1. ಅಗ್ರಿಪಿಡಿಯಾ

ಹಸಿರೆಲೆ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಭರಪೂರ ಬೆಳೆ ಪಡೆಯಿರಿ

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಷ್ಟು ಹಿಂದಿನಿಂದಲೂ ಬಂದ ಪದ್ಧತಿ. ಇದು ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಸಿರೆಲೆ ಗೊಬ್ಬರವು ಭೂಮಿಗೆ ಮತ್ತು ಬೆಳೆಗೆ ಅವಶ್ಯವಿರುವ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನಲ್ಲದೆ ಇತರ ಲಘು ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ರೈತರಿಗೆ  ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂಬುದರ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.

ಹಸಿರೆಲೆ ಗೊಬ್ಬರ ಬೇಸಾಯ ಅಂದರೆ ಬಲಿಯದ ಸಸ್ಯಗಳು, ಸಸ್ಯದ ಎಲೆಗಳು ಮತ್ತು ಉಳಿದ ಎಳೆಯ ಸಸ್ಯ ಭಾಗಗಳನ್ನು ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿ ಬೆರೆಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವದಾಗಿದೆ.

ಹಸಿರೆಲೆ ಗೊಬ್ಬರದ ಪ್ರಕಾರಗಳು :

1) ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು    2) ಹಸಿರೆಲೆ ಗೊಬ್ಬರಗಳು

1) ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು :

 ಹಸಿರು ಗೊಬ್ಬರ ಬೆಳೆಯುವ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಸ್ಥಳದಲ್ಲಿಯೇ ಮಣ್ಣಿನಲ್ಲಿ ಬೆರೆಸುವ ವಿಧಾನಕ್ಕೆ ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು ಎಂದು ಕರೆಯುತ್ತಾರೆ.  ಈ ವಿಧಾನದಲ್ಲಿ ಹಸಿರು ಗೊಬ್ಬರ ಬೆಳೆಯ ಬೀಜಗಳನ್ನು ಮುಖ್ಯ ಬೆಳೆಯನ್ನು  ಬಿತ್ತುವ ಮೊದಲು ಅಥವಾ ಅದರ ಜೊತೆಗೆ ಬಿತ್ತಿಬಹುದಾಗಿದೆ.  ಸಾಮಾನ್ಯವಾಗಿ ಈ ಹಸಿರು ಗೊಬ್ಬರ ಬೆಳೆಯನ್ನು ಬಿತ್ತನೆ ಮಾಡಿದ 6 ವಾರಗಳ ನಂತರ ಮಣ್ಣಿನೊಂದಿಗೆ ಬೆರೆಸಲಾಗುವುದು. ಇದಕ್ಕೂ ಪೂರ್ವದಲ್ಲಿ ಬೆರೆಸಿದರೆ ಹಸಿರು ಗೊಬ್ಬರದ ಇಳುವರಿ ಕಡಿಮೆಯಾಗುವುದು, ನಂತರ ಬೆರೆಸಿದರೆ ಗೊಬ್ಬರದಲ್ಲಿ ನಾರಿನ ಅಂಶ ಹೆಚ್ಚಾಗಿ ಬೇಗನೆ ಕೊಳೆಯುವದಿಲ್ಲ.

ಉದಾ : ಸೆಣಬು, ದಯಂಚಾ, ಚೊಗಟಿ, ಚವಳಿ, ಆಲಸಂದಿ, ಸೀಮಾ ಅವರೆ ಮತ್ತು ಹೆಸರು.

2) ಹಸಿರೆಲೆ ಗೊಬ್ಬರಗಳು : ಈ ವಿಧಾನದಲ್ಲಿ ಬೇರೆ ಸ್ಥಳದಲ್ಲಿ ಲಭ್ಯವಿರುವ ಬಹುವಾರ್ಷಿಕ ಸಸ್ಯಗಳ ಹಸಿರೆಲೆಗಳನ್ನು ಕಟಾವು ಮಾಡಿ ತಂದು ಮಣ್ಣಿನಲ್ಲಿ ಬೆರೆಸುತ್ತಾರೆ.  ಈ ವಿಧಾನದಲ್ಲಿ ಹೊಲದ ಬದುಗಳಲ್ಲಿ ಅಥವಾ ಇತರ ಸಮೀಪದ ಸ್ಥಳದಲ್ಲಿ ಈ ಬೆಳೆಗಳನ್ನು ಬೆಳೆಯುತ್ತಾರೆ. 

ಉದಾ : ಗ್ಲಿರಿಸಿಡಿಯಾ, ಹೊಂಗೆ, ಸುಬಾಬುಲ್

ಹಸಿರೆಲೆ ಗೊಬ್ಬರದ ಲಾಭಗಳು :

1) ಈ ವಿಧಾನದಲ್ಲಿ ಭೂಮಿಗೆ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತವೆ.  ಮತ್ತು ಮಣ್ಣಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ. 

2) ಹಸಿರೆಲೆ ಗೊಬ್ಬರ ಕೊಳೆಯುವ ಸಂದರ್ಭದಲ್ಲಿ ಉತ್ಪನ್ನವಾದ ಆಮ್ಲಗಳು, ರಂಜಕ ಸಸ್ಯಗಳಿಗೆ ದೊರೆಯುವಂತೆ ಪರಿವರ್ತಿಸಲು ನೆರವಾಗುತ್ತವೆ.

3) ಹಸಿರೆಲೆ ಗೊಬ್ಬರ ಸಾರಜನಕ ಸ್ಥಿರಿಕರಿಸಿ ಬೆಳೆಗಳಿಗೆ ಸಹಕಾರ ನೀಡಬಲ್ಲವು

4) ಈ ಬೆಳೆಗಳು ಭೂಮಿಯ ಆಳವಾದ ಪೊದರಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಮಣ್ಣಿನಲ್ಲಿ ಸೇರಿಸಿ- ವಾರ್ಷಿಕ ಬೆಳೆಗಳ ಪೋಷಕಾಂಶ ನಿರ್ವಹಣೆಯಲ್ಲಿ ನೆರವಾಗುತ್ತವೆ. 

5) ಇದೊಂದು ಕಡಿಮೆ ಖರ್ಚಿನ ಲಾಭದಾಯಕ ಬೇಸಾಯ ಕ್ರಮ ಎನಿಸಿದೆ. 

ಹಸಿರೆಲೆ ಗೊಬ್ಬರದ ಬೆಳೆಗಳ ಲಕ್ಷಣಗಳು :

1) ಈ ಸಸ್ಯಗಳು ಬೇಗನೆ ಬೆಳೆಯುವಂತೆ ಇರಬೇಕು.

2) ಸಸ್ಯಗಳು ಬಹಳಷ್ಟು ಎಲೆ ಮತ್ತು ಮೃದು ಭಾಗಗಳನ್ನು ಉತ್ಪಾದಿಸುವಂತೆ ಇರಬೇಕು.

3) ಈ ಸಸ್ಯಗಳು ಕಸದೊಂದಿಗೆ ಸ್ಪರ್ದಿಸಿ ಅವುಗಳನ್ನು ನಿಲ್ಲಿಸಿ ಬೆಳೆಯುವ ಹಾಗೆ ಇರಬೇಕು.

4) ಈ ಬೆಳೆಗಳು ಸಾರಜನಕ ಸ್ಥಿರಿಕರಿಸುವ ಗುಂಪಿಗೆ ಸೇರುವುದು ಆಪೇಕ್ಷಣೀಯ.

ವಿವಿಧ ಹಸಿರು ಗೊಬ್ಬರ ಬೆಳೆಗಳು :

ಸೆಣಬು

1) ಸೆಣಬು : ಇದು ತೀವ್ರವಾಗಿ ಬೆಳೆದು 45 ದಿನಗಳಲ್ಲಿ ಮಣ್ಣಿನೊಂದಿಗೆ ಬೆರೆಸಬಹುದಾಗಿದೆ.  ಇದು ಅಧಿಕ ಪ್ರಮಾಣದ ತೇವಾಂಶ/ ನೀರವಾರಿ ತಡೆದುಕೊಳ್ಳಲಾರದು.  ಇದಕ್ಕೆ ಎಲೆ ತಿನ್ನುವ ಹುಳು ಮತ್ತು ಮಜ್ಜಿಗೆ ರೋಗ ಉಂಟಾಗಬಹುದಾಗಿದೆ.  ಪ್ರತಿ ಎಕರೆ ಬಿತ್ತಲು 8-10 ಕಿ.ಗ್ರಾಂ. ಬೀಜಗಳು ಬೇಕಾಗುತ್ತವೆ.  ಸಣಬು ಪ್ರತಿ ಎಕೆರೆಗೆ 4-5 ಟನ ಹಸಿರೆಲೆ ಗೊಬ್ಬರ ಉತ್ಪಾದಿಸಬಲ್ಲದು. 

ದಯಾಂಚಾ

2) ದಯಾಂಚಾ : ಇದು ಮೆಕ್ಕಲು ಮಣ್ಣು ಜೇಡಿ ಮಣ್ಣಿನಲ್ಲಿ ಒಳ್ಳೆಯ ಹಸಿರು ಗೊಬ್ಬರವಾಗಿದೆ.  ಅದರಲ್ಲಿಯೂ ಕ್ಷಾರ ಭೂಮಿ ಮತ್ತು ಭತ್ತದ ಗದ್ದೆಗಳಲ್ಲಿ ಒಳ್ಳೆಯ ಇಳುವರಿ ಕೊಡುತ್ತದೆ.  4-5 ವರ್ಷಗಳ ವರೆಗೆ ನಿರಂತರವಾಗಿ ಬೆಳೆದರೆ ಭೂಮಿಯಲ್ಲಿನ ಕ್ಷಾರದ ಲವಣಗಳು ಕಡಿಮೆ ಆಗುತ್ತವೆ.  ಇದು ನೀರಾವರಿ ಪ್ರದೇಶಕ್ಕೆ ಒಳ್ಳೆಯದು ಎನಿಸಿಕೊಂಡಿದೆ.  ಪ್ರತಿ ಎಕರೆಗೆ 12-15 ಕಿ.ಗ್ರಾಂ. ಬೀಜ ಬೇಕು ಇದು ಪ್ರತಿ ಎಕರೆಗೆ 4-6 ಟನ್ ಹಸಿರೆಲೆ ಗೊಬ್ಬರ ಉತ್ಪಾದಿಸಬಲ್ಲದು.

3) ಚೊಗಚಿ : ಇದು ಗದ್ದೆಗಳಲ್ಲಿ ಬೆಳೆಯಲು ಒಳ್ಳೆಯ ಹಸಿರು ಗೊಬ್ಬರದ ಬೆಳೆಯಾಗಿದೆ.  ಈ ಸಸ್ಯವು ಅಧಿಕ ಪ್ರಮಾಣದಲ್ಲಿ ಬೇರು ಮತ್ತು ನೀರಿಗೆ ತಾಗಿರುವ ಕಾಂಡದ ಮೇಲೆ ಸಾರಜನಕ ಸ್ಥಿರಿಕರಿಸುವ ಗಂಟುಗಳನ್ನು ಉತ್ಪಾದಿಸಬಲ್ಲದು.  ಇದರಿಂದ ಇವುಗಳ ಸಾರಜನಕ ಸ್ಥಿರಿಕರಿಸುವ ಶಕ್ತಿ ಹೆಚ್ಚುತ್ತದೆ. ಇದು ಸಾಮಾನ್ಯವಾಗಿ ಕಡಿಮೆ ಅಂದರೆ ಎಕರೆಗೆ 1-1.5 ಟನ ಹಸಿರೆಲೆ ಗೊಬ್ಬರ ಉತ್ಪಾದಿಸಬಲ್ಲದು.

ವಿವಿಧ ಹಸಿರೆಲೆ ಗೊಬ್ಬರ ಬೆಳೆಗಳು :

ಗ್ಲಿರಿಸಿಡಿಯಾ

ಗ್ಲಿರಿಸಿಡಿಯಾ : ಇದೊಂದು ಮರ ಕಂಟಿಯಾಗಿದ್ದು, ತೇವಾಂಶ ಅಧಿಕವಾಗಿರುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಬಂಜರು ಭೂಮಿ, ಒಡ್ಡು, ಬದುಗಳ, ರಸ್ತೆಗುಂಟ ಮುಂತಾದ ಕಡೆ ಬೆಳೆಯಬಹುದು.  ಇದನ್ನು ಕಾಂಡದ ತುಂಡುಗಳಿಂದ ಅಥವಾ ಬೀಜದಿಂದ ಸಸ್ಯವರ್ಧನೆ ಮಾಡಬಹುದು.  ಈ ಮರವು ಕಡಿದಂತೆ ಪುನಃ ಚಿಗುರುವ ಬಹುವಾರ್ಷಿಕ ಸಸ್ಯವಾಗಿದೆ.  ಪ್ರತಿ ಗಿಡದಿಂದ ವಾರ್ಷಿಕ 12-15 ಕಿ.ಗ್ರಾಂ. ಹಸಿರೆಲೆ ದೊರೆಯುತ್ತದೆ.  ಸುಮಾರು 400 ಗಿಡಗಳನ್ನು ಬದುಗಳನ ಮೇಲೆ ಬೆಳೆಸಿದರೆ, ಅದರಿಂದ ವಾರ್ಷಿಕ 5-6 ಟನ್ ಹಸಿರೆಲೆ ಪಡೆಯಬಹುದು. ಇದು ಸಾರಜನಕ ಸ್ಥಿರಿಕರಿಸುವ ಗುಂಪಿಗೆ ಸೇರಿದೆ.

ಹೊಂಗೆ

ಹೊಂಗೆ : ಇದು ಸಹ ಸಾರಜನಕ ಸ್ಥಿರಿಕರಿಸುವ ಅಧಿಕ ಆದ್ರ ಪ್ರದೇಶಗಳಲ್ಲಿ ಬೆಳೆಯುವ ಗಿಡವಾಗಿದೆ.  ಪ್ರತಿಯೊಂದು ಮರವು ವಾರ್ಷಿಕ 100-120 ಕಿ.ಗ್ರಾಂ. ಹಸಿರೆಲೆ ಗೊಬ್ಬರ ನೀಡಬಲ್ಲದು. ಇದರ ಎಲೆಗಳಲ್ಲಿ ಪ್ರತಿಶತ 3.7 ರಷ್ಟು ಸಾರಜನಕ ಇರುತ್ತದೆ. ಇದು ಸಹ ಕಡಿದಾಗ ತಕ್ಷಣ ಪುನಃ ಚಿಗುರಿ ಬೆಳೆಯುತ್ತದೆ. 

ಸುಬಾಬುಲ್

ಸುಬಾಬುಲ್ : ಇದು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುವ ಹಾಗೂ ಸಾರಜನಕ ಸ್ಥಿರಿಕರಿಸುವ ಸಸ್ಯವಾಗಿದೆ.  ಈ ಮರವು ಸಹ ಹಸಿರೆಲೆಗಾಗಿ ಕಡಿದಾಗ ಪುನಃ ಚಿಗುರೊಡೆದು ಬೆಳೆಯುವ ಸಾಮರ್ಥ್ಯವನ್ನು ಪಡೆದಿದೆ.  ಪ್ರತಿ ಸಸ್ಯವು 7-8 ಕಿ.ಗ್ರಾಂ. ನಷ್ಟು ಹಸಿರೆಲೆ ಇಳುವರಿ ಕೊಡಬಲ್ಲದು.  ಇದರ ಎಲೆಗಳಲ್ಲಿ ಪ್ರತಿಶತ 3.8 ರಷ್ಟು ಸಾರಜನಕ ಇರುತ್ತದೆ.  

ಪ್ರಮುಖ ಹಸಿರೆಲೆ ಗೊಬ್ಬರ ಬೆಳೆಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ

ಕ್ರಮ.ಸಂ

ಸಸ್ಯ

ಸಾರಜನಕ

ರಂಜಕ

ಪೋಟ್ಯಾಷ್

1

ದಯಂಚಾ

3.50

0.60

1.20

2

ಸಣಬು

2.30

0.50

1.80

3

ಆಲಸಂದಿ

2.30

0.50

2.60

4

ಚವಳಿ

3.00

0.40

1.60

5

ಹೊಂಗೆ

3.30

0.40

2.30

6

ಗ್ಲಿರಿಸಿಡಿಯಾ

2.90

0.50

2.80

7

ಕಾಡುಮರದ ಎಲೆಗಳು

1.20

0.60

0.40

ಹಸಿರೆಲೆ ಗೊಬ್ಬರದ ಬೆಳೆಗಳು ಸಾಗುವಳಿಯಲ್ಲಿ ಗಮನಿಸಬೇಕಾದ ಅಂಶಗಳು

1) ಹಸಿರೆಲೆ ಗೊಬ್ಬರದ ಬೆಳೆಯನ್ನು ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಮಳೆ ಆದರೆ ಬಿತ್ತಬಹುದು, ಇಲ್ಲದಿದ್ದರೆ ಮುಂಗಾರಿನ ಪ್ರಾರಂಭದಲ್ಲಿ ಬಿತ್ತಿರಿ.

2)  ಹಸಿರೆಲೆ ಗೊಬ್ಬರದ ಇಳುವರಿ ಹೆಚ್ಚಿಗೆ ಪಡೆಯಲು ಮತ್ತು ಕಾಂಡ ಮೆತ್ತಗೆ ಇರಲು ಅಧಿಕ ಪ್ರಮಾಣದ ಬೀಜ ಬಿತ್ತಿರಿ.

3)  ಬೀಜಗಳನ್ನು ನೀರಿನಲ್ಲಿ ನೆನೆಸಿ ಬಿತ್ತಿದರೆ, ಅಧಿಕ ಪ್ರಮಾಣದಲ್ಲಿ ಮೊಳಕೆ ಬರುತ್ತದೆ.

4)  ಗ್ಲಿಸಿರಿಡಿಯಾ ಮತ್ತು ಚೊಗಟೆ ಹಸಿರೆಲೆ ಗೊಬ್ಬರ ಬೆಳೆಗಳನ್ನು ಕಾಂಡದ ತುಂಡು ಉಪಯೋಗಿಸಿ ಸಸ್ಯಾಭಿವೃದ್ಧಿ ಮಾಡಬಹುದು.

5) ಹಸಿರೆಲೆ ಗೊಬ್ಬರ ಬೆಳೆಯನ್ನು ಮಿಶ್ರ ಬೆಳೆಯಾಗಿಯೂ ಅಗಲವಾದ ಸಾಲಿನ ಬೆಳೆಗಳಲ್ಲಿ ಬೆಳೆಯಬಹುದು.

        ಉದಾಃ ಕಬ್ಬು + ದಯಂಚಾ   , ದ್ರಾಕ್ಷಿ + ಸಣಬು

6) ಹಸಿರೆಲೆ ಗೊಬ್ಬರ ಬೆಳೆಯುವ ಸಸ್ಯಗಳನ್ನು ಬಹುವಾರ್ಷಿಕವಾಗಿ ಬದುಗಳ ಮೇಲೆ ಬೆಳೆದು ಎಲೆಯನ್ನು ಕಟಾವು ಮಾಡಿ ಹಸಿರೆಲೆ ಗೊಬ್ಬರ ಮಾಡಬಹುದು.

7) ಸಸ್ಯದ ಬಲಿತ ಕಾಂಡವನ್ನು ಹಸಿರೆಲೆ ಗೊಬ್ಬರವಾಗಿ  ಉಪಯೋಗಿಸಬಾರದು.

8) ಹಸಿರೆಲೆ ಗೊಬ್ಬರ ಬೆಳೆಯನ್ನು ಮಣ್ಣಿನಲ್ಲಿ ಚೆನ್ನಾಗಿ ಸೇರಿಸಲು ಟ್ರ್ಯಾಕ್ಟರ್ ಚಾಲಿತ ರೊಟೋವೇಟರ್ ಬಳಸಬಹುದು.

9) ಹಸಿರೆಲೆ ಮಣ್ಣಿನಲ್ಲಿ ಬೆರೆಸಿದ 25-30 ದಿನಗಳವರೆಗೆ ಕಳೆಯಲು ಅವಕಾಶ ಕೊಟ್ಟು ಮುಂದಿನ ಬೆಳೆ ಸಾಗುವಳಿ ಮಾಡಬಹುದು.

ಲೇಖಕರು: ಡಾ. ಸುನಿಲ್ ಕುಮಾರ್. ಕೆ ಮತ್ತು ಡಾ. ಮಧುರಿಮಾ ವಿನೋದ್

ಸಹಾಯಕಾ ಸಂಶೋಧಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಉಡುಪಿ- 576213

Published On: 10 November 2020, 08:35 PM English Summary: green leaves fertilizer for land fertility

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.