1. ಅಗ್ರಿಪಿಡಿಯಾ

ಮುಖ್ಯ ಹೂವುಗಳ ಕೃಷಿಯಲ್ಲಿ ಮಾಡುವ ವಿಶೇಷ ಬೇಸಾಯ ಕ್ರಮಗಳು

ಹೂವಿನ ಗಿಡಗಳನ್ನು ಹಸಿರು ಮನೆಯಲ್ಲಿ ಬೆಳೆಯುವುದರಿಂದ ಸಿಗುವ ಲಾಭವೆಂದರೆ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಹೂವುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಬೆಳೆಯುವುದು, ಈ ಅಂಶಗಳನ್ನು ವಿವಿಧ ರೀತಿಯ ಮತ್ತು ವಿವಿಧ ಹೂವಿನ ಗಿಡಗಳಲ್ಲಿ ವಿಶೇಷ ಬೇಸಾಯ ಕ್ರಮಗಳಿಂದ ಪಡೆಯಬಹುದು.

ಬೆಳೆ ನಿಯಂತ್ರಣ:- ಹೂವಿನ ಬೆಳೆಗಳಲ್ಲಿ ಗುಣಮಟ್ಟದ ಮತ್ತು ನಿಯಮಿತವಾಗಿ ಹೂವುಗಳನ್ನು ಪಡೆಯಲು ಗಿಡಗಳ ಬೆಳೆವಣಿಗೆಯನ್ನು ನಿಯಂತ್ರಣ ಮಾಡುವುದು ಮುಖ್ಯ ಪಾತ್ರವನ್ನು ವಹಿಸುತ್ತದೆ ಇದನ್ನು ಮಾಡಲು ಹಲವು ವಿಧಾನಗಳಿವೆ ಅವುಗಳೆಂದರೆ, ಬೆಳಕಿನ ಸಮಯ ನಿಯಂತ್ರಿಸುವುದು, ಸಸ್ಯದ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ರಾಸಾಯನಿಕಗಳನ್ನು ಬಳಸುವುದು, ಚಾಟನಿ ಮಾಡುವುದು, ಕುಡಿ ಚಿವುಟುವುದು, ತಾಯಿಗಿಡದ ಪಕ್ಕದಲ್ಲಿ ಬರುವ ಮರಿಗಿಡಗಳನ್ನು ತೆಗೆಯುವುದು ಇತ್ಯಾದಿ ಪ್ರತಿ ಹೂವಿನ ಬೆಳೆಗಳಲ್ಲಿ ವಿವಿಧ ರೀತಿಯ ಬೆಳೆ ನಿಯಂತ್ರಣ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಮಾಡುವುದರಿಂದ ಹೂವಿನ ಇಳುವರಿಯನ್ನು ನಿಯಂತ್ರಿಸಿ ಮಾರುಕಟ್ಟೆಯಲ್ಲಿ ಉಂಟಾಗುವ ಹೆಚ್ಚುವರಿಯನ್ನು ತಗ್ಗಿಸಬಹುದು. ಈ ಎಲ್ಲಾ ನಿಯಂತ್ರಣ ಕ್ರಮಗಳಿಂದ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದಲ್ಲದೆ ಅತಿಯಾದ ಉತ್ಪನ್ನದಿಂದ ಉಂಟಾಗುವ ಮಾರುಕಟ್ಟೆಯ ತೊಂದರೆಯನ್ನು ತಗ್ಗಿಸಬಹುದು.

ಗುಲಾಬಿ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಆರಂಭಿಕ ಸಸ್ಯಾಭಿವೃದ್ಧಿ ಮತ್ತು ತಾಯಿ ರೆಂಬೆಯನ್ನು ಬಗ್ಗಿಸುವುದು (Bending):

ಕಸಿ ಮಾಡಿದ ಗುಲಾಬಿ ಗಿಡದಲ್ಲಿ ನಾಟಿ ಮಾಡಿದ ತಕ್ಷಣ ಹೂವು ಬಿಡಲು ಪ್ರಾರಂಬಿಸುತ್ತದೆ ಇದರಿಂದ ಗಿಡದ ಬೆಳವಣಿಗೆ ಕುಂಟಿತವಾಗುತ್ತದೆ. ಆದ್ದರಿಂದ ಮೊದಲು ಬಿಡುವ ಹೂವುಗಳನ್ನು ಮೊಗ್ಗಿನ ಹಂತದಲ್ಲಿ ಚಿವುಟುವುದರಿಂದ ಆ ಕಾಂಡದಲ್ಲಿ 2 ರಿಂದ 3 ಹೊಸ ಚಿಗುರು ರೆಂಬೆಗಳು ಬರುತ್ತದೆ ಮತ್ತು ಪ್ರತಿ ರೆಂಬೆಗಳ ತುದಿಯಲ್ಲಿ ಹೂವಿನ ಮೊಗ್ಗುಗಳನ್ನು ಕಾಣಬಹುದು. ಈ ಹಂತದವರೆಗೂ ಬೆಳವಣಿಗೆ ಹೊಂದಿದ ಗಿಡಗಳ ತಾಯಿ ಕಾಂಡವನ್ನು 2 ಹೇರುಮಡಿಗಳ ಮದ್ಯೆ ಖಾಲಿ ಜಾಗದ ಕಡೆಗೆ ನೆಲದವರೆಗೂ ಬಗ್ಗಿಸುವುದು.

ಗುಲಾಬಿ ಗಿಡದ ತಳಭಾಗದ ರೆಂಬೆಗಳು ಸಹ ಚಿಗುರೊಡೆದು ಗಿಡವು ದಟ್ಟವಾಗಿ ಮತ್ತು ಬೇರುಗಳು ಗಟ್ಟಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. ತಾಯಿ ಕಾಂಡವನ್ನು ಕಸಿಮಾಡಿದ ಭಾಗದಿಂದ 1 ಇಂಚು ಬಿಟ್ಟು, ತಾಯಿ ಕಾಂಡವನ್ನು ಬಗ್ಗಿಸುವುದು ವಾಡಿಕೆಯಲ್ಲಿದೆ. ನೆಲದಿಂದ ಬಂದಿರುವ ಗಟ್ಟಿಯಾದ ಚಿಗುರನ್ನು 5 ಜೋಡಿ ಎಲೆ ಇರುವ ಜಾಗಕ್ಕೆ ಕತ್ತರಿಸುವುದು ಅಥವಾ ನಾಟಿ ಮಾಡಿದ ಮಧ್ಯಮಗಾತ್ರದ ಚಿಗುರನ್ನು 2 ರಿಂದ 3 ಜೋಡಿ ಎಲೆ ಇರುವ ಜಾಗಕ್ಕೆ ಕತ್ತರಿಸುವುದು, ಹೊಸದಾಗಿ ಮರಿ ಕಂದುಗಳು ಬಂದಲ್ಲಿ ಅವುಗಳನ್ನು ಕತ್ತರಿಸುವುದು. ಬಗ್ಗಿಸಿದ ರೆಂಬೆಗಳಿAದ ಮೊಗ್ಗುಗಳೇನಾದರು ಬಂದಲ್ಲಿ ಅವುಗಳನ್ನು ತೆಗೆಯುವುದು. ಇಲ್ಲವಾದಲ್ಲಿ ಇದರಿಂದ ಹೇನು ಹುಳು ಮತ್ತು ಮೊಗ್ಗು ಕೊಳೆರೋಗ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ದುರ್ಬಲ ಮತ್ತು ಯಾವ ಕಾಂಡದಲ್ಲಿ ಮೊಗ್ಗು ಬರುವುದಿಲ್ಲವೋ ಅದನ್ನು ಬಗ್ಗಿಸಲು ಬಳಸಲಾಗುತ್ತದೆ.

ರೆಂಬೆ ಬಗ್ಗಿಸುವುದು ವರ್ಷ ವಿಡೀ ಮಾಡುವ ವಿಧಾನವಾಗಿದೆ, ಬೆಸಿಗೆಯಲ್ಲಿ ರೆಂಬೆ ಬಗ್ಗಿಸುವುದನ್ನು ಮಾಡಿದಲ್ಲಿ ಅದರಿಂದ ಹೇನು ಕೀಟದ ತೊಂದರೆ ಹೆಚ್ಚಾಗುತ್ತದೆ. ಬಗ್ಗಿಸುವಾಗ ರೆಂಬೆಯನ್ನು ಬಗ್ಗಿಸಬೇಕೇ ಹೊರತು ಮುರಿಯಬಾರದು ಮತ್ತು ಎಲೆಗಳು ಮಣ್ಣಿಗೆ ತಾಗಲು ಬಿಡಬಾರದು ಗುಲಾಬಿಯನ್ನು ಹಸಿರು ಮನೆಯಲ್ಲಿ ಬೆಳೆದಾಗ ರೆಂಬೆ ಬಗ್ಗಿ ಸಬೇಕಾಗುವುದಿಲ್ಲ. ಇದಕ್ಕಾಗಿ ಕೆಲವು ಹೂವು ಬಿಡದ ರೆಂಬೆಯನ್ನು ಗಿಡದಲ್ಲಿಯೆ ಉಳಿಸಿಕೊಳ್ಳುವುದು. ಇದರಿಂದ ಗಿಡದಲ್ಲಿ ದ್ಯುತಿ ಸಂಶ್ಲೇಷಣೆ, ನೀರು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.

  1. ಬೇರುಕಾಂಡದ ಮೇಲೆ ಬರುವ ಚಿಗುರುಗಳ ನಿಯಂತ್ರಣ:

ಕಣ್ಣು ಕಸಿ ಮಾಡಿದ ಕೆಳಗಡೆ ಬೇರು ಸಸ್ಯದ ಮೇಲೆ ಬರುವ ಎಲ್ಲಾ ಚಿಗುರುಗಳನ್ನು ಮೇಲಿಂದ ಮೇಲೆ ತಪ್ಪದೆ ಕತ್ತರಿಸುತ್ತಿರಬೇಕು ಇದರಿಂದ ಸುಧಾರಿತ ಇಚ್ಛಿತ ತಳಿಯ ಕವಲುಮಾತ್ರ ಬೆಳೆಯುವಂತಾಗುತ್ತದೆ.

  1. ತುದಿ ಚಿವುಟುವುದು:

ಸರಿಯಾದ ಸಮಯದಲ್ಲಿ ಮತ್ತು ಹಂತದಲ್ಲಿ ತುದಿ ಚಿವುಟುವುದರಿಂದ ಹೂವು ಬಿಡುವುದು ಸ್ವಲ್ಪ ವಿಳಂಬವಾದರು ಹೆಚ್ಚು ಕವಲುಗಳನ್ನು ಪಡೆಯುವಂತಾಗಿ ಉತ್ತಮ ಗುಣಮಟ್ಟದ ಹೂವನ್ನು ಪಡೆಯಬಹುದು.

  1. ಚಾಟನಿ (ಸವರುವಿಕೆ):

ಗುಲಾಬಿ ಗಿಡಗಳನ್ನು ಸವರುವುದರಿಂದ ಹೆಚ್ಚಿನ ಹೂವಿನ ಇಳುವರಿ, ಸಸ್ಯದಗಾತ್ರ ಮತ್ತು ಆಕಾರ, ನಿಯಂತ್ರಣ ಸಾಧ್ಯ. ಗಿಡಗಳನ್ನು ವರ್ಷದಲ್ಲಿ 2 ಬಾರಿ ಅಂದರೆ ಮೇ-ಜೂನ್ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಚಾಟನಿ ಮಾಡುವುದು ಸೂಕ್ತ, ಗಿಡಗಳನ್ನು ಸವರುವುದಕ್ಕೆ 1 ವಾರ ಮೊದಲು ಗಿಡಗಳಿಗೆ ನೀರುಣಿಸಬಾರದು, ಅಶಕ್ತ (ಹಳೇಯದಾದ) ಒಣಗಿದ ಹಾಗೂ ರೋಗ ಗ್ರಸ್ಥ ಕವಲುಗಳನ್ನು ಪೂರ್ಣವಾಗಿ ತೆಗೆದುಹಾಕಬೇಕು. ಪ್ರತಿ ಕವಲಿನಲ್ಲಿ 5 ರಿಂದ 8 ಕಣ್ಣುಗಳನ್ನು ಬಿಟ್ಟು ಅಥವಾ ನೆಲದಿಂದ 45 ರಿಂದ 60 ಸೆಂ.ಮಿ. ಬಿಟ್ಟು ಮೇಲ್ಬಾಗದ ಕವಲನ್ನು ಕತ್ತರಿಸಬೇಕು ಹೊಸದಾಗಿ ನಾಟಿಮಾಡಿದ ಗಿಡಗಳಲ್ಲಿ ತುದಿಯನ್ನು ಮಾತ್ರ ಸವರಬೇಕು. ಇದಲ್ಲದೆ ಗುಲಾಬಿ ಗಿಡಗಳನ್ನು ಮಾರುಕಟ್ಟೆ ಬೇಡಿಕೆಯನ್ನು ಗಮನಿಸಿ ವರ್ಷವಿಡೀ ಚಾಟನಿ ಮಾಡಿ ಹೂವುಗಳನ್ನು ಪಡೆಯಬಹುದು. ಚಾಟನಿ ಮಾಡಿದ 45 ರಿಂದ 60 ದಿನಗಳ ನಂತರ ಹೂವುಗಳು ದೊರೆಯುತ್ತವೆ.

  1. ಮೊಗ್ಗು ಚಿವುಟುವುದು:

ಹೂ ಬಿಡುವ ಕಾಂಡದ ಮೇಲೆ ಬರುವ ಮುಖ್ಯ ಮೊಗ್ಗನ್ನು ಹೊರತುಪಡಿಸಿ ಪಕ್ಕದಲ್ಲಿ ಬರುವ ಸಣ್ಣ ಮೊಗ್ಗುಗಳನ್ನು ತೆಗೆಯುತ್ತಿರಬೇಕು ಇದರಿಂದ ಉತ್ತಮ ಗುಣಮಟ್ಟದ ಹೂ ದಂಟು ಮತ್ತು ಹೂ ಪಡೆಯಲು ಸಾಧ್ಯ.

  1. ಮೊಗ್ಗಿಗೆ ಕ್ಯಾಪ್(Bud capping)) ಹಾಕುವುದು:

ಮೊಗ್ಗು ವಿಕಾರವವಾಗಿ ಬೆಳೆಯದಂತೆ ಬಟಾಣಿಗಾತ್ರ ಇರುವಾಗ ಮಾರುಕಟ್ಟೆಯಲ್ಲಿ ಸಿಗುವ ಹಿಗ್ಗುವಗುಣ ಹೊಂದಿರುವ ಮೊಗ್ಗು ಕ್ಯಾಪ್‌ಗಳನ್ನು ಹಾಕಬೇಕು ಇದರಿಂದ ಮೊಗ್ಗುಗಳು ಉತ್ತಮಗಾತ್ರ ಮತ್ತು ಆಕಾರವನ್ನು ಪಡೆಯುತ್ತದೆ.

ಸೇವಂತಿಗೆ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಕುಡಿ ಚಿವುಟುವುದು (Pinching):

ಸೇವಂತಿಗೆ ಗಿಡವನ್ನು ಮೊದಲು ನಾಟಿ ಮಾಡಿದಾಗ ಗಿಡವು ಎತ್ತರವಾಗಿ ನೇರವಾಗಿ ಬೆಳೆದು ಕಾಂಡಗಳ ಸಂಖ್ಯೆಯು ಕಡಿಮೆ ಇರುತ್ತದೆ. ಇದನ್ನು ತಪ್ಪಿಸಲು ಸೇವಂತಿಗೆ ಗಿಡದ 1.5 ಸೆಂ.ಮಿ. ನಿಂದ 3 ಸೆಂ. ಮಿಟರ್‌ವರೆಗೂ ಇರುವ ಮೃದುಕಾಂಡವನ್ನು ಚಿವುಟುವುದರಿಂದ ಮರಿ ಕಾಂಡಗಳ ಸಂಖ್ಯೆಯೂ ಹೆಚ್ಚಾಗಿ ಪ್ರತಿಕಾಂಡದ ತುದಿಯಲ್ಲೂ ಹೂವುಗಳನ್ನು ಪಡೆಯಬಹುದು ಹಾಗೂ ಪರೋಕ್ಷವಾಗಿ ಹೂವು ಬಿಡುವ ದಿನಗಳನ್ನು ನಿಯಂತ್ರಿಸಬಹುದು ಮತ್ತು ಹೂವಿನ ಗುಣಮಟ್ಟವನ್ನು ಸಹ ಹೆಚ್ಚಿಸಬಹುದು.

ವಿವಿಧ ರೀತಿಯ ಕುಡಿ ಚಿವುಟುವಿಕೆ:

ಅ) ಮೃದು ಕಾಂಡವನ್ನು ಚಿವುಟುವುದು (Soft pinching): ಇದರಲ್ಲಿ ಸೇವಂತಿಗೆ ಸಸ್ಯದ ತುದಿಯ ಮೃದು ಭಾಗದ 2 ರಿಂದ 3 ಎಲೆಗಳ ಜೊತೆಗೆ ತುದಿ ಚಿವುಟುವುದು, ಈ ರೀತಿ ಮಾಡುವುದರಿಂದ ಗಿಡದ ಎತ್ತರವನ್ನು ಕಡಿಮೆ ಮಾಡಬಹುದು.

ಆ) ಗಟ್ಟಿ (ಬಲಿತ) ಕಾಂಡವನ್ನು ಚಿವುಟುವುದು (Hard pinching): ಇದರಲ್ಲಿ ಸೇವಂತಿಗೆ ಸಸ್ಯದ ಬಲಿತ ಕಾಂಡದವರೆಗೂ ಚಿವುಟುವುದು, ಇದರಿಂದ ಗಿಡದ ಎತ್ತರವನ್ನು ಕಡಿಮೆ ಮಾಡಬಹುದು ಹಾಗೂ ಗಿಡವು ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದನ್ನು ಸಾಮಾನ್ಯವಾಗಿ ಕುಂಡಗಳಲ್ಲಿ ಬೆಳೆಯಲು ಈ ಕ್ರಮವನ್ನು ಅನುಸರಿಸಲಾಗುವುದು.

  1. ಆಧಾರ ಒದಗಿಸುವುದು:

ಸಾಮಾನ್ಯವಾಗಿ ಸೇವಂತಿಗೆ ಗಿಡವು 75 ರಿಂದ 90 ಸೆಂ.ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಆದಾ ಕಾರಣ ಬಲಿತ ಕಾಂಡಗಳಿಗೆ ಆಧಾರ ಒದಗಿಸುವುದು ತುಂಬ ಅವಶ್ಯಕ.

ಆಧಾರ ಒದಗಿಸದಿದ್ದರೆ ಕಾಂಡಗಳು ಬಗ್ಗಿ ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಆಗುತ್ತದೆ. ಆಧಾರ ಒದಗಿಸಲು ವಿವಿಧ ಬಗೆಯ ಬಲೆಗಳು ಮತ್ತು ಬಿದರಿನ ಕೋಲುಗಳನ್ನು ಬಳಸಲಾಗುತ್ತದೆ.

  1. ಮರಿ ಕಂದುಗಳನ್ನು ತೆಗೆಯುವುದು:

ತಾಯಿಗಿಡದ ಪಕ್ಕದಲ್ಲಿ ಬರುವ ಮರಿ ಕಾಂಡಗಳನ್ನು ಆಗಿಂದ್ದಾಗ್ಗೆ ತೆಗೆಯಬೇಕು. ಇದರಿಂದಾಗಿ ತಾಯಿಗಿಡ ಚನ್ನಾಗಿ ಬೆಳೆದು ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಬಹುದು.

  1. ಬೆಳಕಿನ ಅವಧಿಯನ್ನು ನಿಯಂತ್ರಿಸುವುದು:

ಸೇವಂತಿಗೆಯನ್ನು ಹಗಲು ಚಿಕ್ಕದಿರುವ ದಿನಗಳಲ್ಲಿ (Oct-Dec) ಬೆಳೆಯಲು ಅತಿ ಸೂಕ್ತವಾದ ಹೂವಿನ ಬೆಳೆಯಾಗಿದೆ. ಇದಕ್ಕೆ ಹೆಚ್ಚು ಬೆಳಕನ್ನು ನೀಡಿದರೆ ಗಿಡ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಕತ್ತಲು ಹೆಚ್ಚು ನೀಡಿದರೆ, ಹೂ ಬಿಡಲು ಪ್ರಾರಂಭವಾಗುವುದು.

ಆದಾ ಕಾರಣ ಬೆಳಕನ್ನು ಕೃತಕವಾಗಿ ನಿಯಂತ್ರಿಸಿ, ಸೇವಂತಿಗೆಯನ್ನು ವರ್ಷಪೂರ್ತಿ ಬೆಳೆಯಬಹುದು, ಸಸಿಯನ್ನು ನಾಟಿ ಮಾಡಿದ ತಕ್ಷಣ ಬೆಳಕನ್ನು ಒದಗಿಸುವುದು, ಇದಕ್ಕಾಗಿ 60 ವ್ಯಾಟ್ ಬಲ್ಬುಗಳನ್ನು 4 ಅಡಿ ಅಂತರದಲ್ಲಿ ಮತ್ತು ಗಿಡದಿಂದ 2 ಅಡಿ ಎತ್ತರದಲ್ಲಿ ಅಳವಡಿಸಿ ದಿನಕ್ಕೆ 4 ಘಂಟೆಗಳ ಕಾಲ 4 ರಿಂದ 6 ವಾರಗಳವರೆಗೆ ಹೆಚ್ಚು ಬೆಳಕನ್ನು ನೀಡುವುದು. ಇದಾದ ನಂತರ ಗಿಡಗಳಲ್ಲಿ ಮೊಗ್ಗನ್ನು ಪಡೆಯಲು ಕೃತಕವಾಗಿ ಕತ್ತಲೆಯನ್ನು ಸೃಷ್ಟಿಸುವುದು ಇದಕ್ಕಾಗಿ ಗಿಡಗಳ ಮೇಲೆ 150 ಗೇಜ್ ಗಾತ್ರದ ಕಪ್ಪು ಪ್ಲಾಸ್ಟಿಕ್ ಹಾಳೆಯನ್ನು ಸಂಜೆ 4 ಅಥವಾ 5 ಘಂಟೆಯಿAದ ಬೆಳಿಗ್ಗೆ 7 ಘಂಟೆಯವರೆಗೂ ಹೊದಿಸುವುದು (4 ರಿಂದ 6 ವಾರಗಳವರೆಗೆ). ಇದರಿಂದ ಮೊಗ್ಗುಗಳು ದಪ್ಪವಾಗಿ ಹೂ ಅರಳಲು ಪ್ರಾರಂಭವಾಗುತ್ತದೆ.

  1. ಮೊಗ್ಗು ಚಿವುಟುವುದು:

ಉತ್ಕೃಷ್ಟ ಗುಣಮಟ್ಟದ (Standard type) ಹೂವು ಪಡೆಯಲು ಮುಖ್ಯ ಮೊಗ್ಗನ್ನು ಹೊರತುಪಡಿಸಿ ಪಕ್ಕದಲ್ಲಿ ಬರುವ ಮೊಗ್ಗುಗಳನ್ನು  ಬಟಾಣಿ ಗಾತ್ರ ಇರುವಾಗಲೇ ಚಿವುಟಬೇಕು. ಕಡಿಮೆ ಗುಣಮಟ್ಟದ (Spray type) ಹೆಚ್ಚು ಹೂವು ಪಡೆಯಲು ಮುಖ್ಯ ಮೊಗ್ಗನ್ನು ಚಿವುಟಬೇಕು ಮತ್ತು ಪಕ್ಕದಲ್ಲಿ ಬರುವ ಮೊಗ್ಗುಗಳನ್ನು ಬೆಳೆಯಲು ಬಿಡಬೇಕು.

ಕಾರ್ನೇಶನ್ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಕಾರ್ನೇಶನ್ ಹೂವಿನ ಗಿಡಗಳಿಗೆ ಆಧಾರ ಒದಗಿಸುವುದು (Netting):

 ಕಾರ್ನೇಶನ್ ಹೂವಿನಗಿಡದ ಕಾಂಡಗಳು ತುಂಬ ತೆಳ್ಳಗಿದ್ದು ಬೇಗ ಬಾಗುತ್ತವೆ. ಆದ್ದರಿಂದ ಅದನ್ನು ತಪ್ಪಿಸಲು ಆಧಾರ ಒದಗಿಸುವುದು ಅವಶ್ಯಕವಾಗಿದೆ. ಆಧಾರ ಒದಗಿಸಲು ಉತ್ತಮ ಗುಣಮಟ್ಟದ ಲೋಹದಿಂದ ನೇಯ್ದ ತಂತಿಯ ಬಲೆ ಅಥವಾ ನೈಲಾನ್ ಬಲೆಗಳನ್ನು ಉಪಯೋಗಿಸಬಹುದು. ಪ್ರತಿ ಏರು ಮಡಿಯ 2 ಮೀಟರ್ ಅಂತರದಲ್ಲಿ ಮರದ / ಕಬ್ಬಿಣದ ಅಥವಾ ಬಿದರಿನ ಕಂಬಗಳನ್ನು ನೆಟ್ಟು ಬಲೆಯನ್ನು ಏರುಮಡಿಯ ಉದ್ದಗಲಕ್ಕೂ ಹಾಸಿ ಕಂಬಗಳಿAದ ಆಧಾರ ಒದಗಿಸುವುದು. ಸಾಮಾನ್ಯವಾಗಿ 4 ರಿಂದ 5 ಪದರಗಳಲ್ಲಿ (ಬಲೆ) ಆಧಾರ ಒದಗಿಸಲಾಗುತ್ತದೆ ಮತ್ತು ಪ್ರತಿಪದರಗಳಲ್ಲೂ ಬಲೆಯ ಗಾತ್ರ ಬೇರೆ ಆಗುತ್ತದೆ.

ಮೊದಲನೆಯ ಪದರ 7.5 ಸೆಂ.ಮಿ * 7.5 ಸೆಂ.ಮಿ

ಎರಡನೇಯ ಪದರ 10 ಸೆಂ.ಮಿ * 10 ಸೆಂ.ಮಿ

ಮೂರನೆಯ ಪದರ 12.5 ಸೆಂ.ಮಿ * 12.5 ಸೆಂ.ಮಿ

ನಾಲ್ಕನೆಯ ಪದರ 15 ಸೆಂ.ಮಿ * 15 ಸೆಂ.ಮಿ

ಏರುಮಡಿಯ ಉದ್ದಗಲಕ್ಕೂ ಈ ಬಲೆಗಳನ್ನು ಹಾಸುವುದು ಮತ್ತು ಉತ್ತಮ ಆಧಾರ ಒದಗಿಸಲು ಬಲೆಯ ಗಾತ್ರವನ್ನು ಹೆಚ್ಚಿಸಲಾಗುತ್ತದೆ. ಕೆಳಪದರದ ಬಲೆಯು 7.5 ಸೆಂ.ಮಿ * 7.5 ಸೆಂ.ಮಿ ಅಗಲವಾಗಿದ್ದು ಅದನ್ನು ಗಿಡನಾಟಿ ಮಾಡುವ ಸಮಯದಲ್ಲಿ ಹಾಕುವುದು. ಗಿಡ ಮೇಲೆ ಬೆಳೆದಂತೆ ಅದರ ಮೇಲೆ 10 * 10ಸೆಂ.ಮಿ ಮತ್ತು 12.5 * 12.5 ಸೆಂ.ಮಿ ಅಗಲದ ಬಲೆಯನ್ನು ಹಾಕುವುದು. ಕಡೆಯದಾಗಿ ಮೇಲ್ಬಾಗದಲ್ಲಿ 15 ಸೆಂ.ಮಿ * 15 ಸೆಂ.ಮಿ ಅಗಲದ ಬಲೆಯನ್ನು ಉಪಯೋಗಿಸುವುದು.

  1. ತುದಿ ಚಿವುಟುವುದು:

ಗಿಡದ ಹರಡುವಿಕೆಗೆ ತಕ್ಕಂತೆ ಸಿಂಗಲ್ 11/2 ಮತ್ತು ಡಬಲ್ ಎಂಬ ಮೂರು ಬಗೆಯಲ್ಲಿ ತುದಿ ಚಿವುಟಲಾಗುತ್ತದೆ.

ಅ)       ತುದಿ ಚಿವುಟಲು ಬೆಳಗಿನ ಸಮಯ ಉತ್ತಮವಾಗಿದ್ದು ನಾಟಿ ಮಾಡಿದ 1 ತಿಂಗಳ ನಂತರ ಬುಡದಲ್ಲಿ ಹೆಚ್ಚಿನ ಕವಲುಗಳನ್ನು ಪಡೆಯಲು ಸಸಿಗಳಲ್ಲಿ 5 ರಿಂದ 6 ಗೇಣು ಬಿಟ್ಟು ತುದಿಚಿವುಟಬೇಕು ಇದಕ್ಕೆ ಸಿಂಗಲ್‌ಪಿಚ್ ಎಂದು ಕರೆಯುತ್ತಾರೆ. ಇದರಿಂದ ಬರುವ ಹೂವುಗಳ ಸಂಖ್ಯೆಯು ಕಡಿಮೆ ಇದ್ದು ಬೇಗ ಕಟಾವಿಗೆ ಬರುತ್ತವೆ.

ಆ)       ನಂತರ ಗಿಡದಲ್ಲಿ 4 ರಿಂದ 5 ಹೊಸ ಕವಲುಗಳು ಬರುತ್ತವೆ. ಈ ಕವಲುಗಳಲ್ಲಿ 2 ರಿಂದ 3 ಕವಲುಗಳನ್ನು ಪುನಃ ಚಿವುಟುವುದಕ್ಕೆ 11/2 ಪಿಂಚ್ ಎಂದು ಕರೆಯುತ್ತಾರೆ. ಇದರಿಂದ ಹೂವುಗಳ ಸಂಖ್ಯೆಯು ಹೆಚ್ಚಾಗಿ ವರ್ಷವಿಡೀ ಹೂವುಗಳನ್ನು ಪಡೆಯಬಹುದು.

ಇ)       ಈ ಮೊದಲು ಸಿಂಗಲ್ ಪಿಂಚ್ ನಿಂದ ಬಂದ ಎಲ್ಲಾ 5 ರಿಂದ 6 ಕವಲುಗಳ ತುದಿಯನ್ನು ಪುನಃ ಚಿವುಟಿದರೆ ಅದಕ್ಕೆ ಡಬಲ್ ಪಿಂಚ್ ಎಂದು ಕರೆಯುತ್ತಾರೆ. ಈ ರೀತಿ ತುದಿ ಚಿವುಟುವುದರಿಂದ ಹೂವುಗಳ ಸಂಖ್ಯೆ ಅಧಿಕವಾಗುತ್ತದೆ ಮತ್ತು ತಡವಾಗಿ ಕೊಯ್ಲಿಗೆ ಬರುತ್ತದೆ.

  1. ಮೊಗ್ಗು ಚಿವುಟುವುದು:

ಉತ್ಕೃಷ್ಟ ಗುಣಮಟ್ಟದ (Standard type) ಹೂವುಗಳನ್ನು ಪಡೆಯಲು ಮುಖ್ಯ ಮೊಗ್ಗನ್ನುವರತುಪಡಿಸಿ ಪಕ್ಕದಲ್ಲಿ ಬರುವ ಮೊಗ್ಗುಗಳನ್ನು ಬಟಾಣಿಗಾತ್ರ ಇರುವಾಗಲೇ ಚಿವುಟಬೇಕು. ಕಡಿಮೆ ಗುಣಮಟ್ಟದ (Spray type) ಹೆಚ್ಚು ಹೂವು ಪಡೆಯಲು ಮುಖ್ಯ ಮೊಗ್ಗನ್ನು ಚಿವುಟಬೇಕು ಮತ್ತು ಪಕ್ಕದಲ್ಲಿ ¨ರುವ ಮೊಗ್ಗುಗಳನ್ನು ಬೆಳೆಯಲು ಬಿಡಬೇಕು.

ಜರ್ಬೆರಾ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಮೊಗ್ಗು ಚಿವುಟುವುದು:

ಜರ್ಬೆರಾ ಹೂಗಿಡಗಳು ನಾಟಿ ಮಾಡಿದ 45 ದಿನಗಳಲ್ಲಿ ಹೂ ಬಿಡಲು ಪ್ರಾರಂಬಿಸುತ್ತವೆ. ಆದರೆ ಆ ಹೂಗಳು ಅತಿ ಕಡಿಮೆಗುಣ ಮಟ್ಟದ್ದಾಗಿರುತ್ತವೆ. ಆದಾ ಕಾರಣ ಮೊಗ್ಗು ಬಂದ ತಕ್ಷಣ ಚಿವುಟುವುದರಿಂದ ಗಿಡದ ಬೆಳವಣಿಗೆಯು ಉತ್ತಮವಾಗಿ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹೂಗಳನ್ನು ಪಡೆಯಬಹುದು.

  1. ಎಲೆ ಕತ್ತರಿಸುವುದು:

ಜರ್ಬೆರಾ ಗಿಡಗಳಲ್ಲಿ ಅಧಿಕ ಸಂಖ್ಯೆಯ ಎಲೆಗಳು ಬರುವುದರಿಂದ ನಿಯಮಿತವಾಗಿ ಹಳೆಯ ಎಲೆಗಳನ್ನು ಕತ್ತರಿಸುವುದರಿಂದ ರೋಗ ಮತ್ತು ಕೀಟಬಾದೆಯನ್ನು ಕಡಿಮೆ ಮಾಡಿ ಗಿಡಗಳಿಗೆ ಉತ್ತಮವಾಗಿ ಗಾಳಿಬೆಳಕು ಬೀಳುವಂತೆ ಮಾಡಬಹುದು ಮತ್ತು ಉತ್ತಮಗುಣ ಮಟ್ಟದ ಹೂಗಳನ್ನು ಸಹ ಪಡೆಯಬಹುದು.

  1. ಗಿಡಗಳ ತಳಭಾಗದ ಮಣ್ಣನ್ನು ಸಡಿಲಗೊಳಿಸುವುದು:

ಗಿಡದ ಸುತ್ತಲು ಮಣ್ಣನ್ನು ಸಡಿಲಗೊಳಿಸುವುದರಿಂದ ಗಿಡದ ಬೇರುಗಳಿಗೆ ಉತ್ತಮವಾಗಿ ಗಾಳಿ ದೊರೆಯುತ್ತದೆ. ಮತ್ತು ಕಳೆಯನ್ನು ತಡೆಗಟ್ಟಲು ಸಹ ಉಪಯೋಗವಾಗುತ್ತದೆ. ಈ ಪದ್ಧತಿಯನ್ನು ಸಾಮಾನ್ಯವಾಗಿ ತಿಂಗಳಿಗೆ 2 ಬಾರಿ ಮಾಡುವುದು ಉತ್ತಮ.

ಆಯಂಥುರಿಯಂ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಎಲೆ ತೆಗೆಯುವುದು:

ಎಲೆಯ ತಳಭಾಗದಿಂದ ಹೂವನ್ನು ಕೊಯ್ಲು ಮಾಡಿದ ನಂತರ ಹಳೆಯ ಎಲೆಗಳನ್ನು ತೆಗೆದು ಹಾಕಬೇಕು ಇದರಿಂದಾಗಿ ಸಸಿಗಳ ಮಧ್ಯೆ ಚೆನ್ನಾಗಿ ಗಾಳಿಯಾಡುವಂತಾಗಿ ಗಿಡದ ಬೆಳವಣಿಗೆ ಉತ್ತಮವಾಗುತ್ತದೆ. ಈ ರೀತಿ ತೆಗೆದ ಎಲೆಗಳನ್ನು ಅಲಂಕಾರಿಕ ಹೂ ಜೋಡಣೆಯಲ್ಲಿ ಉಪಯೋಗಿಸಬಹುದು. ಸಾಮಾನ್ಯವಾಗಿ ಪ್ರತಿಗಿಡದಲ್ಲಿ 3 ರಿಂದ 5 ಎಲೆಗಳನ್ನು ಬೆಳೆಯಲು ಬಿಡುವುದು ಮತ್ತು ಈ ಎಲೆಗಳ ಸಂಖ್ಯೆ ಗಿಡದ ಗಾತ್ರ ಮತ್ತು ಎಲೆಯು ಯಾವಾ ದಿಕ್ಕಿಗೆ ಮುಖಮಾಡಿದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

  1. ಮರಿ ಕಂದುಗಳನ್ನು ತಗೆಯುವುದು:-

ಸಸಿಗಳಿಂದ ನೈಸರ್ಗಿಕವಾಗಿ ಬರುವ ಸಣ್ಣ ಸಣ್ಣ ಕಂದುಗಳನ್ನು ತೆಗೆಯುವುದರಿಂದ ಗುಣಮಟ್ಟದ ಹೂವನ್ನು ಪಡೆಯಬಹುದು.

ಆರ್ಕಿಡ್ಸ್ ಹೂವಿನ ಕೃಷಿಯಲ್ಲಿ ಅನುಸರಿಸುವ ವಿಶೇಷ ಬೇಸಾಯ ಕ್ರಮಗಳು:-

  1. ಗಿಡವನ್ನು ಮರು ನೆಡುವುದು ಮತ್ತು ಕುಂಡಗಳಿಗೆ ಮರು ಮಾಧ್ಯಮ ಹೊದಗಿಸುವುದು:

ಸಾಮಾನ್ಯವಾಗಿ ಆರ್ಕಿಡ್ಸ್ಗಳಲ್ಲಿ ಸುಲಭವಾಗಿ ನೀರು ಬಸಿದು ಹೋಗುವಂತಾ ಮಾಧ್ಯಮಗಳಾದ ಇದ್ದಿಲು, ಇಟ್ಟಿಗೆ ಚುರು, ಜಲ್ಲಿಕಲ್ಲು ಮತ್ತು ತೆಂಗಿನ ಸಿಪ್ಪೆಯ ತುಂಡುಗಳನ್ನು ಬಳಸುವುದು ವಾಡಿಕೆ, ಮಾಧ್ಯಮದಲ್ಲಿ ಯಾವಾಗಲೂ ಈ ವಸ್ತುಗಳು ಸಣ್ಣ ತುಂಡುಗಳಾಗುತ್ತವೊ ಆಗ ಗಿಡಗಳಿಗೆ ಗಾಳಿಯಾಡಲು ಮತ್ತು ನೀರು ಬಸಿದು ಹೋಗಲು ತೊಂದರೆಯಾಗುತ್ತದೆ. ಆ ಸಮಯದಲ್ಲಿ ಕುಂಡಗಳಿಗೆ ಹೊಸದಾಗಿ ಮರು ಮಾಧ್ಯಮವನ್ನು ಒದಗಿಸುವುದು. ಈ ಪ್ರಕ್ರಿಯೆಯನ್ನು ಹೆಚ್ಚು ಎತ್ತರಕ್ಕೆ ಬೆಳೆದ ಗಿಡಗಳಲ್ಲಿಯೂ ಸಹ ಮಾಡಲಾಗುತ್ತದೆ. ಈ ಗಿಡವನ್ನು ಮರು ನೆಟ್ಟ ಸ್ವಲ್ಪ ದಿನಗಳವರೆಗೆ ನೆರಳಿನಲ್ಲಿ ಇಡುವುದು ಉತ್ತಮ.

  1. ನೆರಳು ಮತ್ತು ಗಾಳಿಯನ್ನು ನಿಯಂತ್ರಿಸುವುದು:

ಆರ್ಕಿಡ್ಸ್ಗಳಲ್ಲಿ ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಲು 75% ನೆರಳು ಅತಿ ಅವಶ್ಯಕ. ಹಸಿರು ಮನೆಯಲ್ಲಿ ಉತ್ತಮ ರೀತಿಯಲ್ಲಿ ಗಾಳಿಯಾಡಿದರೆ, ಗಿಡಗಳಲ್ಲಿ ಕಂಡು ಬರುವ ಶಿಲೀಂದ್ರ ಮತ್ತು ಬ್ಯಾಕ್ಟರೀಯಾಗಳನ್ನು ತಡೆಗಟ್ಟಬಹುದು. ಆರ್ಕಿಡ್ಸ್ಗಳಿಗೆ ಹೆಚ್ಚು ಇಂಗಾಲ ಡೈ ಆಕ್ಸೈಡ್ (2000-3000ppm) ಒದಗಿಸುವುದರಿಂದ ಗಿಡ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ.

ಲೇಖನ: ಹರೀಶ್ ಕುಮಾರ್, ಕೆ., ಚಂದ್ರಶೇಖರ್, ಎಸ್. ವೈ. ಮತ್ತು ಪ್ರದೀಪ್ ಕುಮಾರ್, ಸಿ. ಎಂ. ತೋಟಗಾರಿಕಾ ಮಹಾವಿದ್ಯಾಲಯ, ಮೂಡಿಗೆರೆ

Published On: 13 September 2021, 10:45 PM English Summary: Cultivation of main flowers Special Farming Practices

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.