ಭಾರತ ಸರ್ಕಾರ ದೇಶದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದ್ದು, ಕೈಗೆಟಕುವ ದರದಲ್ಲಿ ಸಾಲ ಒದಗಿಸಲು ಇದು ಸಹಾಯಕವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಒಂದು ರೀತಿಯಲ್ಲಿ ಓರ್ವ ಡ್ರಾಫ್ಟ್ ಸಾಲದ ಹಾಗೆ. ಅಲ್ಪಾವಧಿ ಸಾಲದ ಮಿತಿಗೆ ರೈತನಿಗೆ ಕಿಸಾನ್ ಕ್ರೆಡಿಟ್ ಎಂಬ ಎಟಿಎಂ ಕಾರ್ಡ್ ನೀಡುತ್ತಾರೆ. ಈ ಖಾತೆಯಲ್ಲಿ ಎಷ್ಟು ಸಾರಿ ಬೇಕಾದರೂ ಹಣ ಕಟ್ಟಬಹುದು, ತೆಗೆಯಬಹುದು. ಅಂಗಡಿಗಳಲ್ಲಿ ಕಾರ್ಡ್ ಉಜ್ಜಿ ವಸ್ತುಗಳನ್ನು ಖರೀದಿಸಬಹುದು, ಬೇರೆಯವರಿಗೆ ಚೆಕ್ ಮೂಲಕ ಹಣ ಪಾವತಿಸಬಹುದು.
ಯಾವುದಕ್ಕೆ ಸಾಲ?
ಬೆಳೆ ಬೆಳೆಯಲು ಬೇಕಾಗುವ ಬೀಜ, ಗೊಬ್ಬರ ಇತ್ಯಾದಿ ಅಲ್ಪಾವಧಿ ಖರ್ಚುಗಳಿಗೆ, ಫಸಲು ಬಂದ ಅನಂತರ ಬೆಳೆಯ ಸಂಸ್ಕರಣೆಗೆ ಮಾಡಬೇಕಾದ ಖರ್ಚು ವೆಚ್ಚಗಳಿಗೆ, ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಬರುವವರೆಗೆ ಕಾಯ್ದಿಡಬೇಕಾದ ಅವಧಿಯಲ್ಲಿ ಅಗತ್ಯವಿರುವ ಕೃಷಿ ಖರ್ಚು, ರೈತನ ಮನೆಯ ಗೃಹಸಂಬಂಧಿ ಖರ್ಚು, ಕೃಷಿಗೆ ಸಂಬಂಧಿಸಿದ ಪರಿಕರಗಳ ರಿಪೇರಿ ಮತ್ತು ನಿರ್ವಹಣೆಗೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ನಲ್ಲಿ ಸಾಲ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಮೂರು ದಾಖಲೆಗಳು ಸಾಕು
ಮೂರು ದಾಖಲಾತಿಗಳು - ಕಿಸಾನ್ ಕಾರ್ಡ್ ಪಡೆಯಲು ಇಚ್ಚಿಸುವ ರೈತರು ಮೊದಲಿಗೆ ತಾವು ರೈತ ಎಂಬುದಕ್ಕೆ ಸಾಕ್ಷಿ ಒದಗಿಸಬೇಕು. - ವಾಸದ ದೃಢೀಕರಣ ಪತ್ರ ಒದಗಿಸಬೇಕು. - ಮೂರನೆಯದಾಗಿ ಬ್ಯಾಂಕ್ ನಲ್ಲಿ ಯಾವುದೇ ಸಾಲ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲು ಅಫಿಡವಿಟ್ ಸಲ್ಲಿಸುವಂತೆ ತಿಳಿಸಲಾಗಿದೆ. ಈ ಮೂರು ದಾಖಲೆಗಳೊಂದಿಗೆ ಕಿಸಾನ್ ಕಾರ್ಡ್ ಪಡೆಯಬಹುದು
ರೂ. 3 ಲಕ್ಷದವರೆಗೆ ಸಾಲ
ಈ ಯೋಜನೆ ಮೂಲಕ ರೈತರು ಕೃಷಿ ಮೇಲೆ ರೂ. 3 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೇವಲ ಕೃಷಿಕರಿಗೆ ಮಾತ್ರ ಸೀಮಿತವಾಗಿಸಿಲ್ಲ. ಬದಲಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಾಲ ನೀಡುತ್ತಿದೆ. ಶೇ.7 ಬಡ್ಡಿ ದರ ಈ ಸಾಲವನ್ನು ರಾಜ್ಯ ಸರ್ಕಾರಗಳು ಬ್ಯಾಂಕ್ ಮತ್ತು ಗ್ರಾಮ ಪಂಚಾಯತಿ ಸಹಾಯದಿಂದ ವಿತರಿಸಬಹುದಾಗಿದೆ. ಇನ್ನು 3 ಲಕ್ಷದವರೆಗಿನ ಸಾಲಕ್ಕೆ ಇಲ್ಲಿ ಶೇ.7 ರಷ್ಟು ಬಡ್ಡಿ ದರವನ್ನು ವಿಧಿಸಲಾಗಿದೆ. ಅಲ್ಲದೆ ಈ ಸಾಲದ ಮೊತ್ತವನ್ನು 1 ವರ್ಷದೊಳಗೆ ಮರು ಪಾವತಿಸಿದರೆ ಶೇ. 3 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಕಾರ್ಡ್ ಒದಗಿಸುವ ಬ್ಯಾಂಕುಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಭಾರತದ ಗ್ರಾಮೀಣ ಬ್ಯಾಂಕುಗಳಿಂದ ನೀಡಲ್ಪಡುತ್ತದೆ. ಅವುಗಳಲ್ಲಿ ಕೆಲವು: - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) - ಬ್ಯಾಂಕ್ ಆಫ್ ಇಂಡಿಯಾ (BOI) - ಇಂಡಿಯಾ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) - ನಬಾರ್ಡ್
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಹಂತಗಳು
ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಲಭ್ಯ ಇರುವ ಕ್ರೆಡಿಟ್ ಕಾರ್ಡ್ ಗಳ ಪೈಕಿ 'ಕಿಸಾನ್ ಕ್ರೆಡಿಟ್ ಕಾರ್ಡ್' ಅನ್ನು ಆಯ್ಕೆ ಮಾಡಿಕೊಳ್ಳಿ. 'ಅಪ್ಲೈ' ಬಟನ್ ಮೇಲೆ ಕ್ಲಿಕ್ ಮಾಡಿ. ಆ ಮೂಲಕ ನೀವು ಆನ್ ಲೈನ್ ಅರ್ಜಿಯ ಪುಟವನ್ನು ತೆರೆಯಲು ಸಾಧ್ಯವಾಗುತ್ತದೆ. ನಿಖರ ಮಾಹಿತಿಯೊಂದಿಗೆ ಎಲ್ಲ ಅಗತ್ಯ ವಿವರಗಳನ್ನು ತುಂಬಿರಿ. ಆ ನಂತರ 'ಸಬ್ ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ. ಒಂದು ಬಾರಿ ಅರ್ಜಿ ಸಲ್ಲಿಕೆಯಾದ ನಂತರ ಅರ್ಜಿಯ ರೆಫರೆನ್ಸ್ ಸಂಖ್ಯೆಯು ಜನರೇಟ್ ಆಗುತ್ತದೆ. ಆ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಆ ನಂತರದ ಎಲ್ಲ ವಿಚಾರಣೆಗೂ ಅದನ್ನು ಬಳಸಿ.
Share your comments