1. ಅಗ್ರಿಪಿಡಿಯಾ

ರೈತರು ಹುರುಳಿ ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯಿರಿ

Horse gram

ಹುರುಳಿ ದಕ್ಷಿಣ ಭಾರತದ ಪ್ರಮುಖ ದ್ವಿದಳ ಧಾನ್ಯಗಳಲೊಂದಾಗಿದೆ. ಇದನ್ನು ಪೂರ್ಣ ಬೆಳೆಯಾಗಿಯೂ ರಾಗಿ ಅಥವಾ ಇತರೆ ಬೆಳೆಗಳ ನಂತರ ಎರಡನೆಯ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ.  ಸುಲಭವಾಗಿ ಬೆಳೆಯಬಹುದಾದಂತಹ ಹುರುಳಿ ಶುಷ್ಕ ವಾತಾವರಣಕ್ಕೆ ಹೊಂದಿಕೊಂಡು ಅಧಿಕ ಇಳುವರಿ ನೀಡುತ್ತದೆ.  ಇಂದಿನ ದಿನಗಳಲ್ಲಿ ಹುರುಳಿಯನ್ನು ದಿನ ನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡದಿದ್ದರೂ ಬಳಸುವ ಹಲವಾರು ಆಹಾರ ಸಾಮಗ್ರಿಗಳಲ್ಲಿ ಹುರುಳಿಯನ್ನು ಯಥೇಚ್ಛವಾಗಿ ಬಳಸುವುದನ್ನು ಕಾಣಬಹುದು. 

ರಾಜ್ಯದಲ್ಲಿ ಇದನ್ನು 3.56 ಲಕ್ಷ ಹೆಕ್ಟರ್‍ಗಳಲ್ಲಿ ಬೆಳೆಯಲಾಗುತ್ತಿದ್ದು, ಇದರ ಉತ್ಪಾದನೆಯು 1.55 ಲಕ್ಷ ಟನ್‍ಗಳಿಷ್ಟಿದ್ದು ಸರಾಸರಿ ಇಳುವರಿ ಹೆಕ್ಟೇರಿಗೆ 460 ಕಿ.ಗ್ರಾಂ. ನಷ್ಟಿದೆ. ನಾಲ್ಕೈದು ದಶಕಗಳ ಹಿಂದೆ ಮಲೆನಾಡಿನ ಭಾಗದಲ್ಲಿ ಭತ್ತದ ಹೊಲವುಳ್ಳ ರೈತರು ಉತ್ತಮ ತಳಿಯ ಎತ್ತುಗಳನ್ನು ಸಾಕಿಕೊಳ್ಳುತ್ತಿದ್ದರು.

ಉಳುಮೆ, ಸಾಕಾಣಿಕೆ ಉದ್ದೇಶಗಳಿಗಾಗಿ ಸಾಕುತ್ತಿದ್ದ ಇವುಗಳನ್ನು ಸಾಮಾನ್ಯವಾಗಿ ನೆರೆಯ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಜಾನುವಾರುಗಳ ಸಂತೆಯಲ್ಲಿ ಖರೀದಿಸಿ ತರುತ್ತಿದ್ದರು.  ಹೆಚ್ಚಿನ ಶ್ರಮದ ಕೆಲಸ ಮಾಡುತ್ತಿದ್ದ ಕಾರಣ ಅವುಗಳಿಗೆ ಶಕ್ತಿವರ್ಧಕವಾಗಿ ವಿಶೇಷ ಪಶು ಆಹಾರ ರೂಪದಲ್ಲಿ ಹತ್ತಿಕಾಳು ಮತ್ತು ಹುರುಳಿಗಳನ್ನು ಬೇಯಿಸಿ, ಮಿಶ್ರಣ ಮಾಡಿ ಕೊಡುವ ಕ್ರಮ ರೂಢಿಯಲ್ಲಿತ್ತು.  ಹೀಗೂ ಹಾಗೂ ಹುರುಳಿಯನ್ನು ಬೇಯಿಸಿದ ಸಾರದ ನೀರಿನಿಂದ ‘ರಸಂ’ ತಯಾರಿಸಿ ಊಟಕ್ಕೆ ಬಳಸತ್ತಿದ್ದರು.  ಆ ದಿನಗಳಲ್ಲಿ ಹುರುಳಿ ಎಂದರೆ ಜಾನುವಾರುಗಳಿಗೆ ಕೊಡುವ ಆಹಾರ ಎಂದೇ ಕೆಲವರು ಅಂದುಕೊಂಡಿದ್ದರು.

ಇಂದಿನ ದಿನಗಳಲ್ಲಿ ಹುರುಳಿಯನ್ನು ದಿನನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡದಿದ್ದರೂ ಬಳಸುವ ಹಲವಾರು ಆಹಾರ ಸಾಮಗ್ರಿಗಳಲ್ಲಿ ಹುರುಳಿಯನ್ನು ಯಥೇಚ್ಛವಾಗಿ ಬಳಸುವುದನ್ನು ಕಾಣಬಹುದು.  ಸಾಮಾನ್ಯವಾಗಿ ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆಯುಂಟಾಗಿ ಇತರೆ ಬೆಳೆಗಳಿಗೆ ತೇವಾಂಶ ಕಡಿಮೆ ಆಗಬಹುದೆಂಬ ಆತಂಕ ಉಂಟಾದಾಗ ಹುರುಳಿಯನ್ನು ಬಿತ್ತನೆ ಮಾಡುವ ಕ್ರಮವನ್ನು ಅನುಸರಿಸುತ್ತಾರೆ.  ಇನ್ನು ಕೆಲವಡೆ ಮಳೆಗಾಲದ ಬೆಳೆಯ ನಂತರ ಮಾಗಿ ಉಳುಮೆ ಮಾಡಿ ಇತರ ಹಲವು ದ್ವಿದಳ ಧಾನ್ಯಗಳಂತಹ ಹುರುಳಿಯನ್ನು ಕೂಡ ಬೆಳೆಯುತ್ತಾರೆ.  ಸಾಮಾನ್ಯ ಫಲವತ್ತತೆ ಬಳಸಿಕೊಂಡು ಇದನ್ನು ಬೆಳೆಯಬಹುದಾದರೂ ಉಳುಮೆಯ ಸಮಯದಲ್ಲಿ ಮಣ್ಣಿಗೆ ಅಗತ್ಯ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಇಲ್ಲವೇ ಇತರ ಸಾವಯವ ಗೊಬ್ಬರವನ್ನು ಸೇರಿಸಿ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.  ಇತರ ದ್ವಿದಳ ಧಾನ್ಯಗಳನ್ನು ಬೆಳೆಯಬಹುದಾದ ಎಲ್ಲ ಬಗೆಯು ಮಣ್ಣಿನಲ್ಲಿ ಹುರುಳಿ ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯಬಹುದು.

ತಳಿಗಳು:  ಹುರುಳಿಯು 4-6 ತಿಂಗಳ ಅವಧಿಯ ಬೆಳೆಯಾಗಿದ್ದು, ಪ್ರತಿ ಎಕರೆಗೆ 10-12 ಕಿ.ಗ್ರಾಂ.  ಬಿತ್ತನೆ ಬೀಜ ಬೇಕಾಗುತ್ತದೆ.  ಹುರುಳಿಯನ್ನು ಬಹಳ ಹಿಂದಿನಿಂದಲೂ ಬೆಳೆಯುತ್ತಾ ಬರಲಾಗುತ್ತಿದ್ದು, ಆಯಾ ಪ್ರದೇಶಗಳಲ್ಲಿ ಸ್ಥಳಿಯ ಜವಾರಿ ತಳಿಗಳು ಇದ್ದೆ ಇರುತ್ತವೆ.  ಇತ್ತೀಚಿಗೆ ಈ ಬೆಳೆಯಲ್ಲಿ ಸುಧಾರಿತ ತಳಿಗಳು ಲಭ್ಯವಾಗುತ್ತಿದ್ದು, ಬಿ.ಜಿ.ಎಂ-1, ಹೆಬ್ಬಾಳ ಹುರುಳಿ-1 & 2, ಮಧು ಮತ್ತು ಪಿ.ಹೆಚ್.ಜಿ-93 ತಳಿಗಳು ಜನಪ್ರಿಯವಾಗಿವೆ. 

ಪೋಷಕಾಂಶಗಳ ಆಗರ:

ನೇರವಾಗಿ ಸೇವನೆಗೆ ಹೆಚ್ಚು ಬಳಕೆಯಾಗದ ಹುರುಳಿ ಪ್ರತ್ಯಕ್ಷ ಜನಪ್ರಿಯತೆ ಗಳಿಸಿಕೊಂಡಂತೆ ಕಾಣುತ್ತಿಲ್ಲವಾದರೂ ಇದರ ಉಪಯೋಗಕ್ಕೆ ಏನೂ ಕೊರತೆ ಇಲ್ಲವೆಂದು ಹೇಳಬಹುದು.  ಹುರುಳಿಯು ಒಂದು ಶಕ್ತಿಭರಿತ ಬೆಳೆಕಾಳು ಆಗಿದ್ದು, ಆರೋಗ್ಯಕರ ಪೌಷ್ಟಿಕ ಗುಣಗಳನ್ನು ಹೊಂದಿದೆ.  ಇದರ 100 ಗ್ರಾಂ. ಕಾಳುಗಳಿಂದ 321 ಕ್ಯಾಲೋರಿಯಷ್ಟು ಶಕ್ತಿ ದೊರೆಯುತ್ತದೆ.  ಇದರಲ್ಲಿ 57 ಗ್ರಾಂ. ಶರ್ಕರಪಿಷ್ಟ, ನಾರಿನ ಅಂಶ, 311 ಕಿ.ಗ್ರಾಂ. ನಷ್ಟು ರಂಜಕ, 287 ಕಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಸತ್ವಗಳಿವೆ.

ಹುರುಳಿಯ ಸೇವನೆಯಿಂದ ಹಲವಾರು ಔಷಧಿಯ ಉಪಯೋಗಗಳಿದ್ದು, ಇದು ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿಡಲು ಸಹಕರಿಸುತ್ತದೆ.  ಸಂದು ನೋವು ಮತ್ತು ಮೂಲವ್ಯಾದಿಗೆ ಇದರಿಂದ ಉಪಶಮನ ದೊರೆಯುವುದೆಂದು ಹೇಳಲಾಗುತ್ತದೆ. ಹುರುಳಿಯು ಪ್ರಮುಖವಾಗಿ ಮೂತ್ರಕೋಶದ ಕಲ್ಲುಗಳನ್ನು ನಿವಾರಿಸುವಲ್ಲಿ ರಾಮಬಾಣವಾಗಿದೆ.

ಬಿತ್ತನೆ ಕಾಲ: ಇದನ್ನು ಮುಂಗಾರು ತಡವಾದಲ್ಲಿ ಆಗಸ್ಟ್ ತಿಂಗಳಲ್ಲಿ ಅಥವಾ ಮೊದಲನೆ ಮುಂಗಾರು ಬೆಳೆಯ

ಕಟಾವಿನ ನಂತರ ಸೆಪ್ಟಂಬರ್‍ನಲ್ಲಿ ಬಿತ್ತನೆ ಮಾಡಬಹುದು.

ಬಿತ್ತನೆ ಬೀಜ: ಪ್ರತಿ ಹೇಕ್ಟೇರಿಗೆ 25 ಕಿ.ಗ್ರಾಂ. ಬೀಜ ಬೇಕಾಗುತ್ತದೆ.

ರಾಸಾಯನಿಕ ಗೊಬ್ಬರಗಳು: ಸಾರಜನಕ: 25 ಕಿ.ಗ್ರಾಂ. ರಂಜಕ: 38 ಕಿ.ಗ್ರಾಂ. ಪೊಟ್ಯಾಷ್: 25 ಕಿ.ಗ್ರಾಂ. ಪ್ರತಿ ಹೇಕ್ಟೇರಿಗೆ ಬೇಕಾಗುತ್ತದೆ .

ಬಿತ್ತನೆ: ಭೂಮಿ ಸಿದ್ಧವಾದ ಕೂಡಲೇ ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಸೆರಿಸಿ 30 x 7.5

ಸೆಂ.ಮೀ. ಅಂತರದಲ್ಲಿ ಬಿತ್ತಬೇಕು.

ಕ್ಷೇತ್ರ ವೀಕ್ಷಣೆ: ಕ.ರಾ.ಬೀ. ಮತ್ತು ಸಾವಯವ ಪ್ರಮಾಣಿತ ಸಂಸ್ಥೆ ಕೊನೆಯ ಪಕ್ಷ ಎರಡು ಬಾರಿಯಾದರೂ ಬೆಳೆ ವೀಕ್ಷಿಸಬೇಕು ಮೊದಲನೆ ಭೇಟಿ  ಹೂವಾಡುವ ಸಮಯದಲ್ಲಿ ಹಾಗೂ ಎರಡನೇ ಕ್ಷೇತ್ರ ಭೇಟಿ ಬೆಳೆಮಾಗುವ ಮತ್ತು ಕಟಾವು ಸಮಯದಲ್ಲಿ.

ಕ್ಷೇತ್ರ ಹಾಗೂ ಬೀಜ ಮಾನದಂಡಗಳು:  ಪ್ರತ್ಯೇಕತೆ ಅಂತರ ದೂರ: ಇದು ಸ್ವಕ್ರಿಯ ಪರಾಗಸ್ವರ್ಶ ಬೆಳೆಯಾದ್ದರಿಂದ ಮೂಲ ಬೀಜ ವರ್ಗಕ್ಕೆ ಕನಿಷ್ಟ 10 ಮೀ. ಹಾಗೂ ಪ್ರಮಾಣಿತ ಬೀಜ ವರ್ಗಕ್ಕೆ ಕನಿಷ್ಟ 5 ಮೀ. ಅಂತರ ಕೊಡಬೇಕು.

ಬೀಜ ಮಾನದಂಡಗಳು:

ಕ್ರ. ಸಂ

ವರ್ಗಗಳು

ಮಾಲ ಬೀಜ

ಪ್ರಮಾಣೀತ ಬೀಜ

1

ಬೀಜ ಶುದ್ಧತೆ (ಕನಿಷ್ಟ)

98 %

98 %

2

ಜಡವಸ್ತು (ಗರಿಷ್ಟ) 

2 %

2 %

3

ಬೇರೆ ಬೆಳೆ ಬೀಜ (ಗರಿಷ್ಟ)

ಇಲ್ಲ

10 ಕಿ.ಗ್ರಾಂ.

4

ಕಳೆ ಬೀಜ (ಗರಿಷ್ಟ)

ಇಲ್ಲ

ಇಲ್ಲ

5

ಬೇರೆ ತಳಿ ಬೀಜ (ಗರಿಷ್ಟ)

5 ಕಿ.ಗ್ರಾಂ.

10 ಕಿ.ಗ್ರಾಂ.

6

ಮೊಳಕೆ ಪ್ರಮಾಣ (ಕನಿಷ್ಟ)

80 %      

80 %

7

ತೇವಾಂಶ (ಗರಿಷ್ಟ)         

9.0 %    

9.0 %

ಇಳುವರಿ : ಪೂರ್ಣ ಬೆಳೆಯಿಂದ ಹೇಕ್ಟೇರಿಗೆ 8 ರಿಂದ 10 ಕ್ವಿಂಟಲ್ ಬೀಜದ ಇಳುವರಿ ಪಡೆಯಬಹುದು.

ಬೀಜೋತ್ಪಾದನೆ ಮಾಡಲು ಇಚ್ಛಿಸುವವರು ಈ ಕೆಳಗೆ ಕಾಣಿಸಿದಂತಹ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ಮಾಡಿ ಮಾಹಿತಿ ಹಾಗೂ ಬೀಜ ಖರೀದಿಸಿ ರೈತರ ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಮಾಡಿ ಲಾಭಗಳಿಸಬಹುದು.

ಬೀಜ ಘಟಕ, ಕೃಷಿ ಮಹಾವಿದ್ಯಾಲಯ, ಬೆಂಗಳೂರು. ಬೀಜ ಘಟಕ, ಕೃಷಿ ಮಹಾವಿದ್ಯಾಲಯ, ಧಾರವಾಡ. ಬೀಜ ಘಟಕ, ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯ, ಶಿವಮೊಗ್ಗ.

ಲೇಖಕರು: ಡಾ. ಲೋಕೇಶ್ ಕೆ., ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ. ಡಾ. ಸಿದ್ದರಾಮ, ಸಹಾಯಕ ಪ್ರಾಧ್ಯಾಪಕರು, ಡಾ. ಮಲ್ಲಿಕಾರ್ಜುನ್ ರೆಡ್ಡಿ, ಸಹಾಯಕ ಪ್ರಾಧ್ಯಾಪಕರು ಶ್ರೀ ಸುಹಾಸ ಪಿ.ಡಿ., ಸಹಾಯಕರು, ಕೃಷಿ ಮಹಾವಿದ್ಯಾಲಯ, ಕಲಬುರಗಿ

Published On: 23 August 2021, 08:51 PM English Summary: Grow horse gram and get better yield

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.