1. ಅಗ್ರಿಪಿಡಿಯಾ

ಮೀನು ಸಾಕಾಣಿಕೆ ಮಾಡಿ ಲಾಭ ಗಳಿಸಬೇಕೇ? ಇಲ್ಲಿದೆ ಮಾಹಿತಿ

ಮೀನು ಒಂದು ಪೌಷ್ಠಿಕ ಮತ್ತು ಪೋಷಕ ಆಹಾರ, ಮೀನಿನ ಮಾಂಸ ನಮ್ಮ ದೇಹದ ದೃಢತೆಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಸಸಾರಜನಕ, ಜೀವಸತ್ವ ಮತ್ತು ಲವಣಗಳನ್ನು ಒದಗಿಸುತ್ತದೆ. ಇತರೆ ಮಾಂಸಗಳಿಗಿಂತ ಶ್ರೇಷ್ಠ ಮತ್ತು ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಸಮುದಾಯ ಕೆರೆಗಳು, ಕೃಷಿ ಹೊಂಡ, ತಡೆ ಅಣೆಕಟ್ಟು, ಗೋಕಟ್ಟೆ, ನಾಲಾಬದು, ಬೋರ್‍ವೆಲ್ ಆಧಾರಿತ ನೀರು ಸಂಗ್ರಹಣಾ ಕೊಳಗಳು, ನೀರಾವರಿ ಬಾವಿಗಳು ಹಾಗೂ ಪಾಂಡುಗಳು ಮುಂತಾದ ಜಲ ಸಂಪನ್ಮೂಲಗಳಿದ್ದಲ್ಲಿ ಮೀನು ಸಾಕಣೆಗೆ ವಿಪುಲ ಅವಕಾಶವಿದೆ. ಈ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮೀನು ಸಾಕಣೆ ಮಾಡಿದರೆ ಗ್ರಾಮೀಣ ಮಟ್ಟದಲ್ಲಿ ಕಡಿಮೆ ಖರ್ಚಿನಲ್ಲಿ ಪೌಷ್ಠಿಕ ಆಹಾರ ದೊರೆತಂತಾಗುತ್ತದೆಯಲ್ಲದೆ ರೈತರ ಆರ್ಥಿಕ ಅಭಿವೃದ್ಧಿಗೂ ಸಹ ಸಹಕಾರಿಯಾಗುತ್ತದೆ.

ಮರಳು ಮಿಶ್ರಿತ ಮಣ್ಣಿನ ಕುಂಟೆಗಳಲ್ಲಿ ನೀರಿನ ಬಸಿಯುವಿಕೆ ಹೆಚ್ಚಿರುತ್ತದೆ. ನೀರು ಬಸಿಯುವಿಕೆಯನ್ನು ತಡೆಗಟ್ಟಲು ಹಸಿ ಸಗಣಿ ಮತ್ತು ಗೋಡುಮಣ್ಣಿನ ಮಿಶ್ರಣವನ್ನು ಕುಂಟೆಯ ತಳಕ್ಕೆ ಹಾಕಿ ಮಳೆಗಾಲದ ಪ್ರಾರಂಭದಲ್ಲಿ ಒಂದು ಅಡಿ ನೀರು ಬಂದ ನಂತರ ಕೆಸರು ಮಾಡಿ ಜಾನುವಾರುಗಳಿಂದ ತುಳಿಸಬೇಕು. ಮಳೆಗಾಲ ಕೆರೆ ಕುಂಟೆಗಳಿಗೆ 3 ರಿಂದ 4 ಅಡಿ ನೀರು ಬಂದ ನಂತರ ಮೀನು ಮರಿ ಬಿತ್ತನೆ ಮಾಡಬಹುದು.

ಮೀನುಮರಿ ಬಿತ್ತನೆಗೆ ಪೂರ್ವ ಸಿದ್ಧತೆಗಳು :

  1. ಕುಂಟೆಗಳಲ್ಲಿ ಗಿಡಗೆಂಟೆಗಳು ಬೆಳೆದಿದ್ದರೆ ಅವುಗಳನ್ನು ಕಿತ್ತು ಸ್ವಚ್ಚ ಮಾಡಬೇಕು.
  2. ಸಣ್ಣ ಜಾತಿಯ ಅನುಪಯುಕ್ತ ಮೀನುಗಳು ಹಾಗೂ ಮೀನು ಭಕ್ಷಕ ಮೀನುಗಳಾದ ಕುಚ್ಚು, ಕೊರವ, ಬಾಳೆ, ಗೊದ್ದಲೆ, ಚೇಳುಮೀನು, ಹಾವು ಮೀನು, ಪಕ್ಕೆ, ಗಿರ್ಲು ಮತ್ತು ಪ್ರಾಣಿಗಳಾದ ಕಪ್ಪೆ, ನೀರು ಹಾವುಗಳ ನಿರ್ಮೂಲನೆಯು ಮೀನು ಪಾಲನೆಯಲ್ಲಿ ಬಹಳ ಮುಖ್ಯವಾಗಿದೆ. ಇವುಗಳನ್ನು ಎಳೆ ಬಲೆಯ ಸಹಾಯದಿಂದ ಹಿಡಿದು ನಿರ್ಮೂಲನೆ ಮಾಡಬೇಕು. ಈ ಅನುಪಯುಕ್ತ ಮೀನುಗಳು ಕೊಳದ ಸ್ಥಳ, ಆಹಾರ ಮತ್ತು ಕರಗಿದ ಆಮ್ಲಜನಕವನ್ನು ಉಪಯೋಗಿಸಿಕೊಳ್ಳುವುದರಿಂದ ಬಿತ್ತನೆ ಮಾಡಿದ ಮೀನುಮರಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಮೀನು ಭಕ್ಷಕ ಪ್ರಾಣಿ ಮತ್ತು ಮೀನುಗಳು ಬಿತ್ತನೆ ಮಾಡಿದ ಉತ್ತಮ ಜಾತಿಯ ಮೀನುಮರಿಗಳನ್ನು ತಿನ್ನುವುದರಿಂದ ಇಂತಹ ಪ್ರಾಣಿಗಳ ನಿರ್ಮೂಲನೆ ಅತ್ಯಗತ್ಯ. ಎಕರೆಗೆ 50 ಕಿ.ಗ್ರಾಂ. ಬ್ಲೀಚಿಂಗ್ ಪುಡಿ ಅಥವಾ ಎಕರೆಗೆ 800 ಕಿ.ಗ್ರಾಂ. ನಷ್ಟು ಹಿಪ್ಪೆ ಹಿಂಡಿಯನ್ನು ಹಾಕುವುದರಿಂದ ಎಲ್ಲಾ ಅನಗತ್ಯ ಹಾಗೂ ಮಾಂಸಾಹಾರಿ ಮೀನುಗಳನ್ನು ನಿರ್ಮೂಲನೆ ಮಾಡಬಹುದು.
  3. ಅನುಪಯುಕ್ತ ಮೀನುಗಳು ಒಳಗೆ ಬರದಂತೆ ಹಾಗೂ ಬಿತ್ತನೆ ಮಾಡಿದ ಮೀನುಮರಿಗಳು ಹೊರಹೋಗದಂತೆ ಒಳ ಮತ್ತು ಹೊರ ತೂಬುಗಳಿಗೆ ಸಣ್ಣ ಕಣ್ಣಿನ ಜಾಲರಿಯನ್ನು ಅಳವಡಿಸಬೇಕು.
  4. ಮಳೆ ನೀರು ಕೆರೆಕುಂಟೆಗಳಿಗೆ ಹಾಯ್ದು ಬರುವಾಗ ಬಗ್ಗಡದಿಂದ ಕೂಡಿರುತ್ತದೆ. ಈ ಬಗ್ಗಡತೆ ನೀರಿನ ತಳಕ್ಕೆ ಸೂರ್ಯನ ಕಿರಣಗಳು ಪಸರಿಸದಂತೆ ತಡೆದು ನೀರಿನ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಮೀನಿನ ನೈಸರ್ಗಿಕ ಆಹಾರದ ಉತ್ಪಾದನೆಗೆ ಮತ್ತು ಮೀನುಗಳ ಒಳ್ಳೆಯ ಬೆಳವಣಿಗೆಗೆ ನೀರಿನ ಪಾರದರ್ಶಕತೆ ಸುಮಾರು 20 ರಿಂದ 35 ಸೆಂ.ಮೀ. ನಷ್ಟಿರಬೇಕು. ಇಲ್ಲದಿದ್ದರೆ ಮೀನುಗಳ ಬೆಳವಣಿಗೆ ಕಡಿಮೆಯಾಗುವುದಲ್ಲದೆ ಕೆಲವು ಸಲ ಮಣ್ಣಿನ ಕಣಗಳು ಮೀನಿನ ಕಿವಿರುಗಳ ಮೇಲೆ ಕುಳಿತು ಉಸಿರಾಡುವುದು ಕಷ್ಟವಾಗಿ ಸಾಯಲೂಬಹುದು. ಈ ಬಗ್ಗಡತೆಯನ್ನು ಸುಣ್ಣ ಮತ್ತು ಹಸಿ ಸಗಣಿ ಹಾಕುವುದರಿಂದ ಕಡಿಮೆ ಮಾಡಬಹುದು. ಸುಣ್ಣವನ್ನು ಎಕರೆಗೆ 150-200 ಕಿ.ಗ್ರಾಂ.ನಂತೆ ನೀರ ಮೇಲೆ ಎರಚಬೇಕು. ಸಗಣಿಯಾದರೆ ಎಕರೆಗೆ 1ಳಿ ಟನ್ ನಂತೆ ನೀರಿನಲ್ಲಿ ಕಲಸಿಕೊಂಡು ಕೆರೆಯ ನೀರಿನ ಮೇಲೆ ಎರಚಬೇಕು.
  5. ನೀರಿನ ಫಲವತ್ತತೆಯನ್ನು ಹೆಚ್ಚಿಸಲು ಮೀನುಮರಿ ಬಿತ್ತನೆಗೆ ಒಂದು ವಾರ ಮುಂಚಿತವಾಗಿ ಹಸಿ ಸಗಣಿಯನ್ನು ಒಂದು ಎಕರೆಗೆ 1/12 ಟನ್ ನಂತೆ ನೀರಿನಲ್ಲಿ ಕಲಸಿಕೊಂಡು ಹೊಂಡದ ನೀರಿನ ಮೇಲೆ ಎರಚಬೇಕು. ಮೇಕೆ / ಕುರಿಹಿಕ್ಕೆ ಗೊಬ್ಬರ ಅಥವಾ ಕೋಳಿ ಗೊಬ್ಬರವಾದರೆ ಎಕರೆಗೆ 500 ರಿಂದ 800 ಕಿ.ಗ್ರಾಂ. ನಂತೆ ಹಾಕಬೇಕು. ಇದರಿಂದ ಮೀನು ತಿನ್ನು ಪ್ರಾಣಿ ಜನ್ಯ (Zooplankton) ಸಸ್ಯ ಜನ್ಯ (Phytoplankton) ನೈಸರ್ಗಿಕ ಆಹಾರ ಉತ್ಪಾದನೆಯಾಗುತ್ತದೆ.

ಮೀನುಮರಿಗಳ ಬಿತ್ತನೆ :

  • ಗೊಬ್ಬರವನ್ನು ಹಾಕಿದ ಒಂದು ವಾರದ ನಂತರ ಮೀನುಮರಿಗಳನ್ನು ಬಿತ್ತನೆ ಮಾಡಬೇಕು.
  • ಬಿತ್ತನೆಗೆ ಶೀಘ್ರವಾಗಿ ಬೆಳೆಯುವ ಗೆಂಡೆ ಜಾತಿಯ ಮೀನುಗಳಾದ ಕಾಟ್ಲ, ರೋಹು, ಮೃಗಾಲ್, ಸಾಮಾನ್ಯಗೆಂಡೆ, ಬೆಳ್ಳಿಗೆಂಡೆ ಸೂಕ್ತವಾದ ತಳಿಗಳು, ಹುಲ್ಲಿನ ಸೌಕರ್ಯವಿರುವವರು ಹುಲ್ಲುಗೆಂಡೆ ಮೀನು ತಳಿಯನ್ನು ಸಹ ಬಿತ್ತನೆ ಮಾಡಬಹುದು.
  • ಮಿಶ್ರ ಮೀನು ಪಾಲನೆ (ಒಂದಕ್ಕಿಂತ ಹೆಚ್ಚು ಜಾತಿಯ ಮೀನುಗಳನ್ನು ಒಂದೇ ಕೊಳದಲ್ಲಿ ಸಾಕಣೆ ಮಾಡುವುದು) ಯಿಂದ ಹೆಚ್ಚಿನ ಇಳುವರಿ ಪಡೆಯಬಹುದು.
  • ಗೆಂಡೆ ಜಾತಿಯ ಮೀನುಗಳು ಕೊಳದ ನೀರಿನ ವಿವಿಧ ಸ್ಥಳಗಳಲ್ಲಿ ವಾಸಿಸುವುದರಿಂದ ಒಂದಕ್ಕೊಂದು ಆಹಾರಕ್ಕಾಗಿ ಮತ್ತು ಸ್ಥಳಕ್ಕಾಗಿ ಸ್ಪರ್ಧಿಸುವುದಿಲ್ಲ. ಒಂದು ನಿರ್ಧಿಷ್ಟ ಸ್ಥಳದಲ್ಲಿ ಅಧಿಕ ಇಳುವರಿ ಪಡೆಯಬೇಕಾದರೆ ಮಿಶ್ರ ಮೀನು ಪಾಲನೆಯನ್ನು ಮಾಡಬೇಕು.
  • ಕಾಟ್ಲ ನೀರಿನ ಮೇಲ್ಮಟ್ಟದಲ್ಲಿರುವ ಪ್ರಾಣಿ ಜನ್ಯ ನೈಸರ್ಗಿಕ ಆಹಾರವನ್ನು ತಿನ್ನುತ್ತದೆ. ರೋಹು ನೀರಿನ ಮಧ್ಯ ಭಾಗದಲ್ಲಿರುವ ಸಸ್ಯಜನ್ಯ ನೈಸರ್ಗಿಕ ಆಹಾರವನ್ನು ತಿನ್ನುತ್ತದೆ. ಮೃಗಾಲ್ ಮೀನು ನೀರಿನ ತಳಭಾಗದಲ್ಲಿರುವ ಪ್ರಾಣಿಜನ್ಯ ನೈಸರ್ಗಿಕ ಆಹಾರ ಹಾಗೂ ಇತರೆ ಕೊಳೆತ ಪದಾರ್ಥವನ್ನು ತಿನ್ನುತ್ತದೆ. ಸಾಮಾನ್ಯಗೆಂಡೆ ಮೀನು ನೀರಿನ ತಳಭಾಗದಲ್ಲಿರುವ ಸಾವಯವ ಪದಾರ್ಥ, ಹುಳುಉಪ್ಪಟ್ಟಿಗಳನ್ನು ತಿನ್ನುತ್ತದೆ.
  • ಬೆರಳುದ್ದ ಗಾತ್ರದ (4-6 ಸೆಂ.ಮೀ.) ಮೀನುಮರಿಗಳನ್ನು ಮೀನುಮರಿ ಉತ್ಪಾದನಾ ಕೇಂದ್ರಗಳಿಂದ ತಂದು ಎಕರೆಗೆ 2000 ದಿಂದ 4000 ಮೀನುಮರಿಗಳಂತೆ ಬಿತ್ತನೆ ಮಾಡಬೇಕು.
  • 3 ತಳಿ ಮೀನುಸಾಕಣೆಯಲ್ಲಿ ಕಾಟ್ಲ, ರೋಹು ಮತ್ತು ಸಾಮಾನ್ಯಗೆಂಡೆ ಮೀನುಮರಿಗಳನ್ನು 2:3:5 ರ ಅನುಪಾತದಲ್ಲಿ ಬಿತ್ತನೆ ಮಾಡಬೇಕು.
  • 4 ತಳಿ ಮೀನು ಸಾಕಣೆಯಲ್ಲಿ ಕಾಟ್ಲ, ರೋಹು, ಹುಲ್ಲುಗೆಂಡೆ ಮತ್ತು ಸಾಮಾನ್ಯಗೆಂಡೆ ಮೀನುಗಳನ್ನು 3:2:1:4 ರ ಅನುಪಾತದಲ್ಲಿ ಬಿತ್ತನೆ ಮಾಡಬೇಕು.
  • 5 ತಳಿ ಮೀನು ಸಾಕಣೆಯಲ್ಲಿ ಕಾಟ್ಲ, ರೋಹು, ಸಾಮಾನ್ಯಗೆಂಡೆ, ಹುಲ್ಲುಗೆಂಡೆ ಮತ್ತು ಬೆಳ್ಳಿಗೆಂಡೆ ಮೀನುಗಳನ್ನು 2:2:4:1:1 ರ ಅನುಪಾತದಲ್ಲಿ ಬಿತ್ತನೆ ಮಾಡಬೇಕು.

ಪೂರಕ ಆಹಾರ ಮತ್ತು ಗೊಬ್ಬರದ ನಿರ್ವಹಣೆ :

  • ಮೀನುಗಳ ಉತ್ತಮ ಬೆಳವಣಿಗೆಗೆ ಕಡಲೇಕಾಯಿ ಹಿಂಡಿ ಮತ್ತು ಅಕ್ಕಿತೌಡನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಪೂರಕ ಆಹಾರವಾಗಿ ಹಾಕಬಹುದು ಅಲ್ಲದೆ ಮನೆಯಲ್ಲಿ ಉಳಿದ ರಾಗಿ ಮುದ್ದೆ, ಅನ್ನ, ತರಕಾರಿಗಳ ತ್ಯಾಜ್ಯ ಪದಾರ್ಥ, ಪಶು ಆಹಾರ, ಗಿರಣಿಯ ತ್ಯಾಜ್ಯ ಪದಾರ್ಥ, ಮೆಕ್ಕೆಜೋಳದ ಪುಡಿಯನ್ನು ಆಹಾರವಾಗಿ ಹಾಕಬಹುದು.
  • ಹುಲ್ಲುಗೆಂಡೆ ಮೀನಿಗೆ ಸೀಮೆಹುಲ್ಲು, ಕುದುರೆ ಮಸಾಲೆ ಸೊಪ್ಪು, ಅಜೋಲ್ಲ ಮತ್ತು ಲೆಮ್ನವನ್ನು ಆಹಾರವಾಗಿ ಹಾಕಬೇಕು.
  • ಆಹಾರವನ್ನು ಮೊದಲ 3 ತಿಂಗಳು ಪ್ರತಿ 3000 ಮೀನುಮರಿಗಳಿಗೆ ಪ್ರತಿ ದಿನ 250 ರಿಂದ 500 ಗ್ರಾಂ.ನಂತೆ, 4 ರಿಂದ 6 ತಿಂಗಳು ಪ್ರತಿದಿನ 1 ರಿಂದ 2 ಕಿ.ಗ್ರಾಂ. ನಂತೆ, 6 ತಿಂಗಳ ನಂತರ ಪ್ರತಿ ದಿನ 3 ರಿಂದ 5 ಕಿ.ಗ್ರಾಂ. ನಂತೆ ಹಾಕಬೇಕು.
  • ಹಸಿ ಸಗಣಿಯನ್ನು ಪ್ರತಿ ತಿಂಗಳು ಎಕರೆಗೆ 400 ಕಿ.ಗ್ರಾಂ.ನಂತೆ ಹಾಕುತ್ತಿರಬೇಕು.
  • ನೀರು ಅತಿ ಹೆಚ್ಚು ಪಾಚಿಯುಕ್ತವಾಗಿ ಕಂಡು ಬಂದರೆ ಗೊಬ್ಬರ ಹಾಕುವುದನ್ನು ಕೆಲಕಾಲ ನಿಲ್ಲಿಸಬೇಕು.
  • ಗ್ರಾಮೀಣ ಪ್ರದೇಶದಲ್ಲಿ ಮೀನಿನ ಕಳ್ಳತನವನ್ನು ತಡೆಗಟ್ಟಲು ಒಣಗಿದ ಬೇಲಿ ಗಿಡದ ರೆಂಬೆಗಳು, ಜಾಲಿಗಿಡದ ರೆಂಬೆಗಳು ಹಾಗೂ ಅಗಸೆ ಕಡ್ಡಿಗಳನ್ನು ಕುಂಟೆಗಳಿಗೆ ಹಾಕಬಹುದು.

ಮೀನುಗಳ ಕಟಾವು :

ಈ ರೀತಿ ಸಾಕಣೆ ಮಾಡಿದಾಗ 10-12 ತಿಂಗಳ ಅವಧಿಯಲ್ಲಿ ಮೀನುಗಳು ಸುಮಾರು 0.75 ರಿಂದ 1 ಕಿ.ಗ್ರಾಂ. ನಷ್ಟು ಗಾತ್ರಕ್ಕೆ ಬೆಳೆಯುತ್ತದೆ. ಆಗ ಎಳೆಬಲೆ ಅಥವಾ ಕಿವಿರುಬಲೆಗಳ ಸಹಾಯದಿಂದ ಹಿಡಿದು ಮಾರಾಟ ಮಾಡಬೇಕು.

ಆರ್ಥಿಕತೆ (ಪ್ರತಿ 2 ಗುಂಟೆಗೆ)

ಕ್ರಮ.ಸಂ

ವಿವರ

ಖರ್ಚು (ರೂಪಾಯಿಗಳಲ್ಲಿ)

1

ಕೊಳವನ್ನು ಸಜ್ಜುಗೊಳಿಸುವುದಕ್ಕೆ

500.00

2

ಸುಣ್ಣಕ್ಕೆ 

125.00

3

ಮೀನುಮರಿ ಮತ್ತು ಸಾಗಣೆ ವೆಚ್ಚ (1000 ಮೀನು ಮರಿಗಳು)

1000.00

4

ಆಹಾರದ ಖರ್ಚು 

2000.00

5

ಗೊಬ್ಬರದ ಖರ್ಚು

200.00

6

ಮೀನು ಹಿಡಿಯುವುದಕ್ಕೆ ಮತ್ತು ಸಾಗಣೆ ವೆಚ್ಚ

500.00

 

ಒಟ್ಟು ಖರ್ಚು      

 

4325.00

 

ಆದಾಯ (ರೂ.ಗಳಲ್ಲಿ)

ಕ್ರಮ.ಸಂ

ವಿವರ

ಆದಾಯ ರೂಪಾಯಿಗಳಲ್ಲಿ

1

ಶೇಕಡಾ 80 ರಷ್ಟು ಬದುಕುಳಿಯುವಿಕೆಯಂತೆ 800 ಕಿ.ಗ್ರಾಂ. ಮೀನುಗಳನ್ನು ಪ್ರತಿ ಕಿ.ಗ್ರಾಂ. ರೂ.80 ರಂತೆ ಮಾರಿದಾಗ ಬರುವ ಹಣ

64000.00

2

ಒಟ್ಟು ಖರ್ಚು

4325.00

ನಿವ್ವಳ ಆದಾಯ

59675.00

 

 

 

 

ಲೇಖಕರು:

ಸವಿತಾ ಎಸ್. ಎಂ*,  ಬಿ. ವಿ. ಕೃಷ್ಣಮೂರ್ತಿ**, ಲತಾ ಆರ್. ಕುಲಕರ್ಣಿ, ದಿನೇಶ್.ಎಂ.ಎಸ್. ಮತ್ತು ರಂಗನಾಥ ಎಸ್. ಸಿ.

* ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು

ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ರಾಮನಗರ

** ಮುಖ್ಯ ವಿಜ್ಞಾನಾಧಿಕಾರಿ

ಒಳನಾಡು ಮೀನುಗಾರಿಕೆ ಘಟಕ, ಕೃ.ವಿ.ವಿ., ಬೆಂಗಳೂರು

Published On: 11 September 2020, 09:45 AM English Summary: Fish Farming - Composite fish culture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.