರೆಗೆ 6 ರಿಂದ 8 ಟನ್ ಗಳಿಗಿಂತ ಹೆಚ್ಚಿಗೆ ಬಳಸಬಾರದು.
  • ಗೋಡನ್ನು ಭೂಮಿಯ ಮೇಲೆ ಸಮನಾಗಿ ಹರಡಿ, ಉಳುಮೆ ಮಾಡಿ ಮಣ್ಣಿನೊಳಕ್ಕೆ ಸೇರಿಸಬೇಕು.
  • ಗೋಡನ್ನು ಬಳಸಿದಾಗ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಬಹುದಾಗಿದೆ.
  • ಜಿಗಟು ಮಣ್ಣಿನ ಗುಣಳಿದ್ದರೆ ಗೋಡನ್ನು ಬಳಸಬಾರದು.
  • 2 ರಿಂದ 3 ವರ್ಷಗಳಿಗೊಮ್ಮೆ ಸಾವಯವ ಗೊಬ್ಬರದ ಬದಲು ಅಥವಾ ಸಮಪ್ರಮಾಣದಲ್ಲಿ ಸಾವಯವ ಗೊಬ್ಬರದೊಂದಿಗೆ ಬೆರೆಸಿ ಬಳಸುವುದು ಒಳ್ಳೆಯದು.
  • ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಭೂಮಿಯಲ್ಲಿ ಭತ್ತವನ್ನು ಬೆಳೆಯಲು ಕೆಸರು ಗದ್ದೆ ಮಾಡುವವರು ಜೇಡಿನ ಅಂಶ ಹೆಚ್ಚಾಗಿರುವ ಕಾರಣ ಕೆರೆ ಗೋಡನ್ನು ಬಳಸುವುದು ಸೂಕ್ತವಲ್ಲ.

ಪ್ರಬಲ ಸಾವಯವ ಗೊಬ್ಬರಗಳು:

ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರಗಳಿಗಿಂತ ಇವು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ.  ತಿನ್ನಬಾರದ ಹಿಂಡಿಗಳಾದ ಬೇವಿನ ಹಿಂಡಿ, ಹೊಂಗೆ ಹಿಂಡಿ ಇತ್ಯಾದಿ ಬೆಳೆಗಳಿಗೆ ಗೊಬ್ಬರವಾಗಿ ಉಪಯೋಗಿಸಬಹುದಾಗಿದೆ.  ಈ ಹಿಂಡಿಗಳನ್ನು ಪುಡಿಮಾಡಿ ಬಿತ್ತನೆ/ ನಾಟಿಗೆ ಒಂದುವಾರ ಮುಂಚಿತವಾಗಿ ಆಗಲಿ ಅಥವಾ ನಾಟಿಯಾದ 10-15 ದಿನಗಳ ನಂತರವಾಗಲಿ ಬಳಸಬಹುದು.  ಹಿಂಡಿ ಗೊಬ್ಬರಗಳು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಉತ್ಪನ್ನಗಳ ಗುಣಮಟ್ಟ ಮತ್ತು ಮಣ್ಣಿನ ಭೌತಿಕ ಮತ್ತು ರಸಾಯನಿಕ ಗುಣಗಳನ್ನು ವೃದ್ಧಿಪಡಿಸುತ್ತವೆ.  ಕೆಲವು ಹಿಂಡಿಗಳನ್ನು (ಬೇವಿನ ಹಿಂಡಿ, ಹರಳಿನ ಹಿಂಡಿ) ಕೀಟನಾಶಕಗಳಾಗಿ ಬಳಸುತ್ತಾರೆ.  ವಿವಿಧ ಬೆಳೆಗಳಿಗನುಸಾರವಾಗಿ ಎಕರೆಗೆ 200-400 ಕಿ.ಗ್ರಾಂ. ನಷ್ಟನ್ನು ಬಳಸಬಹುದು.

ಜೈವಿಕ ಗೊಬ್ಬರಗಳು:

 ಸೂಕ್ಷ್ಮ ಜೀವಿಗಳಿಂದ ತಯಾರಿಸಿದ ಗೊಬ್ಬರಕ್ಕೆ ಜೈವಿಕ ಗೊಬ್ಬರವೆಂದು ಕರೆಯುತ್ತಾರೆ.  ಇವುಗಳನ್ನು ಭೂಮಿಗೆ ಹಾಕುವುದರಿಂದ ವಾತಾರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವುದರಿಂದ ಅಥವಾ ರಂಜಕವನ್ನು ಕರಗಿಸಿ ಸಸ್ಯಕ್ಕೆ ಒದಗಿಸುವುದರಿಂದ ಸಸ್ಯದ ಬೆಳೆವಣಿಗೆ ಮತ್ತು ಇಳುವರಿ ಹೆಚ್ಚಾಗಲು ಸಹಕರಿಸುತ್ತವೆ.

ಸಾರಜನಕವನ್ನು ಹಿಡಿದಿಡುವ ಜೈವಿಕಗೊಬ್ಬರಗಳು:

ದ್ವಿದಳ ಧಾನ್ಯಗಳ ಬೇರುಗಳಲ್ಲಿರುವ ಜೀವಾಣುಗಳು ವಾತಾವರಣದಲ್ಲಿ ಸಾರಜನಕವನ್ನು ಬೇರಿನ ಗಂಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟು ಸಸ್ಯಕ್ಕೆ ಒದಗುವಂತೆ ಮಾಡುತ್ತವೆ.  ರೈಜೋಬಿಯಂ ಜೈವಿಕ ಗೊಬ್ಬರವನ್ನು ಉಪಯೋಗಿಸುವುದರಿಂದ ಶೇ. 10-15 ರಷ್ಟು ಹೆಚ್ಚು ಬೆಳೆ ಇಳುವರಿ ಪಡೆಯಬಹುದು.  ಈ ಜೈವಿಕ ಗೊಬ್ಬರವನ್ನು ತೊಗರಿ, ಕಡಲೆ, ಅಲಸಂದಿ, ಉದ್ದು, ಹೆಸರು, ಹುರಳಿ, ನೆಲೆಗಡಲೆ, ಸೋಯಾ ಅವರೆ ಹಾಗೂ ಮೇವಿನ ಬೆಳೆಗಳಿಗೆ ಉಪಯೋಗಿಸಬಹುದು. 

ವಿವಿಧ ಬೆಳೆಗಳು ರೈಜೋಬಿಯಂನಿಂದ ಹಿಡಿದಿಟ್ಟುಕೊಳ್ಳಬಹುದಾದ ಸಾರಜನಕದ ಪ್ರಮಾಣ

ಬೆಳೆಗಳು ಹಿಡಿದಿಡಲ್ಪಡುವ ಸಾರಜನಕ (ಕಿ.ಗ್ರಾಂ/ ಎಕರೆಗೆ)

ಕುದುರೆ ಮಸಾಲೆ  40-80

ತೊಗರಿ           65-80

ಕಡಲೆ             30-40

ಅಲಸಂದಿ         30-35

ಸಸ್ಬೇನಿಯ        80-100

ನೆಲಗಡಲೆ         20-25

ಹೆಸರು/ಉದ್ದು     20-22

ಬಟಾಣಿ           20-30

ಸೋಯಾ ಅವರೆ  25-30

ಅಜೋಸ್ಪೈರಿಲಂ: ಈ ಜೈವಿಕ ಗೊಬ್ಬರವನ್ನು ಭತ್ತ, ರಾಗಿ, ಜೋಳ, ತರಕಾರಿ ಬೆಳೆಗಳು ಹಾಗೂ ಹೂಗಿಡಗಳಿಗೆ ಬಳಸಬಹುದು.  ಈ ಜೈವಿಕ ಗೊಬ್ಬರಗಳ ಬಳಕೆಯಿಂದ ಶೇ. 10-15 ಹೆಚ್ಚು ಇಳುವರಿ ಪಡೆಯಬಹುದು.

ಅಜಟೋ ಬ್ಯಾಕ್ಟರ್: ಈ ಜೈವಿಕ ಗೊಬ್ಬರವನ್ನು ಸೂರ್ಯಕಾಂತಿ, ಹಿಪ್ಪುನೇರಳೆ, ಹತ್ತಿ ಹಾಗೂ ತರಕಾರಿ ಬೆಳೆಗಳಿಗೆ ಉಪಯೋಗಿಸಬಹುದು.

ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರಗಳು:

ಈ ಜೀವಾಣುಗಳಿಂದ ತಯಾರಾದ ಆಮ್ಲಗಳಿಂದ ಹಿಡಿದಿಟ್ಟಿರುವ ಅಥವಾ ಅಲಭ್ಯವಿರುವ ರಂಜಕವನ್ನು ಕರಗಿಸಿ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲು ಸಹಾಯ ಮಾಡುತ್ತವೆ.

ಉಪಯೋಗಿಸುವ ವಿಧಾನ: ಮುಖ್ಯವಾಗಿ ಈ ಜೈವಿಕ ಗೊಬ್ಬರವನ್ನು ಬೀಜಕ್ಕೆ ಲೇಪನ ಮಾಡುವುದು ಅಥವಾ ದ್ರಾವಣದಲ್ಲಿ ಬೇರುಗಳನ್ನು ಅದ್ದಿ ನಾಟಿ ಮಾಡುವುದು ಎಂಬ ಮೂರು ವಿಧಗಳಲ್ಲಿ ಬಳಸಬಹುದು.

  • ಬೀಜಕ್ಕೆ ಲೇಪನ ಮಾಡುವುದು: ದ್ವಿದಳ ಧಾನ್ಯಗಳಿಗೆ ರೈಜೋಬಿಯಂ ಜೀವಾಣುವನ್ನು ಶಿಫಾರಸ್ಸಿನ ಪ್ರಮಾಣದಲ್ಲಿ (10 ಕಿ.ಗ್ರಾಂ. ಬೀಜಕ್ಕೆ 200 ಗ್ರಾಂ. ಜೀವಾಣು) ಬೀಜಕ್ಕೆ ಲೇಪನ ಮಾಡಿ ಬಿತ್ತನೆ ಮಾಡುವುದು.
  • ಮಣ್ಣಿಗೆ ಸೇರಿಸುವುದು: ಶಿಫಾರಸ್ಸಿನ ಪ್ರಮಾಣದ ಜೀವಾಣುವನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಸೇರಿಸಿ ಎರಚುವುದು ಅಥವಾ ಸಾಲಿನಲ್ಲಿ ಹಾಕುವುದು.
  • ದ್ರಾವಣದಲ್ಲಿ ಬೇರುಗಳನ್ನು ಅದ್ದುವುದು: ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ತಯಾರಿಸಿದ ದ್ರಾವಣದಲ್ಲಿ ಬೇರುಗಳನ್ನು 10 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು.

ರೈಜೋಬಿಯಂ: ಎಕರೆಗೆ ಬೇಕಾದ ದ್ವಿದಳ ಧಾನ್ಯ ಬಿತ್ತನೆ ಬೀಜಕ್ಕೆ 200 ಗ್ರಾಂ. ಜೀವಾಣುವನ್ನು ಲೇಪಿಸಿ ಬಿತ್ತುವುದು.

ಅಜೋಸ್ಪೈರಿಲಂ : 400 ಗ್ರಾಂ. ಜೀವಾಣುವನ್ನು 25 ಕಿ.ಗ್ರಾಂ. ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡುವುದು.ಅಥವಾ 800 ಗ್ರಾಂ. ಜೀವಾಣುವನ್ನು 10-15 ಕಿ.ಗ್ರಾಂ. ಮರಳು/ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಅಥವಾ 400 ಗ್ರಾಂ. ಜೀವಾಣುವನ್ನು 200 ಲೀ. ನೀರಿನಲ್ಲಿ ಬೆರೆಸಿ ಮಾಡಿದ ದ್ರಾವಣದಲ್ಲಿಬೇರುಗಳನ್ನು 10 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು.

ಅಜಟೋಬ್ಯಾಕ್ಟರ್: 200 ಗ್ರಾಂ. ಜೀವಾಣುವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿದ 25 ರಿಂದ 30 ಕಿ.ಗ್ರಾಂ. ಕಾಂಪೋಸ್ಟ್ ಮತ್ತು ಮಣ್ನಿನ ಮಿಶ್ರಣದೊಂದಿಗೆ ಬೆರೆಸಿ ಎರಚುವುದು.

ರಂಜಕ ಕರಗಿಸುವ ಜೀವಾಣು ಗೊಬ್ಬರ

  • ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವ ಮೊದಲು ರೈಜೋಬಿಯಂ (150 ಗ್ರಾಂ. ಪ್ರತಿ ಎಕರೆ ಬೀಜಕ್ಕೆ) ಹಾಗೂ ರಂಜಕ ಕರಗಿಸುವ ಜೀವಾಣು ಗೊಬ್ಬರ (150 ಗ್ರಾಂ. ಪ್ರತಿ ಎಕರೆ ಬೀಜಕ್ಕೆ) ಎರಡನ್ನೂ ಮಿಶ್ರಮಾಡಿ ಬೀಜಗಳಿಗೆ ಲೇಪನ ಮಾಡುವುದು.
  • ತೃಣ ಧಾನ್ಯಗಳನ್ನು ಬಿತ್ತನೆ ಮಾಡುವ ಮೊದಲು ಅಜಟೋಬ್ಯಾಕ್ಟರ್ ಅಥವಾ ಅಜೋಸ್ಪೈರಿಲಂ ಜೀವಾಣು ಗೊಬ್ಬರದ ಜೊತೆ ರಂಜಕವನ್ನು ಕರಗಿಸುವ ಜೀವಾಣು ಗೊಬ್ಬರವನ್ನು (200 ಗ್ರಾಂ. ಪ್ರತಿ 10 ಕಿ.ಗ್ರಾಂ. ಬೀಜಕ್ಕೆ) ಚೆನ್ನಾಗಿ ಮೀಶ್ರಮಾಡಿ ಬೀಜೋಪಚಾರ ಮಾಡುವುದು.
  • ರಂಜಕ ಕರಗಿಸುವ ಜೀವಾಣು ಗೊಬ್ಬರವನ್ನು ನೇರವಾಗಿ ಮಣ್ಣಿಗೆ ಹಾಕುವಾಗ, ಶಿಫಾರಸ್ಸು ಮಾಡಿದ ಪ್ರಮಾಣವನ್ನು ಕಾಂಪೋಸ್ಟ್ ಗೊಬ್ಬರದ ಜೊತೆ ಚೆನ್ನಾಗಿ ಮಿಶ್ರಣಮಾಡಿ ಗಿಡದ ಬುಡಕ್ಕೆ ಅಥವಾ ಬಿತ್ತನೆ ಸಾಲಿನಲ್ಲಿ ಹಾಕುವುದು.

ಜೈವಿಕ ಗೊಬ್ಬರಗಳ ಮಹತ್ವ:

  • ಕಡಿಮೆ ಖರ್ಚಿನಲ್ಲಿ ಗೊಬ್ಬರವನ್ನು ಬೆಳೆಗೆ ಒದಗಿಸಬಹುದು.
  • ಮಣ್ಣಿನಲ್ಲಿ ಸಸ್ಯಕ್ಕೆ ಸಾಲದಿರುವ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
  • ಬೆಳೆ ಬೆಳೆವಣಿಗೆ ಪ್ರಚೋದಕಗಳನ್ನು ಮತ್ತು ಬೆಳೆಗೆ ಬೇಕಾಗುವ ಜೀವಸತ್ವಗಳನ್ನು ಉತ್ಪತ್ತಿ ಮಾಡಿ ಬೆಳೆಗೆ ಒದಗಿಸಿ ಉತ್ಪಾದನೆಯನ್ನು ಶೇ. 10-50 ರಷ್ಟು ಹೆಚ್ಚಿಸುತ್ತವೆ.
  • ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರವಾಗಿಡಲು ಸಹಾಯ ಮಾಡುತ್ತವೆ.

 

ಲೇಖಕರು:

ಡಾ. ಲೋಕೇಶ್ ಕೆ. ಸಹಾಯಕ ಪ್ರಾಧ್ಯಾಪಕರು,  

ಕೃಷಿ ಮಹಾವಿದ್ಯಾಲಯ, ಕಲಬುರಗಿ

Published On: 07 September 2020, 05:05 PM English Summary: Increase the fertility of the earth with green manure

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.