ಪುಷ್ಪ ಕೃಷಿ ಎಂಬುದು ಹಿಂದೆ ಕೇವಲ ಮನೆಯಂಗಳದ ಅಂದಕ್ಕಾಗಿ, ಮನೆಯೊಳಗಿನ ಅಲಂಕಾರಕ್ಕಾಗಿ ಇಲ್ಲವೇ ದೇವರ ಪೂಜೆಗಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು. ಆದರೆ ಇದೀಗ ಇದೊಂದು ಪ್ರಮುಖ ಕೃಷಿ ಉದ್ದಿಮೆಯಾಗಿ ಹೊರ ಹೊಮ್ಮುತ್ತಿದೆ. ಪುಷ್ಪ ಕೃಷಿಗೆ ವಾಣಿಜ್ಯ ರೀತಿಯಲ್ಲಿ ಕೈಗೊಳ್ಳಲು ವಿವಿಧ ಇಲಾಖೆಗಳು, ಬಹು ರಾಷ್ಟ್ರೀಯ ಸಂಸ್ಥೆಗಳು ಮತ್ತು ಸರಕಾರಗಳು ಪ್ರೋತ್ಸಾಹಿಸುತ್ತಿದ್ದರಿಂದ ಈ ಕ್ಷೇತ್ರಕ್ಕಿಂದು ವಿಫುಲ ಅವಕಾಶಗಳು ಒದಗಿ ಬರಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಪುಷ್ಪಗಳಿಗಿರುವ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಇದರಿಂದಾಗಿ ಇವುಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಮಹತ್ವ ನೀಡಲಾಗುತ್ತಿದೆ.
ಹೂವು ಎಂದಾಕ್ಷಣ ಮನೋಲ್ಲಾಸ, ವಾಸನೆ, ಪ್ರೀತಿ, ಪ್ರೇಮ, ಗೌರವ, ಭಕ್ತಿ ಎಲ್ಲವೂ ಸಮ್ಮಿತಗೊಳ್ಳುತ್ತದೆ. ಸುವಾಸನೆಯ ಹೂವು, ಮನಸ್ಸಿನಲ್ಲಿ ಉಲ್ಲಾಸ, ಸುಮಧುರ ಭಾವನೆ ಉದ್ದೀಪಿಸಿದರೆ, ಯುವ ಪ್ರೇಮಿಗಳಿಗೆ ಪ್ರೀತಿ, ಪ್ರೇಮದ ಸಂಕೇತ. ಪೂಜಾ ನಿಷ್ಠರಿಗೆ ಶೃದ್ಧೆ, ಭಕ್ತಿಯ ದ್ಯೋತಕ, ಸಭೆ ಸಮಾರಂಭದ ಗೌರವಾನ್ವಿತರಿಗೆ ಗೌರವದ ಪ್ರತೀಕ. ಸುಮಂಗಲೆಯರಿಗೆ ಶುಭ ಸೂಚಕ, ಯುವತಿಯರಿಗಂತೂ ಬಲು ಇಷ್ಟ ಈ ಹೂವುಗಳು. ಕೆಲವರಿಗೆ ಸರಳತೆಯಾದರೆ ಇನ್ನು ಕೆಲವರಿಗೆ ವೈಭವದ ಪ್ರದರ್ಶನವೂ ಆಗಿದೆ. ಹೂವಿನ ಬೆಳೆಗಳಾದ ಗುಲಾಬಿ, ಮಲ್ಲಿಗೆ, ಜರ್ಬೆರಾ, ಕಾರ್ನಿಷನ್, ಅಂತೂರಿಯಂ, ಆರ್ಕಿಡ್, ಲಿಲ್ಲಿಸ್, ಸೇವಂತಿಗೆ, ಟ್ಯೂಬರೋಸ್, ಕ್ರಾಸ್ಸಾಂಡಾ, ಆಸ್ಟರ್, ಮ್ಯಾರಿಗೋಲ್ಡ್ ಇತ್ಯಾದಿಗಳನ್ನು ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕ ರಾಜ್ಯವು ಪುಷ್ಪೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು ದೇಶದ ಒಟ್ಟು ಶೇ.75% ರಷ್ಟು ಹೂಗಳನ್ನು ಉತ್ಪಾದಿಸುತ್ತದೆ.
ಹೂವಿನ ಕೃಷಿಯಲ್ಲಿ ಅಂತರಾಷ್ಟೀಯ ಹೂವು ಹರಾಜು ಬೆಂಗಳೂರು ನಿಯಮಿತದ ಪಾತ್ರ:
ಅಂತರಾಷ್ಟೀಯ ಹೂವು ಹರಾಜು ಬೆಂಗಳೂರು ನಿಯಮಿತವು ದೇಶದಲ್ಲಿ ಹಾಗೂ ವಿದೇಶದಲ್ಲಿನ ಹೂ ಮಾರುಕಟ್ಟೆಯ ವಿಪುಲ ಅವಕಾಶಗಳನ್ನು ಬಳಸಿಕೊಳ್ಳಲು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 2002ರಲ್ಲಿ ಸ್ಥಾಪನೆಗೊಂಡಿತು. ಪ್ರತಿದಿನ ಉತ್ಕೃಷ್ಟ ಗುಣಮಟ್ಟದ ವಿವಿಧ ಹೂವಿನ ಬೆಳೆ ಹಾಗೂ ಕಾಂಡ ಸಹಿತ ಕತ್ತರಿಸಿದ ಹೂಗಳನ್ನು ಹರಾಜು ಮಾಡುವದು. ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿರುವತ್ತದೆ. ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸದರಿ ಸಂಸ್ಥೆಯು ಇಡೀ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಸ್ಥಾಪಿತವಾದ ಹೂ ಹರಾಜು ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯಲ್ಲಿ ಹರಾಜಾಗುವ ದೈನಂದಿನ ಕಾಂಡ ಸಹಿತ ಕತ್ತರಿಸಿದ ಹೂವಿನ ಪ್ರಮಾಣವು 20000 ದಿಂದ ಈಗ ಸರಾಸರಿ ಒಂದು ಲಕ್ಷಕ್ಕೆ ಏರಿದೆ. ಸಂಸ್ಥೆಯು 2009 ರಿಂದ ಡಚ್ ಮಾದರಿಯ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಿಂದ ಮಧ್ಯವರ್ತಿಗಳಿಂದಾಗುವ ಶೋಷಣೆಯನ್ನು ತಡೆಯಲು ಹರಾಜು ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಲು ಹಾಗೂ ಶೀಘ್ರ ಮೌಲ್ಯ ನಿರ್ಧರಣೆ ಮಾಡಿ ಎಲ್ಲಾ ಬಿಡ್ಡುದಾರರಿಗೆ ಸಮಾನ ಅವಕಾಶ ಸಿಗುವಂತೆ ಸಾಧ್ಯವಾಗಿದೆ.
ಹೂತೋಟಗಳು ಪ್ರಮುಖವಾಗಿ ಮುಂಬೈ, ಬೆಂಗಳೂರು ಹಾಗೂ ದೆಹಲಿಯಲ್ಲಿದ್ದು ಡಚ್ ಹಾಗೂ ಇಸ್ರೇಲಿಯನ್ನರ ತಾಂತ್ರಿಕತೆಯನ್ನು ಅಳವಡಿಸಿವೆ. “ಡಚ್ ಹರಾಜು” ಪದ್ಧತಿಯಲ್ಲಿ ಡಿಜಿಟಲ್ ಆಕ್ಷನ್ ಗಡಿಯಾರವು ಇಳಿಕೆ ಕ್ರಮದಲ್ಲಿ ಚಲಿಸುವದು ಮತ್ತು ಕಾಂಡದ ಬೆಲೆಗೆ ತಕ್ಕಂತೆ ಗರಿಷ್ಠದಿಂದ ಕನಿಷ್ಠ ಬೆಲೆಗೆ ಕಡಿಮೆಯಾಗುತ್ತದೆ. ಹೂವಿನ ಬೇಡಿಕೆಗನುಸಾರವಾಗಿ ಅಂತರರಾಷ್ಟೀಯ ಹೂವಿನ ಹರಾಜು ಮಂಡಳಿಯು ಗರಿಷ್ಠ ಬೆಲೆಯನ್ನು ಹಾಗೂ ರೈತರು ಅಥವಾ ಮಾರಾಟ ಮಾಡುವವರು ಕನಿಷ್ಠ ಬೆಲೆಯನ್ನು ಘೋಷಿಸುತ್ತಾರೆ. ಕೇವಲ ನೊಂದಾಯಿತ ಮಾರಾಟಗಾರರು ಹಾಗೂ ಕೊಳ್ಳುವವರು ಮಾತ್ರ ಹರಾಜಿನಲ್ಲಿ ಭಾಗವಹಿಸಬಹುದು. ಹರಾಜು ಪ್ರಕ್ರಿಕೆಯು ಬೆಳಗಿನ ಜಾವ 8.30 ಗೆ ಆರಂಭವಾಗಿ ಸ್ಟಾಕ್ ಮುಗಿಯುವವರೆಗೂ ನಡೆಯತ್ತದೆ. ಈ ಸಂಸ್ಥೆಯ ವಿಶೇಷತೆಯಂದರೆ ಹರಾಜು ಪ್ರಕ್ರಿಯು ವರ್ಷಪೂರ್ತಿ(365ದಿನಗಳು) ನಡೆಯತ್ತದೆ. ಹೀಗಾಗಿ ವ್ಯವಹಾರದಲ್ಲಿ ಭಾಗಿಯಾಗುವ ಖರೀದಿದಾರರು ಹಾಗೂ ಕೊಳ್ಳುವವರಿಗೆ ಇದರಿಂದ ತುಂಬಾ ಅನೂಕೂಲ.
ಇಲ್ಲಿ ಒಂದು ಕಾಲದಲ್ಲಿ ಹೂವಿನ ಕೃಷಿ ಕೇವಲ ಹವ್ಯಾಸವಾಗಿತ್ತು, ಆದರೆ ಅದೀಗ ಬೃಹತ್ ಉದ್ಯಮವಾಗಿ ಬೆಳೆದಿದೆ. ಮನೆಯಂಗಳದ ತೋಟದ ಬೇಲಿ ಬದಿಯಲ್ಲಿ ಅರಳುತ್ತಿದ್ದ ಹೂವುಗಳಿಗೆ ಈಗ ಎಲ್ಲಿಲ್ಲದ ಎಂದಿಲ್ಲದ ಬೇಡಿಕೆ ಆದ್ಯತೆ ದೊರೆಯುತ್ತಿದೆ. ಹೊಸ ರೂಪ ಹೊಸ ಹೆಸರಿನೊಂದಿಗೆ ಉದ್ಯಮವಾಗಿ ಬಂದಿರುವ ಇದಕ್ಕೆ ಈಗ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಹೂವುಗಳ ರಫ್ತಿನಿಂದ ದೇಶಕ್ಕೆ ಕೋಟ್ಯಾಂತರ ರೂಪಾಯಿ ವಿದೇಶಿ ವಿನಿಮಯ ಸಾಧ್ಯಗೊಂಡಿದೆ. ಆದ್ದರಿಂದ ರೈತರು ತೋಟಗಾರಿಕೆ ಇಲಾಖೆಯ ಯೋಜನೆಗಳು ಹಾಗೂ ಅಂತರಾಷ್ಟೀಯ ಹೂವು ಹರಾಜು ಬೆಂಗಳೂರು ನಿಯಮಿತದ ಪ್ರಯೋಜನೆಗಳನ್ನು ಪಡೆದುಕೊಳ್ಳಬೇಕು. ಪುಷ್ಪೋದ್ಯಮ ರೈತಾಪಿ ಜೀವನದ ಮೇಲೆ ಹೂನಗೆ ಬೀರಲಿ ಎಂದು ಆಶಿಸೋಣ.
ಲೇಖಕರು:
ಶಗುಪ್ತಾ ಅ. ಶೇಖ ಎಂ.ಬಿ.ಎ(ಕೃಷಿ ವ್ಯವಹಾರ)
ಪ್ಲಾಟ ನಂ. 588 ಜೆ.ಡಿ.ಎ ಲೇಔಟ್,
ಪೆಟ್ರೋಲ್ ಪಂಪ್ ಎದುರಿಗೆ, ಹೀರಾಪುರ ಕ್ರಾಸ್ ಗುಲಬರ್ಗಾ
ಪಿನ್ 585103
Share your comments