1. ಅಗ್ರಿಪಿಡಿಯಾ

ಕೃಷಿ ಭೂಮಿಯಲ್ಲಿ ಪಾರ್ಥೇನಿಯಂ ಮಹಾಮಾರಿ; ಇದರ ನಿರ್ವಹಣೆ, ಹತೋಟಿ ಕ್ರಮಗಳು..

Kalmesh T
Kalmesh T
A Parthenium epidemic engulfed the agricultural land

ಪಾರ್ಥೇನಿಯಂ ಒಂದು ಮಹಾಮಾರಿ ವಿನಾಶಕಾರಿ ಕಳೆ ಸಸ್ಯ. ಇದನ್ನು ವೈಜ್ಞಾನಿಕವಾಗಿ ಪಾರ್ಥೇನಿಯಂ ಹಿಸ್ಟೆರೋಪೋರಸ್ ಎಂದು ಕರೆಯಲಾಗಿದ್ದು, ಇದು ಕೃಷಿ ಭೂಮಿಯಲ್ಲಿನ ದೊಡ್ಡ ಸಮಸ್ಯೆಯಾಗಿದೆ. ಇದರ ಹತೋಟಿ ಮತ್ತು ನಿರ್ವಹಣಾ ಕ್ರಮಗಳನ್ನು ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ದಿನೇಶ ಎಂ.ಎಸ್, ಡಾ. ಲತಾ ಆರ್. ಕುಲಕರ್ಣಿ ಮತ್ತು ಡಾ. ಸೌಜನ್ಯ ಎಸ್. ಅವರು ಈ ಲೇಖನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ: "ಆರೋಗ್ಯ ವೃದ್ದಿಗೆ-ಪೌಷ್ಠಿಕ ಕೈತೋಟ"

ಪಾರ್ಥೇನಿಯಂ ಒಂದು ಮಹಾಮಾರಿ ವಿನಾಶಕಾರಿ ಕಳೆ ಸಸ್ಯ. ಇದನ್ನು ವೈಜ್ಞಾನಿಕವಾಗಿ ಪಾರ್ಥೇನಿಯಂ ಹಿಸ್ಟೆರೋಪೋರಸ್ ಎಂದು ಕರೆಯಲಾಗಿದ್ದು, ಈ ಸಸ್ಯವು ಸೂರ್ಯಕಾಂತಿ ಅಥವಾ ಕಾಂಪೊಸಿಟೆ ಗುಂಪಿಗೆ ಸೇರಿದೆ.

ಇದನ್ನು ಕನ್ನಡದಲ್ಲಿ ಕಾಂಗ್ರೇಸ್ ಗಿಡ ಅಥವಾ ಗಜ್ಜರಿಕಸ ಎನ್ನುತ್ತಾರೆ. ಇತರ ಬಾಷೆಗಳಲ್ಲಿ ಚೇತಕ್ ಚಾಂದನಿ, ಓಸಾಡಿ ಮತ್ತು ಗಜ್ಜರ್‍ಗ್ರಾಸ್ ಎಂದು ಹೆಸರುವಾಸಿಯಾಗಿದೆ.

ಈ ವಿಷಪೂರಿತ ಕಳೆಗಿಡ ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಕೇವಲ ರಸ್ತೆ ಬದಿಯಲ್ಲಿ, ರೈಲ್ವೆ ಟ್ರಾಕ್‍ಗಳಲ್ಲಿ, ಖಾಲಿ ಜಾಗಗಳಲ್ಲಿ ಮಾತ್ರ ಸಮಸ್ಯೆಯಾಗಿತ್ತು ಆದರೆ, ಇಂದು ಲಭ್ಯವಿರುವ ಎಲ್ಲಾ ಖಾಲಿ ಜಾಗಗಳು, ಕೃಷಿ ಭೂಮಿಯನ್ನೂ ಸಹ ಆವರಿಸಿ  ವಿನಾಶಕಾರಿ ಮಹಾಮಾರಿ ಕಳೆಯಾಗಿ ಬೆಳೆದು ನಿಂತಿದೆ.

ಇದು ಮೂಲತಃ ಮೆಕ್ಸಿಕೊ ದೇಶಕ್ಕೆ ಸೇರಿದ ಸಸ್ಯವಾಗಿದ್ದು ಸ್ವಾತಂತ್ರ್ಯ ನಂತರ ಭಾರತ ದೇಶವು ಗೋಧಿಯನ್ನು ಆಮದು ಮಾಡಿಕೊಂಡಾಗ ಗೋಧಿ ಬೀಜಗಳೊಂದಿಗೆ ಇದು ಸಹ ನಮ್ಮ ದೇಶಕ್ಕೆ ಆಗಮನವಾಯಿತು.  ಇದನ್ನು ಪ್ರಥಮ ಬಾರಿಗೆ ಭಾರತದಲ್ಲಿ 1955ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ  ಗುರುತಿಸಲಾಯಿತು.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು!

ಪ್ರಸ್ತುತ  ಈ ಕಳೆಯು ನಮ್ಮ ದೇಶದಲ್ಲಿ ಸರಿಸುಮಾರು 35 ದಶಲಕ್ಷ ಹೇಕ್ಟರ್ ಪ್ರದೇಶವನ್ನು  ಆಕ್ರಮಿಸಿಕೊಂಡಿದ್ದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಗುಜಾರಾತ್‍ನಿಂದ ಅರುಣಾಚಲದವರೆಗೆ ವ್ಯಾಪಿಸಿದೆ. ಇದರ ಉಪಟಳವು ಮೊದಲಿಗೆ ರಸ್ತೆ ಬದಿಗಳು, ರೈಲೈಟ್ರಾಕ್‍ಗಳು ಖಾಲಿ ಜಾಗ, ಬಂಜರು ಭೂಮಿಗೆ ಸೀಮಿತವಾಗಿತ್ತು.

ಆದರೆ. ನಮ್ಮ ನಿರ್ಲಕ್ಷದಿಂದಾಗಿ ಇಂದು ಎಲ್ಲಾ ಕೃಷಿ ಜಮೀನುಗಳು, ತೋಟಗಳು, ನೀರಾವರಿ ಕಾಲುವೆಗಳು ಹಾಗೂ ಎಲ್ಲಾ ಸಮುದಾಯ ಜಾಗಗಳು ಮತ್ತು ಗ್ರಾಮದ ಎಲ್ಲಾ ಮನೆಗಳ ಸುತ್ತ ಹರಡಿ ಮಾನವನಿಗೆ ಚರ್ಮರೋಗ, ಉಸಿರಾಟದ ತೊಂದರೆ ಉಂಟು ಮಾಡುತ್ತಿರುವುದಲ್ಲದೇ, ಒಂದು ಕಾಲದಲ್ಲಿ  ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ಜಾನುವಾರುಗಳ ಮೇವಿಗೆ ತೊಂದರೆ ಉಂಟುಮಾಡಿದೆ ಮತ್ತು ಅವುಗಳಲ್ಲಿಯು ಸಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಹಳ್ಳಿಗಳಲ್ಲಿ ಮಕ್ಕಳು ಸ್ವಚ್ಚಂದವಾಗಿ ಆಟ ಆಡುತ್ತಿದ್ದ ಆಟದ ಮೈದಾನಗಳು, ಮನೆಸುತ್ತ ಮುತ್ತಲಿನ ಜಾಗಗಳು ಈ ಕಳೆಯಿಂದ ಆವೃತವಾಗಿರುವುದರಿಂದ ಮಕ್ಕಳು ಉಳ-ಉಪ್ಪಟೆಗಳ ಭಯದಿಂದ ಆಟವಾಡಲು ಭಯಪಡುವಂತಾಗಿದೆ. ಈ ಕಳೆಯು ಕೃಷಿ ಬೆಳೆಗಳ ಇಳುವರಿ ಕಡಿಮೆಮಾಡುವುದಲ್ಲದ್ದೇ, ಬೆಳೆಯ ಗುಣಮಟ್ಟ ಮತ್ತು ಮಣ್ಣಿನ ಫಲವತ್ತತೆಯನ್ನು ಕುಂಠಿತಗೊಳಿಸುತ್ತದೆ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಪಾರ್ಥೇನಿಯಂ ಕಳೆಯನ್ನು ಗುರುತಿಸುವುದು ಹೇಗೆ?

  • ಇದರ ಎಲೆಗಳು ಕ್ಯಾರೆಟ್(ಗಜ್ಜರಿ) ಎಲೆಗಳ ರೀತಿ ಇರುವುದರಿಂದ ಇದನ್ನು ಕ್ಯಾರೆಟ್ ಕಸ ಅಥವಾ ಗಜ್ಜರಿ ಕಸ ಎನ್ನುತ್ತಾರೆ.
  • ಇದು 1.5 ಯಿಂದ 2 ಮೀಟರ್ ಎತ್ತರ ಬೆಳೆಯುತ್ತದೆ.
  • ಕಾಂಡ ಮತ್ತು ಎಲೆಗಳ ಮೇಲೆ ಸೂಕ್ಮ ರೋಮಗಳು ಇರುತ್ತದೆ.
  • ಇದರ ಹೂವು ಪಂಚಭುಜಾಕೃತಿ ಹೊಂದಿದ್ದು ಬೆಳ್ಳಗಿರುತ್ತದೆ.
  • ಪ್ರತಿಗಿಡವು 5000ದಿಂದ 25000 ಬೀಜಗಳನ್ನು ಉತ್ಪಾದನೆ ಮಾಡುತ್ತದೆ.
  • ಇದರ ಬೀಜವು ಕಪ್ಪು ಬಣ್ಣದಿಂದ ಕೂಡಿದ್ದು ಹಗುರವಾಗಿರುತ್ತದೆ. ಗಾಳಿ, ನೀರು ಮತ್ತು ಮಾನವನ ಚಟುವಟಿಕೆಗಳು, ಪ್ರಾಣಿಗಳ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಹರಡುತ್ತದೆ.
  • ಇದು ಮೊಟಕುಗೊಂಡ ಕಾಂಡದಿಂದ ಮತ್ತೆ ಬೆಳೆಯುತ್ತದೆ.
  • ಈ ಕಳೆಗೆ “ಅಲಿಲೋಪತಿಗುಣ ಇರುವುದರಿಂದ ಇದರ ಸುತ್ತಹುಟ್ಟುವ ಬೇರೆ ಗಿಡಗಳನ್ನು ನಿಯಂತ್ರಿಸುತ್ತದೆ.
  • ಇದನ್ನು ನಿಯಂತ್ರಣದಲ್ಲಿಡಲು ಯಾವುದೇ ಸ್ವಾಭಾವಿಕವಾಗಿ ಹರಡುವ ಕೀಟ ಮತ್ತು ರೋಗಗಳು ಪರಿಣಾಮಕಾರಿಯಾಗಿಲ್ಲ.

ಈ ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದ ಪಾರ್ಥೇನಿಯಂ ಅತ್ಯಂತ ವಿನಾಶಾಕಾರಿ ಕಳೆಯಾಗಿ ಭಾರತವನ್ನೆಲ್ಲಾ ಆವರಿಸಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಪಾರ್ಥೇನಿಯಂನಿಂದಾಗುವ ಹಾನಿಕಾರಕ ಪರಿಣಾಮಗಳು

  • ಪಾರ್ಥೇನಿಯಂ ಒಂದು ವಿಷಕಾರಿ, ವಿನಾಶಕಾರಿ, ಸಮಸ್ಯಾತ್ಮಕ, ಅಲರ್ಜಿಕಾರಕ ಮತ್ತು ಅಕ್ರಮಣಕಾರಿ ಕಳೆ ಸಸ್ಯವಾಗಿದ್ದು ಮಾನವನಿಗೆ ಮತ್ತು ಜಾನುವಾರುಗಳ ಆಶ್ರಯಗಳಿಗೆ ತೊಂದರೆ ಉಂಟುಮಾಡುತ್ತಿದೆ.
  • ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಚರ್ಮರೋಗ, ಅಸ್ತಮಾ, ಮೂಗಿನ ಮತ್ತು ಶ್ವಾಸಕೋಶದ ಹಲವಾರು ರೋಗಗಳಿಗೆ ಪ್ರಮುಖ ಕಾರಣವಾಗಿ ಗುರುತಿಸಲಾಗಿದೆ.
  • ಜನ ಜಾನುವಾರುಗಳ ದಾರಿ, ಉದ್ಯಾನವನಗಳು, ತೋಟಗಳು ಮತ್ತು ಜನವಸತಿ ಜಾಗಗಳ ಸೌಂದರ್ಯವನ್ನು ಹಾಳುಮಾಡಿದೆ.
  • ಅರಣ್ಯದ ಜಾಗವನ್ನು ಆಕ್ರಮಿಸಿದ್ದು, ಜೀವ ವೈವಿದ್ಯತೆಯನ್ನು ಕುಂಠಿತಗೊಳಿಸಿದೆ.
  • ಈ ಕಳೆಯು ಬೆಳೆಯ ಇಳುವರಿ ಕುಂಠಿತಗೊಳಿಸವುದರ ಜೊತೆಗೆ ಗುಣಮಟ್ಟವನ್ನು ಕಡಿಮೆಮಾಡುತ್ತದೆ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಪಾರ್ಥೇನಿಯಂ ಕಳೆಯ ಸಮಗ್ರ ನಿರ್ವಹಣೆ:

ಅತ್ಯಂತ ವೇಗವಾಗಿ ಹರಡುತ್ತಿರುವ ಈ ಕಳೆಯನ್ನು ಯಾವುದೇ ಒಂದು ವಿಧಾನದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಕಷ್ಟಸಾಧ್ಯ. ಹಾಗಾಗಿ ಕಳೆಯ ಬೆಳವಣಿಗೆ ಹಂತ, ಅದು ಹರಡಿರುವ ಜಾಗ ಮತ್ತು ಕಾಲಕ್ಕೆ ಅನುಗುಣವಾಗಿ ಎರಡು  ಅಥವಾ ಎರಡಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಿ ಈ ಕಳೆಯನ್ನು ನಿರ್ವಹಣೆ ಮಾಡಲು ಸಮಗ್ರ ಕಳೆ ನಿರ್ವಹಣೆ ಅತ್ಯಂತ ಅವಶ್ಯಕ.

ಇದರಲ್ಲಿ ಮೊದಲನೆಯದು

1) ಕೈಯಿಂದ ಬೇರು ಸಮೇತ ಕೀಳುವುದು: ಮುಂಗಾರು ಹಂಗಾಮಿನಲ್ಲಿ ಮಣ್ಣಿನಲ್ಲಿ ತೇವಾಂಶವಿದ್ದಾಗ ಕೈಗೆ ಪ್ಲಾಸ್ಟಿಕ್ ಅಥವಾ ರಬ್ಬರ್ ಕೈಗವಸು ಧರಿಸಿ ಸಾಮೂಹಿಕವಾಗಿ ಕಿತ್ತು ನಾಶಪಡಿಸುವುದು. ಹೂ ಬಿಡುವುದಕ್ಕಿಂತ ಮುಂಚಿತವಾಗಿ ಕಿತ್ತು ಕಾಂಪೊಸ್ಟ್ ತಯಾರಿಕೆಯಲ್ಲಿ ಬಳಸಬಹುದು, ಹೂಬಿಟ್ಟ ನಂತರ ಕಿತ್ತುಹಾಕಿದರೆ ಬೆಂಕಿಯಲ್ಲಿ ಸುಡುವುದು ಒಳ್ಳೆಯದು.

2) ಬೆಳೆ ಪರಿವರ್ತನೆ: ಕೃಷಿ ಭೂಮಿಯಲ್ಲಿ ಈ ಕಳೆಯನ್ನು ನಿಯಂತ್ರಣದಲ್ಲಿಡಲು ಜೋಳ, ಡಯಂಚಾ ಮತ್ತು ಅಪ್ಸೆಣಬು ಬೆಳೆಯನ್ನು ದಟ್ಟವಾಗಿ ಬೆಳೆದು ಮೇವು ಅಥವಾ ಹಸಿರೆಲೆ ಗೊಬ್ಬರದ ಬೆಳೆಯಾಗಿ ಬಳಸುವುದು.

3) ರಾಸಾಯನಿಕಗಳಿಂದ ನಿರ್ವಹಣೆ: ಕೃಷಿಯೇತರ ಜಾಗದಲ್ಲಿ ಗ್ಲೈಪೋಸೇಟ್ ಕಳೆನಾಶಕವನ್ನು 10 ರಿಂದ 15ಮಿಲೀ ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸುವುದು. ಹುಲ್ಲು ಇರುವ ಪ್ರದೇಶದಲ್ಲಿ ಹುಲ್ಲಿಗೆ ಯಾವುದೇ ಹಾನಿಯಾಗದಂತೆ ಬರೀ ಪಾರ್ಥೇನಿಯಂ ನಿಯಂತ್ರಿಸಲು ಮೆಟ್ರಿಬುಜಿನ್ 3 ರಿಂದ 5 ಮಿಲೀ ಅಥವಾ 2,4-ಡಿ ಕಳೆನಾಶಕವನ್ನು 1.5 ಯಿಂದ 2.0 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು

4) ಜೈವಿಕ ನಿಯಂತ್ರಣ: ಜೈಗೊಗ್ರಾಮ ಬೈಕಾಲೊರೆಟಾ ಎಂಬ ಗುಲಗಂಜಿ ಹುಳವಿನ ಜಾತಿಗೆ ಸೇರಿದ ಕೀಟವನ್ನು ಈ ಕಳೆಯ ಜೈವಿಕ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಈ ಕೀಟದ ಎಳೆಮರಿಗಳು ಮತ್ತು ಪ್ರೌಡಕೀಟ ಗಿಡದ ಎಲೆಗಳನ್ನು ತಿಂದು ನಾಶಪಡಿಸುತ್ತದೆ. ಇದನ್ನು 1982 ರಲ್ಲಿ ಮೆಕ್ಸಿಕೊ ದೇಶದಿಂದ ಭಾರತಕ್ಕೆ ಆಮದು ಮಾಡಿಕೊಂಡು ನಮ್ಮ ದೇಶದ ಪರತಂತ್ರಜೀವಿ ಪ್ರಯೋಗಾ¯ಯಗಳಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆಮಾಡಲಾಗುತ್ತಿದೆ.

5) ಪಾರ್ಥೇನಿಯಂ ಕಳೆಯ ಬಳಕೆ: ಪಾರ್ಥೇನಿಯಂ ಕಳೆಯನ್ನು ಕಾಂಪೋಸ್ಟ್  ತಯಾರಿಸಲುಎರೆಗೊಬ್ಬರ ತಯಾರಿಸಲು ಬಳಸಬಹುದು, ಆದರೆ ಹೂ ಬಿಟ್ಟ, ಮಾಗಿದ ಕಳೆಯನ್ನು ಬಳಸದಂತೆ ಎಚ್ಚರ ವಹಿಸುವುದು ಅವಶ್ಯಕ.

ರೈತರಿಗೆ ಉಪಯುಕ್ತ ಸಲಹೆ:  ಬಹಳಷ್ಟು ರೈತರು ಪಾರ್ಥೇನಿಯಂ ಗಿಡವು ಬೆಳೆದು ಹೂಬಿಟ್ಟು ಒಣಗುವಾಗ ರೋಟೋವೆಟರ್ ಬಳಸಿ ಭೂಮಿಗೆ ಸೇರಿಸುತ್ತಾರೆ. ಇದು ಅತ್ಯಂತ ತಪ್ಪು ಕೆಲಸ. ಈ  ರೀತಿ ಮಾಡುವುದರಿಂದ ತಾವಾಗಿಯೆ ಲಕ್ಷಾಂತರ ಪಾರ್ಥೇನಿಯಂ ಬೀಜವನ್ನು ನಿಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ ಹಾಗೇ ಆಗುತ್ತದೆ ಮತ್ತು ಈ ಬೀಜಗಳು ಹಲವಾರು ವರ್ಷಗಳವರೆಗೆ ನಿಮ್ಮ ಜಮೀನಿನ ಮಣ್ಣಿನಲ್ಲಿ ಉಳಿದು ಮೊಳಕೆಯೊಡೆಯುವ ಸಾಮಥ್ರ್ಯ ಹೊಂದಿರುತ್ತವೆ.

ಈ ರೀತಿ ಮಾಡುವ ಬದಲು ಪಾರ್ಥೇನಿಯಂ ಹೂ ಬಿಡುವ ಮುಂಚೆ ಮಣ್ಣಿಗೆ ಸೇರಿಸಬಹುದು, ಕಿತ್ತು ಕಾಂಪೋಸ್ಟ್ ತಯಾರಿಸಬಹುದು ಅಥವಾ ಹೂ ಬಿಟ್ಟ ನಂತರ ಕಿತ್ತು ಅಥವಾ ಬ್ರಷ್‍ಕಟರ್‍ನಿಂದ ಕಟ್‍ಮಾಡಿ ಒಂದೆಡೆ ಸೇರಿಸಿ ಸುಡುವುದು ಅವಶ್ಯಕ.

ಪಾರ್ಥೇನಿಯಂ ಜಾಗೃತಿ ಸಪ್ತಾಹ: ಪಾರ್ಥೇನಿಯಂ ಕಳೆಯ ವಿನಾಶಕಾರಿ ವಿಷಯಗಳ ಬಗ್ಗೆ, ಇದರ ನಿರ್ವಹಣೆಯ ಕುರಿತು ಅರಿವು ಮೂಡಿಸಲು, ಭಾರತೀಯ ಕಳೆ ಸಂಶೋಧನಾ ಸಂಸ್ಥೆ, ಜಬ್ಬಲ್ಪುರ, ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ರಾಮನಗರವು ಪ್ರತಿ ವರ್ಷ ಆಗಸ್ಟ್ ತಿಂಗಳ  ದಿನಾಂಕ 16 ರಿಂದ 22ರವರೆಗೆ ಪಾರ್ಥೇನಿಯಂ ಜಾಗೃತಿ ಸಪ್ತಾಹ ಆಚರಿಸಿ ರೈತರು, ಶಾಲಾಮಕ್ಕಳು, ಸಂಘಸಂಸ್ಥೆಗಳು ಹಾಗೂ ನಾಗರೀಕರಲ್ಲಿ ಅರಿವು ಮೂಡಿಸುತ್ತಿದೆ.

ಡಾ. ದಿನೇಶ ಎಂ.ಎಸ್, ಡಾ. ಲತಾ ಆರ್. ಕುಲಕರ್ಣಿ ಮತ್ತು ಡಾ. ಸೌಜನ್ಯ ಎಸ್.

ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಮಾಗಡಿ, ರಾಮನಗರ ಜಿಲ್ಲೆ

Published On: 17 September 2022, 04:04 PM English Summary: A Parthenium epidemic engulfed the agricultural land

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.