ಸೃಷ್ಟಿಯ ವೈಚಿತ್ರ್ಯಗಳನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ನಾವು ಜೀವಿಸುವ ಪರಿಸರದಲ್ಲೇ ನೋಡುವುದಾದರೆ ನಮ್ಮ ಸುತ್ತ ನೂರಾರು, ಸಾವಿರಾರು ಸಣ್ಣ ಸಣ್ಣ ಕ್ರಿಮಿ ಕೀಟಗಳು ಹರಿದಾಡುತ್ತಿರುತ್ತವೆ. ಅವುಗಳತ್ತ ಸುಮ್ಮೆ ಹಾಗೆ ನೋಡಿ ಹೀಗೆ ತಿರುಗಿದರೆ ಏನೂ ಅರ್ಥವಾಗುವುದಿಲ್ಲ. ಆದರೆ, ಅವುಗಳ ಚಲನೆ, ಕ್ರಿಯೆಗಳನ್ನು ಕೆಲ ಕಾಲ ಸೂಕ್ಷ್ಮವಾಗಿ ಗಮನಿಸಿದರೆ ಸೃಷ್ಟಿಯ ವಿಸ್ಮಯದ ಅರಿವಾಗುತ್ತದೆ. ಇಷ್ಟು ಸಣ್ಣ ಹುಳು ಇಷ್ಟೆಲ್ಲಾ ಕೆಲಸ ಮಾಡಬಲ್ಲದೇ ಎಂಬ ಆಶ್ಚರ್ಯದ ಚಿಹ್ನೆ ಮೆದುಳಲ್ಲಿ ಮ್ಯಾರಥಾನ್ ಮಾಡುತ್ತದೆ. ಇಂತಹ ವಿಸ್ಮಯ ಹುಟ್ಟಿಸುವ ಒಂದು ಹುಳುವೇ ಸಗಣಿ ಹುಳು, ಸಗಣಿ ದುಂಬಿ ಅಥವಾ ಸಗಣಿ ಓಡುಹುಳು.
ಗ್ರಾಮೀಣ ಪ್ರದೇಶದ ಜನ ಹಾಗೂ ಅರಣ್ಯಗಳಲ್ಲಿ ಏನೋ ಕಳೆದುಕೊಂಡವರAತೆ ಹುಡುಕಾಡುತ್ತಾ ಸುತ್ತಾಡುವ ಸಂಶೋಧಕರಿಗೆ ಈ ಸಗಣಿ ಹುಳುಗಳು ತುಂಬಾ ಹತ್ತಿರದಿಂದಲೇ ಪರಿಚಯ. ಹಳ್ಳಿಯ ರಸ್ತೆಗಳಲ್ಲಿ ಹಾಗೂ ಕಾನನದ ಕಾಲು ಹಾದಿಗಳಲ್ಲಿ ಪ್ರಾಣಿಗಳು ಹಾಕಿ ಹೋದ ಸಗಣಿಯತ್ತ ಹಾಗೇ ಒಮ್ಮೆ ಕಣ್ಣು ಹಾಯಿಸಿದರೂ ಸಾಕು ಇವುಗಳ ಚಲನ ವಲನ ಕಾಣುತ್ತದೆ. ಅರ್ಧ ಇಂಚಿಗಿAತಲೂ ಕಡಿಮೆ ಗಾತ್ರದ ಈ ಹುಳುಗಳು ತಮಗಿಂತಲೂ ದೊಡ್ಡದಾದ ಸಗಣಿಯ ಉಂಡೆಗಳನ್ನು ಮಾಡಿ ಉರುಳಿಸಿಕೊಂಡು ಹೋಗುವುದನ್ನು ನೋಡಿದರೆ ಅಚ್ಚರಿ ಆಗದೆ ಇರದು. ಚಿಕ್ಕಂದಿನಲ್ಲಿ ಗೆಳೆಯರೆಲ್ಲರೂ ಈ ಶ್ರಮಜೀವಿ ಸಗಣಿ ಹುಳುವಿನ ಕೆಲಸ ಕಾರ್ಯಗಳನ್ನು ನೋಡುತ್ತಾ ಅರ್ಧ ದಿನವನ್ನೇ ಸವೆಸಿದ್ದಿದೆ. ಹೀಗೆ ನೋಡುತ್ತಾ ಕುಳಿತಾಗ, ಈ ಹುಳು ಏಕೆ ಸಗಣಿಯ ಉಂಡೆ ಮಾಡುತ್ತದೆ? ಆ ಉಂಡೆಯನ್ನ ಉರುಳಿಸಿಕೊಂಡು ಎಲ್ಲಿಗೆ ಹೋಗುತ್ತದೆ? ಮತ್ತದು ಆ ಸಗಣಿಯನ್ನು ಏನು ಮಾಡುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿದ್ದವು. ಆಗೆಲ್ಲಾ ಇಂತಹ ದೊಡ್ಡ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಾಮರ್ಥ್ಯ, ವ್ಯವಧಾನ ಎರಡೂ ನಮ್ಮಲ್ಲಿ ಇರಲಿಲ್ಲ. ಆದರೆ ದಿನ ಕಳೆದಂತೆ ಈ ಹುಳುಗಳ ಬಗ್ಗೆ ಅಲ್ಲಿ-ಇಲ್ಲಿ ಸಿಕ್ಕ ಮಾಹಿತಿಯನ್ನು ಓದಿ ತಿಳಿದುಕೊಂಡಾಗ ಅಚ್ಚರಿ ಆಗದೇ ಇರಲಿಲ್ಲ.
ಸಗಣಿ ಉಂಡೆ ಏನು ಮಾಡುತ್ತೆ?
ಸಗಣಿ ಹುಳುಗಳನ್ನು ನೋಡಿದಾಗ ಮೂಡುವ ಪ್ರಶ್ನೆ ಈ ಜೀವಿ ಸಗಣಿ ಉಂಡೆಯನ್ನು ಏನು ಮಾಡುತ್ತೆ? ಸಗಣಿ ಈ ಹುಳುವಿನ ಆಹಾರ. ತನಗಿಂತಲೂ ಹಲವುಪಟ್ಟು ದೊಡ್ಡ ಗಾತ್ರದ ಉಂಡೆಗಳನ್ನು ಮಾಡಿ, ಕಾಲುಗಳ ಸಹಾಯದಿಂದ ಉರುಳಿಸಿಕೊಂಡು ಹೋಗುವ ಈ ಹುಳುಗಳು ಅದನ್ನು ತಾವೇ ಕೊರೆದ ಸುರಂಗ ರೂಪದ ತಮ್ಮ ಮನೆಯೊಳಗೆ ಕೊಂಡೊಯ್ಯುತ್ತವೆ. ಅಲ್ಲಿ ಈ ಉಂಡೆಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಹಸಿವಾದಾಗ ಸೇವಿಸುತ್ತವೆ. ತಮ್ಮ ಮರಿಗಳಿಗೂ ತಿನ್ನಿಸುತ್ತವೆ. ಜಗತ್ತಿನಾದ್ಯಂತ ಸಗಣಿ ದುಂಬಿಯ ಆರು ಸಾವಿರ ಪ್ರಭೇದಗಳಿವೆ. ಈ ಪೈಕಿ ಕೆಲವು ಪ್ರಜಾತಿಯ ಸಗಣಿ ಹುಳುಗಳು, ತಮ್ಮ ಗೂಡಿನಿಂದ ಸಗಣಿ ಗುಡ್ಡೆವರೆಗೂ ಒಂದು ಸುರಂಗ ಕೊರೆದು, ನೆಲದಡಿಯಲ್ಲೇ ಅಲ್ಲಿಂದಿಲ್ಲಿಗೆ ಓಡಾಡುತ್ತವೆ. ಕೆಲವು ಸೋಮಾರಿ ದುಂಬಿಗಳು ಸಗಣಿ ಗುಂಪೆಯಲ್ಲೇ ತಿಂದುAಡು ಮಲಗುತ್ತವೆ.
ಸಗಣಿಯಲ್ಲಿರುವ ಬೀಜಗಳ ಪ್ರಸರಣ ಇವುಗಳಿಂದಾಗುತ್ತದೆ. ಹೀಗಾಗಿ ಇವುಗಳು ಇರುವ ಅರಣ್ಯಗಳಲ್ಲಿ, ತೋಟಗಳಲ್ಲಿ ಮರಗಳ ಮತ್ತು ಗಿಡಗಳ ಬೀಜ ಪ್ರಸರಣ ಯಶಸ್ವಿಯಾಗಿ ಆಗುತ್ತದೆ. ಸಗಣಿ ಹುಳುಗಳು ಎಂದಿಗೂ ನಮ್ಮನ್ನು ಬೆರಗುಗೊಳಿಸುತ್ತಲೇ ಬಂದಿವೆ. ಸಗಣಿಯನ್ನು ಉಂಡೆ ಮಾಡುವ ಅವುಗಳ ಕಲೆ, ತಮಗಿಂತಲೂ ದೊಡ್ಡದಾದ ಉಂಡೆಗಳನ್ನು, ಬಹು ದೂರದವರೆಗೆ ಉರುಳಿಸಿಕೊಂಡು ಹೋಗುವ ಜಾಣತನ ನೋಡುತ್ತಿದ್ದರೆ ಯಾರಿಗಾದರೂ ಅಚ್ಚರಿ ಆಗದೆ ಇರದು.
ಸಗಣಿಯಲ್ಲೇ ಸಂತಾನೋತ್ಪತ್ತಿ
ಕೆಲವೊಮ್ಮೆ ಗಂಡು-ಹೆಣ್ಣು ಹುಳುಗಳೆರಡೂ ಒಟ್ಟಾಗಿ ಸಗಣಿಯನ್ನು ಒಂದು ಉಂಡೆ ಮಾಡಿ ಉರುಳಿಸಿಕೊಂಡು ಹೋಗುತ್ತವೆ. ಹೀಗೆ ಹೋಗುವ ಮಾರ್ಗ ಮಧ್ಯೆ ಸ್ವಲ್ಪ ಮೆತ್ತಗಿನ ನೆಲ ಸಕ್ಕಿತೆಂದರೆ ಅಲ್ಲೇ ಉಂಡೆಯನ್ನು ಹೂಳಲು ಗುಂಡಿ ತೋಡಿ, ಅಲ್ಲಿಯೇ ಗಂಡು-ಹೆಣ್ಣು ಎರಡೂ ಕೂಡುತ್ತವೆ. ಬಳಿಕ ಹೆಣ್ಣು ಹುಳು ಸಗಣಿ ಉಂಡೆಯಲ್ಲೇ ಮೊಟ್ಟೆ ಇರಿಸುತ್ತದೆ. ಕೆಲವು ಪ್ರಭೇದಗಳಲ್ಲಿ ಈ ಹಂತದಲ್ಲಿ ಎರಡೂ ಹುಳುಗಳು ಅಲ್ಲಿಂದ ನಿರ್ಗಮಿಸಿದರೆ, ಇನ್ನೂ ಕೆಲವು ಪ್ರಭೇದಗಳಲ್ಲಿ ಗಂಡು-ಹೆಣ್ಣು ಹುಳುಗಳು ಅಲ್ಲೇ ಇದ್ದು ಮೊಟ್ಟೆ-ಮರಿಗಳ ಕಾವಲು ಕಾಯುತ್ತವೆ.
ಅತ್ಯಂತ ಬುದ್ಧಿವಂತ ಕೀಟ
ಅವರೆ ಕಾಳಿನಷ್ಟು ಚಿಕ್ಕದಾಗಿರುವ ಸಗಣಿ ಹುಳುವಿನ, ರಾಗಿ ಕಾಳಿನಷ್ಟು ಸಣ್ಣ ಮೆದುಳು ಅದೆಷ್ಟು ಕೆಲಸ ಮಾಡುತ್ತದೆಂದರೆ, ಅದರ ಕೆಲಸಗಳನ್ನು ಕಂಡ ಕೀಟ ಶಾಸ್ತçಜ್ಞರು ಅದರ ಮೆದುಳಿನ ಮೇಲೇ ಅಧ್ಯಯನ ನಡೆಸಿದ್ದಾರೆ. ಮೂರು ಆಯಾಮಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಕೀಟ, ಆಹಾರ ಹುಡುಕುತ್ತಾ ನೇರವಾಗಿ ಹೋಗುವುದಿಲ್ಲ. ಆದರೆ, ಅದು ಆಹಾರ ಸಿಕ್ಕ ಸ್ಥಳದಿಂದ ತನ್ನ ವಾಸಸ್ಥಾನಕ್ಕೆ ಮರಳುವಾಗ ನೇರವಾದ ಹಾಗೂ ಅತಿ ಹತ್ತಿರದ ಹಾದಿಯನ್ನು ಕಂಡುಕೊಳ್ಳುತ್ತದೆ. ಕೀಟಗಳು ತಾವು ನಡೆದ ದಿಕ್ಕು, ತೆಗೆದುಕೊಂಡ ತಿರುವುಗಳು, ತಿರುವಿನಿಂದ ತಿರುವಿಗೆ ಇರುವ ದೂರ ಸೇರಿ ಎಲ್ಲ ಅಂಶಗಳನ್ನು ಲೆಕ್ಕ ಹಾಕುತ್ತವಂತೆ. ವಿಶೇಷವೆಂದರೆ ಅವು ಈ ಲೆಕ್ಕಾಚಾರವನ್ನು ಪಯಣದುದ್ದಕ್ಕೂ ಮಾಡುತ್ತಲೇ ಇರುತ್ತವೆ. ಹೀಗಾಗಿ ತಲೆಯಲ್ಲೇ ನೇರ ಮತ್ತು ಸಮೀಪದ ಹಾದಿಯ ನಕ್ಷೆಯೊಂದನ್ನು ಹಾಕಿಕೊಂಡು ಸಗಣಿ ಉಂಡೆಯೊAದಿಗೆ ಮರಳುತ್ತವೆ. ಕೀಟಗಳ ಈ ಟ್ರಿಗ್ನಾಮೆಟರಿ ಜ್ಞಾನವನ್ನು ಊಹಿಸುವುದೂ ಅಸಾಧ್ಯ.
ಪುರಾಣಗಳಲ್ಲೂ ಪ್ರಸಿದ್ಧ
ಸಗಣಿ ಹುಳುಗಳನ್ನು ದೇವರು ಎಂದು ಕರೆದವರೂ ಇದ್ದಾರೆ. ಹಲವಾರು ಪುರಾತನ ನಾಗರಿಕತೆಗಳ ಪುರಾಣಗಳಲ್ಲಿ ಈ ಸಗಣಿ ದುಂಬಿಗಳ ಉಲ್ಲೇಖವಿದೆ. ಕಾಂಗೋದ ಬುಷಾಂಗೋ ಜನಾಂಗ, ಕೊಲಂಬಿಯಾದ ಚಾಚಾ ಇಂಡಿಯನ್ನರು, ಬೊಲಿವಿಯಾದ ರೆಡ್ ಇಂಡಿಯನ್ನರು, ಸುಮಾತ್ರಾದ ತೋಬಾ ಪಂಗಡ, ಚೀನಾದ ತಾಓ ಕಥೆಗಳು, ಗ್ರೀಕ್ ಪುರಾಣದಲ್ಲಿನ ಜಿಯೂಸ್ ಮತ್ತು ಒಲಿಂಪಸ್ ದೊರೆಗಳ ಕಥೆಗಳಲ್ಲಿ ಸಗಣಿ ದುಂಬಿಗಳ ಬಗ್ಗೆ ಪ್ರಸ್ತಾಪವಿದೆ. ಈಜಿಪ್ಟಿನ ಪುರಾಣಗಳಲ್ಲಿ ಇವುಗಳಿಗೆ ಅಗ್ರ ಸ್ಥಾನ ನೀಡಲಾಗಿದೆ. ಅಲ್ಲಿ ಇವುಗಳನ್ನು ಹುಟ್ಟು, ಸಾವು, ಪುನರ್ಜನ್ಮ, ಸೂರ್ಯನ ಶಕ್ತಿ ಮುಂತಾದವುಗಳ ಜೊತೆಗೆ ಜೋಡಿಸಿ, ದೇವರಂತೆ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ, ಸಮಾಧಿಗಳಲ್ಲಿ, ಶವ ಪೆಟ್ಟಿಗೆಗಳಲ್ಲಿ ಇವನ್ನು ಇಟ್ಟು ಹೂಳಲಾಗುತ್ತದೆ.
Share your comments